ವಿಜಯಪುರ: ಗ್ರಾಮೀಣ ಭಾಗದಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ ಕೊರೊನಾ ಸೋಂಕಿನ ಲಕ್ಷಣವುಳ್ಳವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ವಿಜಯಪುರ ನಗರಕ್ಕಿಂತಲೂ ಗ್ರಾಮೀಣ ಭಾಗಕ್ಕೆ ಸೋಂಕು ಹೆಚ್ಚು ಹರಡಲಿದೆ ಎಂದು ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಮೇ 15 ರಂದು ನುಡಿದಿದ್ದ ಭವಿಷ್ಯ ಈಗ ನಿಜವಾಗುತ್ತಿದೆ.
ಏಕೆಂದರೆ, ಈವರೆಗೆ ವಿಜಯಪುರ ನಗರದಲ್ಲಿ ಶೇ. 80 ರಷ್ಟು ಕಂಡು ಬರುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಈಗ ಶೇ. 15 ರಿಂದ ಶೇ. 20ಕ್ಕೆ ಕಡಿಮೆಯಾಗಿದ್ದು, ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶೇ. 80 ರಷ್ಟು ಸೋಂಕಿತರು ಕಂಡು ಬರುತ್ತಿದ್ದಾರೆ. ಇದನ್ನು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರೇ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ರವಿವಾರದ ಕೊರೊನಾ ವರದಿಯಂತೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 229 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಈ ಕೇಸ್ ಗಳಲ್ಲಿ ವಿಜಯಪುರ ನಗರದಲ್ಲಿ ಕೇವಲ 22 ಜನರಿಗೆ ಸೋಂಕು ತಗುಲಿದೆ. ಆದರೆ
ವಿಜಯಪುರ ಗ್ರಾಮೀಣದಲ್ಲಿ 42. ಬಬಲೇಶ್ವರ ತಾಲೂಕಿನಲ್ಲಿ 7, ತಿಕೋಟಾ ತಾಲೂಕಿನಲ್ಲಿ 2, ಬಸವನ ಬಾಗೇವಾಡಿ ತಾಲೂಕಿನಲ್ಲಿ 24, ಕೊಲ್ಹಾರದಲ್ಲಿ 14, ನಿಡಗುಂದಿ ತಾಲೂಕಿನಲ್ಲಿ 13, ಇಂಡಿ ತಾಲೂಕಿನಲ್ಲಿ 26, ಚಡಚಣ ತಾಲೂಕಿನಲ್ಲಿ 11, ಸಿಂದಗಿ ತಾಲೂಕಿನಲ್ಲಿ 17, ದೇವರ ಹಿಪ್ಪರಗಿ ತಾಲೂಕಿನಲ್ಲಿ 5 ಮತ್ತು ಹೊರ ಜಿಲ್ಲೆಗಳಿಂದ ವಿಜಯಪುರ ಜಿಲ್ಲೆಗೆ ಬಂದಿರುವ 10 ಜನರಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದೆ.
ವಿಜಯಪುರ ಜಿಲ್ಲಾಡಳಿತದಿಂದ ಸೋಂಕು ನಿಯಂತ್ರಣಕ್ಕೆ ನಡೆದಿದೆ ಭರ್ಜರಿ ಕಾರ್ಯಾಚರಣೆ
ಈ ಮಧ್ಯೆ, ಮಾಜಿ ಸಚಿವ ಎಂ. ಬಿ. ಪಾಟೀಲ ಅವರು ಮೇ 15 ರಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ನೀಡಿದ ಸಲಹೆಗಳನ್ನೊಳಗೊಂಡ ಮನವಿ ಪತ್ರಕ್ಕೆ ಕೂಡಲೇ ಸ್ಪಂದಿಸಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಜಿ. ಪಂ. ಸಿಇಓ ಗೋವಿಂದ ರೆಡ್ಡಿ ಅವರು ಮೇ 16 ರಿಂದಲೇ ಪ್ರತಿಯೊಂದು ಗ್ರಾಮದಲ್ಲಿ ಮನೆ ಮನೆ ಸಮೀಕ್ಷೆ ಆರಂಭಿಸಿಯೇ ಬಿಟ್ಟಿದ್ದಾರೆ. ಈಗ ಆ ಕಾರ್ಯ ಭರದಿಂದ ಸಾಗಿದ್ದು, ಇನ್ನೆರಡು ದಿನಗಳಲ್ಲಿ ಸಮೀಕ್ಷೆ ಮುಗಿಯಲಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆಲಮಟ್ಟಿಯಲ್ಲಿ ತಿಳಿಸಿದ್ದಾರೆ.
ಮನೆ ಮನೆ ಸಮೀಕ್ಷೆಗಾಗಿ ಗ್ರಾಮ ಪಂಚಾಯಿತಿ ಕಾರ್ಯಪಡೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಈವರೆಗೆ ಸುಮಾರು 3000 ಜನರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಅವರಲ್ಲಿ ಕೆಲವರನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿ, ಹಲವರಿಗೆ ಕೊವಿಡ್ ಕೇರ್ ಸೆಂಟರ್ ಗಳಿಗೆ ಶಿಫ್ಟ್ ಮಾಡಲಾಗಿದ್ದು, ಸೋಂಕು ಹೆಚ್ಚಾಗಿರುವವರಿಗೆ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ, ವಾರದಲ್ಲಿ ಎರಡರಿಂದ ಮೂರು ಸಲ ನಾನಾ ಗ್ರಾಮಗಳಿಗೆ ತೆರಳಿರುವ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಜಿ. ಪಂ. ಸಿಇಓ ಗೋವಿಂದ ರೆಡ್ಡಿ ಗ್ರಾ. ಪಂ. ಗಳ ಕಾರ್ಯಪಡೆಗಳೊಂದಿಗೆ ಸಭೆ ನಡೆಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಿಗೂ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳು, ಅವುಗಳಿಗೆ ಬೇಕಿರುವ ಪರಿಹಾರಗಳನ್ನೂ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಆದರೆ, ಫಿಜಿಶಿಯನ್ ಮತ್ತು ಟೆಕ್ನಿಶಿಯನ್ ಗಳ ಕೊರತೆ ಜಿಲ್ಲಾಡಳಿತದ ವೇಗದ ಕೆಲಸಕ್ಕೂ ತೊಂದೆಯ ಉಂಟು ಮಾಡಿದ್ದು, ಲಭ್ಯವಿರುವ ಮಾನವ ಸಂಪನ್ಮೂಲ ಬಳಸಿಕೊಂಡು ಕೊರೊನಾ ಸೋಂಕಿತರಿಗೆ ಸಾಧ್ಯವಾದಷ್ಟು ಉತ್ತಮ ಸೇವೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಶಾಸಕ ಎಂ. ಬಿ. ಪಾಟೀಲ ಸಲಹೆ ನೀಡಿದ ತಕ್ಷಣವೇ ವಿಜಯಪುರ ಜಿಲ್ಲಾಡಳಿತ ಕಾರ್ಯೋನ್ಮುಖರಾಗಿರುವುದು ಈಗ ಕೊರೊನಾ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಂತಾಗಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಈಗ ಕೊರೊನಾ ಸೋಂಕಿತ ಗಂಭೀರ ಪ್ರಕರಣಗಲ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಆದರೆ, ಈ ಸೋಂಕು ಗ್ರಾಮೀಣ ಭಾಗದ ಮತ್ತಷ್ಟು ಪ್ರದೇಶಗಳಿಗೆ ಹರಡದಂತೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಅತೀ ಶೀಘ್ರದಲ್ಲಿ ವಿಜಯಪುರ ಜಿಲ್ಲೆ ಕೊರೊನಾ ಮುಕ್ತವಾಗಲಿ ಎಂದು ಬಸವ ನಾಡು ಆಶಿಸುತ್ತದೆ.