ವಿಜಯಪುರ: ಕೊರೊನಾ 2ನೇ ಅಲೆ ತಡೆಗಟ್ಟಲು ವಿಜಯಪುರ ಪೊಲೀಸರು ತಮ್ಮ ಜೀವ ಪಣಕ್ಕಿಟ್ಟು ಹಗಲಿರುಳು ಶ್ರಮಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಆದರೆ, ಮತ್ತೋಂದೆಡೆ ಹೈವೆ ಪೆಟ್ರೋಲಿಂಗ್ ಪೊಲೀಸರು ವಿಜಯಪುರ ಪೊಲೀಸರ ಮಾನವನ್ನು ರಾಷ್ಟ್ರಾದ್ಯಂತ ಹರಾಜು ಹಾಕುವ ಮೂಲಕ ತಮ್ಮ ವೃತ್ತಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ.
ಈವರೆಗೆ ಸಾರ್ವಜನಿಕರು ಸಿಟ್ಟಾಗಿಯೇ ಗೊಣಗುತ್ತಿದ್ದ ವಿಜಯಪುರ ಜಿಲ್ಲೆಯ ಹೈವೆ ಪೆಟ್ರೋಲಿಂಗ್ ಪೊಲೀಸರ ಮಾನವನ್ನು ಉತ್ತರ ಭಾರತ ಲಾರಿ ಚಾಲಕರು ದೇಶಾದ್ಯಂತ ಹರಾಜು ಹಾಕುವ ಮೂಲಕ ಅವರ ಬಂಡವಾಳ ಬಯಲಿಗೆ ಎಳೆದಿದ್ದಾರೆ.
ಸಾರ್ವಜನಿಕರ ಸುರಕ್ಷತೆಗಾಗಿ ಮತ್ತು ಸುಗಮ ವಾಹನ ಸಂಚಾರ ಹಾಗೂ ಅಪಘಾತದಂಥ ಸಂದರ್ಭಗಳಲ್ಲಿ ತುರ್ತಾಗಿ ತೆರಳಿ ಸಹಾಯ ಮಾಡಲು ನಿಯೋಜಿಸಿದ್ದ ಹೈವೆ ಪೆಟ್ರೋಲಿಂಗ್ ಪೊಲೀಸರು ಕರ್ನಾಟಕವಷ್ಟೇ ಅಲ್ಲ ಬೇರೆ ರಾಜ್ಯಗಳ ವಾಹನಗಳನ್ನು ತಡೆದು ಸೂಕ್ತ ದಾಖಲಾತಿಗಳಿದ್ದರೂ ನಾನಾ ತಪ್ಪುಗಳನ್ನು ಹೇಳಿ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇದ್ದವು. ಆದರೆ, ಈ ಕುರಿತು ಯಾರೂ ದೂರು ನೀಡದ ಹಿನ್ನೆಲೆಯಲ್ಲಿ ವಿಜಯಪುರ ಹಿರಿಯ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿ ಹಾಕಿದಂತಾಗಿತ್ತು.
ಆದರೆ, ಈ ಹೈವೆ ಪೆಟ್ರೋಲಿಂಗ್ ಪೊಲೀಸರ ಬಂಡವಾಳವನ್ನು ಉತ್ತರ ಭಾರತ ಲಾರಿ ಚಾಲಕರು ಬಹಿರಂಗ ಮಾಡಿದ್ದಷ್ಟೇ ಅಲ್ಲ, ಇಡೀ ಕರ್ನಾಟಕದ ಪೊಲೀಸರ ಬಗ್ಗೆ ಇರುವ ಗೌರವವನ್ನು ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಈ ವಿಡಿಯೋವನ್ನು ತಂತಮ್ಮ ರಾಜ್ಯಗಳಲ್ಲಿರುವ ಸ್ನೇಹಿತರಿಗೂ ವಾಟ್ಸಾಪ್ ಮೂಲಕ ಹಾಕುವ ಮೂಲಕ ಆರಕ್ಷಕರ ಹಣಭಕ್ಷಕ ಕಾರ್ಯವನ್ನು ಬಹಿರಂಗವಾಗಿ ಹರಾಜು ಹಾಕಿದ್ದಾರೆ.
ಘಟನೆ ಹಿನ್ನೆಲೆ:
ವಿಜಯಪುರ ಜಿಲ್ಲೆಯ ವಿಜಯಪುರ-ಅಥಣಿ ರಸ್ತೆಯಲ್ಲಿ ಲಾಕಡೌನ್ ಹಿನ್ನೆಲೆಯಲ್ಲಿ ಗಸ್ತು(ಪೆಟ್ರೋಲಿಂಗ್) ಮಾಡುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಲಾರಿ ಚಾಲಕರಿಂದ ಹಣ ವಸೂಲಿಗಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಲಾರಿ ಚಾಲಕರು ಪೊಲೀಸರ ಇಂಟಸೆಪ್ಟರ್ ಕಾರಿನ ಎದುರು ಬಿದ್ದು ಉರುಳಾಡಿದ್ದರು.
ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಿಂದಿ ಭಾಷೆಯಲ್ಲಿ ಮಾತನಾಡಿದ ಲಾರಿ ಚಾಲಕರು ಪೊಲೀಸರು ಹಣ ಕೇಳಿ ತಮಗೆ ಕಿರುಕುಳ ನೀಡುತ್ತಿದ್ದಾರೆ. ನಮಗೆ ತಿನ್ನಲು ಊಟ ಸಿಗದ ಈ ಸಮಯದಲ್ಲಿ ಈ ರೀತಿ ಕಿರುಕುಳ ನೀಡಲಾಗುತ್ತಿದೆ. ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಖಾಕಿ ಬಟ್ಟೆ ಹಾಕಿಕೊಂಡು ಲೂಟಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪೊಲೀಸರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದರು. ಈ ಲಾರಿ ಚಾಲಕರು ತಮ್ಮ ಅಳಲು ತೋಡಿಕೊಂಡು ರಸ್ತೆಯಲ್ಲಿಯೇ ನೆಲದ ಮೇಲೆ ಬಿದ್ದು ಹೊರಳಾಡಿದ್ದರು. ಪೊಲೀಸ್ ವಾಹನದ ಎದುರು ಉರುಳಾಡಿದ ಲಾರಿ ಡ್ರೈವರ್ ಹೊರ ಹಾಕಿದ್ದ ಆಕ್ರೋಶ ವಿಡಿಯೋ ಭಾರಿ ವೈರಲ್ ಆಗಿತ್ತು.
ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿದ ಎಸ್ಪಿ
ಈ ಮಧ್ಯೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಈ ವಿಡಿಯೋದಲ್ಲಿದ್ದ ಡಿಎಆರ್ ವಿಭಾಗದ ಎ ಆರ್ ಎಸ್ ಐ ಯು. ಬಿ. ಚಿಗರೊಳ್ಳಿ ಮತ್ತು ತಿಕೋಟಾ ಪೊಲೀಸ್ ಠಾಣೆಯ ಎಎಸ್ಐ ಎಂ. ಎಸ್. ಪಾಲೀಕಾರ ಅವರನ್ನು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಅಮಾನತು ಮಾಡಿ ಆದೇಶ ಹೊರಡಿಸಿಸುವ ಮೂಲಕ ದಿಟ್ಟ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಪ್ರಕಟಣೆ ನೀಡಿರುವ ಅವರು, ಅಮಾನತು ಮಾಡಲಾದ ಇಬ್ಬರೂ ಅಧಿಕಾರಿಗಳಿಗೆ ವಿಜಯಪುರ-ಅಥಣಿ ಹೈವೆಯಲ್ಲಿ ಪೆಟ್ರೋಲಿಂಗ್ ಮಾಡಲು ಸೂಚಿಸಲಾಗಿತ್ತು. ಆದರೆ, ಲಾರಿಗಳನ್ನು ವಿನಾಕಾರಣ ನಿಲ್ಲಿಸಿ ಚಾಲಕರುಗಳಿಗೆ ತೊಂದರೆ ನೀಡಿ ಅವರಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳ ಇಲಾಖೆ ತನಿಖೆ ಬಾಕಿ ಇಟ್ಟು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಎಸ್ಪಿ ಅನುಪಮ ಅಗ್ರವಾಲ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಮೊನ್ನೆಯಷ್ಟೇ ರಾಜ್ಯ ಹೈಕೋರ್ಟ್ ರಾಜ್ಯ ಪೊಲೀಸರ ಕಾರ್ಯ ವೈಖರಿಯನ್ನು ಮೆಚ್ಚಿ ಕೊರೊನಾ ಸಂಕಷ್ಟ ಕಾಲದಲ್ಲಿಯೂ ಪೊಲೀಸರು ನಿಭಾಯಿಸುತ್ತಿರುವ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ, ಈಗ ಈ ಘಟನೆ ವಿಜಯಪುರ ಜಿಲ್ಲೆಯ ಪೊಲೀಸರ ಮಾನವನ್ನು ಹರಾಜು ಹಾಕಿದ್ದಂತೂ ಸುಳ್ಳಲ್ಲ.