ವಿಜಯಪುರ: ಕೆಲವೇ ದಿನಗಳ ಹಿಂದೆ ಕೊರೊನಾ ಈಗ ಬ್ಲ್ಯಾಕ್ ಫಂಗಸ್ ನಿಂದ ರೋಗಿಗಳಿಗೆ ಚಿಕಿತ್ಸಾ ತಾಣವಾಗಿದೆ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆ.
ಸರಕಾರ ನಿಗದಿ ಮಾಡಿದ ದರಕ್ಕಿಂತಲೂ ಶೇ. 70 ರಷ್ಟು ಕಡಿಮೆ ದರದಲ್ಲಿ ಮತ್ತು ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಕೊರೊನಾ ರೋಗಿಗಳಿಗೆ ವರದಾನವಾಗಿದ್ದ ಬಿ ಎಲ್ ಡಿ ಇ ಆಸ್ಪತ್ರೆ ಈಗ ಬ್ಲ್ಯಾಕ್ ಫಂಗಸ್ ರೋಗಿಗಳ ಪಾಲಿಗೂ ಚಿಕಿತ್ಸಾ ತಾಣವಾಗಿ ಮಾರ್ಪಟ್ಟಿದೆ.
ವಿಜಯಪುರ ನಗರದಲ್ಲಿರುವ ಮತ್ತು ಮಾಜಿ ಸಚಿವ ಹಾಗೂ ಹಾಲಿ ಬಬಲೇಶ್ವರ ಕಾಂಗ್ರೆಸ್ ಶಾಸಕರಾಗಿರುವ ಎಂ. ಬಿ. ಪಾಟೀಲ ಅಧ್ಯಕ್ಷತೆಯ ಬಿ ಎಲ್ ಡಿ ಇ ಸಂಸ್ಥೆಗೆ ಸೇರಿರುವ ಈ ಆಸ್ಪತ್ರೆಯಲ್ಲಿ ಈಗ ಬ್ಲ್ಯಾಕ್ ಫಂಗಸ್ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಪುರ ನಗರದಲ್ಲಿರುವ ಎಲ್ಲ ಆಸ್ಪತ್ರೆಗಳ ಪೈಕಿ ದೊಡ್ಡದಾದ ಆಸ್ಪತ್ರೆ ಇದಾಗಿದ್ದು, ಈವರೆಗೆ ವಿಜಯಪುರ ಜಿಲ್ಲೆಯಲ್ಲಿ 50 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರೇ ಅಧಿಕೃತವಾಗಿ ಹೇಳಿದ್ದಾರೆ.
ಈ ಮಧ್ಯೆ, ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗಾಗಿಯೇ ಈಗ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು, ಇಲ್ಲಿರುವ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ಹಂಗಾಮಿ ಉಪಕುಲಪತಿ ಮತ್ತು ಕಿವಿ, ಮೂಗು ಮತ್ತು ಗಂಟಲು ತಜ್ಞರಾಗಿರುವ ಡಾ. ಎಸ್. ಎನ್. ಮುಧೋಳ, ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಬಿ ಎಲ್ ಡಿ ಇ ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ. ಹೊನ್ನುಟಗಿ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜಾಧವ ಅವರ ಸಮಗ್ರ ಉಸ್ತುವಾರಿಯಲ್ಲಿ ಈಗ ಬ್ಲ್ಯಾಕ್ ಫಂಗಸ್ ರೋಗಿಗಳ ಪಾಲಿಗೂ ಚಿಕಿತ್ಸಾ ತಾಣವಾಗಿ ಮಾರ್ಪಟ್ಟಿದೆ.
ಕೊರೊನಾದಿಂದಾಗಿ ಇಮ್ಯುನಿಟಿ ಕಡಿಮೆಯಾಗಿ ಈ ಬ್ಲ್ಯಾಕ್ ಫಂಗಸ್ ಕಾಯಿಲೆ ಕಂಡು ಬರುತ್ತಿದ್ದು, ಬಿ ಎಲ್ ಡಿ ಈ ಆಸ್ಪತ್ರೆಯಲ್ಲಿ ಈಗ 25 ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗಾಗಿಯೇ ಪ್ರತ್ಯೇಕ ವಾರ್ಡ್ ಮಾಡಲಾಗಿದ್ದು, ಪ್ರತಿನಿತ್ಯ ನಾಲ್ಕೈದು ಜನರಿಗೆ ಶಸ್ತ್ರಚಿಕಿತ್ಸೆ ಮೂಲಕ ರೋಗ ಗುಣಪಡಿಸಲಾಗುತ್ತಿದೆ ಎಂದು ಕಿವಿ, ಮೂಗು ಮತ್ತು ಗಂಟಲು ತಜ್ಞೆ ಡಾ. ಲತಾದೇವಿ ತಿಳಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲ, ನೆರೆಯ ಕಲಬುರಗಿ, ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಗಳಿಂದ ಆಗಮಿಸಿರುವ ರೋಗಿಗಳೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಮೂರು ಜನ ಬ್ಲ್ಯಾಕ್ ಫಂಗಸ್ ರೋಗಿಗಳು ಗುಣಮುಖರಾಗಿ ಡಿಶ್ಚಾರ್ಜ್ ಆಗಿರುವುದು ಉಳಿದ ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಕಾರಣವಾಗಿದೆ.