ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಈಗ ಜಿಲ್ಲೆಯಲ್ಲಿ ವಿಜಯಪುರ ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ ಎಂದು ತಿಳಿಸಿದರು.
ಈ ಮುಂಚೆ ವಿಜಯಪುರ ನಗರದಲ್ಲಿ ಶೇ. 80 ರಷ್ಟು ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿದ್ದವು. ಆದರೆ, ಈಗ ನಗರದಲ್ಲಿ ಈ ಪ್ರಮಾಣ ಸೇ. 15 ರಿಂದ 20ಕ್ಕೆ ಇಳಿದಿದೆ. ಈಗ ಪರಿಸ್ಥಿತಿ ಬದಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಶೇ. 80 ರಷ್ಟು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಮಾಹಿತಿ ನೀಡಿದರು.
ವಿಜಯಪುರ ನಗರದಲ್ಲಿ ಸರಕಾರಿ ಮತ್ತು ಖಾಸಗಿ ಸೇರಿ ಒಟ್ಟು 36 ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಗಳ ಬಗ್ಗೆ, ಬೆಡ್ ಗಳ ಕುರಿತು, ಆಕ್ಸಿಜನ್ ಸಂಬಂಧ ಹಾಗೂ ಔಷಧಿಗಳ ಮೇಲೆ ನಿಗಾ ಇಡಲು ಆ್ಯಪ್ ರಚಿಸಿ ನೋಡಲ್ ಅಧಿಕಾರಿಗಳು ಗಮನ ಹರಿಸಿದ್ದರಿಂದ ಈಗ ವಿಜಯಪುರ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿಸಿದ ಅವರು, ಈಗ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿರುವ ಕೊರೊನಾ ಸೋಂಕು ತಡೆಯಲು ಗ್ರಾಮ ಪಂಚಾಯಿತಿ ಕಾರ್ಯಪಡೆಗಳು ಕೆಲಸ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆಗಾಗಿ 1600 ಆಕ್ಸಿಜನ್ ಬೆಡ್ ಗಳಿದ್ದವು. ಬೇರೆ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಗಳಿಗಿಂತಲೂ ಕಡಿಮೆ ಆಕ್ಸಿಜನ್ ಬೆಡ್ ಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ನೀಡುತ್ತಿರುವುದರಿಂದ ವಿಜಯಪುರ ನಗರದಲ್ಲಿ ಸೋಂಕು ಹರಡುವಿಕೆ ತಕ್ಕ ಮಟ್ಟಿಗೆ ಕಡಿಮೆಯಾಗಿದೆ ಎಂದು ತಿಳಿಸಿದ ಅವರು, ಗ್ರಾಮೀಣ ಭಾಗಗಳಲ್ಲಿ ಸೋಂಕಿತರ ಪತ್ತೆಗೆ ಕಾರ್ಯಪಡೆಗಳನ್ನು ರಚಿಸಲಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿದಾಗ ಮೊದಲು ಜನ ಸ್ಪಂದಿಸುತ್ತಿರಲಿಲ್ಲ. ಈಗ ಕಾರ್ಯಪಡೆ ಜೊತೆ ಅವರನ್ನು ಸೇರಿಸಿದ ಬಳಿಕ ಒಂದು ವಾರದಲ್ಲಿ 3000 ರೋಗ ಲಕ್ಷಣವುಳ್ಳವರನ್ನು ಗುರುತಿಸಲಾಗಿದೆ. ಜನರೂ ಕೂಡ ಸಮೀಕ್ಷೆಗೆ ಬಂದವರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಾಳೆ ಅಥವಾ ನಾಡಿದ್ದು ಗ್ರಾಮೀಣ ಭಾಗದಲ್ಲಿ ಮನೆ ಮನೆ ಸಮೀಕ್ಷೆ ಪೂರ್ಣವಾಗಲಿದೆ. ಈಗಾಗಲೇ ನಾನಾ ಗ್ರಾಮಗಳಿಗೆ ಸಂಚಾರ ಮಾಡಿದ್ದೇವೆ. ಅವರ ಕಾರ್ಯ ವೈಖರಿ ಪರಿಶೀಲನೆ ಜೊತೆಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹಳ್ಳಿಗಳಲ್ಲಿ ರೋಗ ಲಕ್ಷಣಗಳಿದ್ದವರು ಲಕ್ಷಣಗಳು ಆರಂಭವಾದ ಮೊದಲ ಏಳು ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಆಸ್ಪತ್ರೆ ದಾಖಲಾಗುವ ಪ್ರಮೇಯವೇ ಬರುವುದಿಲ್ಲ. ಖಾಲಿ ಇರುವ ವೈದ್ಯರ ಹುದ್ದೆಗಳ ನೇಮಕಾತಿಗಾಗಿ ಕ್ರಮ ಕೈಗೊಳ್ಳಲಾಗಿದೆ. 20 ಎಂಬಿಬಿಎಸ್ ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಕೇವಲ ಐದು ಜನ ಮಾತ್ರ ಅರ್ಜಿ ಹಾಕಿದ್ದಾರೆ. ಎನ್ ಟಿ ಪಿ ಸಿ ಯಿಂದ ಸಿಎಸ್‌ಆರ್ ಯೋಜನೆಯಡಿ ಬಿಎಎಂಎಸ್ ವೈದ್ಯರ ಭರ್ತಿಗಾಗಿ ನಾಲ್ಕು ತಿಂಗಳ ಅವಧಿಗೆ ಅರ್ಜಿ ಕರೆಯಲಾಗಿದೆ. 23 ಜನರನ್ನು ನೇಮಕಾತಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಧ್ಯಕ್ಕೆ ಹೊಸ ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಸಾಧ್ಯವಿಲ್ಲ. ಲಭ್ಯವಿರುವ ಬೆಡ್ ಗಳಿಗೆ ಮಾತ್ರ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿದೆ. ಹೊಸ ಆಕ್ಸಿಜನ್ ಬೆಡ್ ಆರಂಭಿಸಲು ಸರಕಾರದಿಂದ ಅನುಮತಿ ಇಲ್ಲ ಎಂದು ಪಿ. ಸುನೀಲ ಕುಮಾರ ತಿಳಿಸಿದರು.