ವಿಜಯಪುರ: ಕೊರೊನಾ ಎರಡನೇ ಅಲೆ ಗುಮ್ಮಟ ನಗರಿ ಖ್ಯಾತಿಯ ವಿಜಯಪುರ ಜಿಲ್ಲೆಯ ಜನರ ಪಾಲಿಗಂತೂ ನಾನಾ ಸಮಸ್ಯೆಗಳಿಗೆ ಕಾರಣವಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಒಂದೆಡೆಯಾದರೆ, ಮತ್ತೋಂದೆಡೆ ಆಕ್ಸಿಜನ್ ಸಮಸ್ಯೆ ಮತ್ತೋಂದೆಡೆ. ಇಂಥ ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೊರೊನಾ ಸೋಂಕಿತರ ಪಾಲಿಗೆ ಗುಮ್ಮಟ ನಗರಿ ವಿಜಯಪುರದ ಯುವಕನೊಬ್ಬ ಆಪದ್ಭಾಂಧವನಾಗಿದ್ದಾನೆ.
ಈ ಯುವಕ ಸಮಾನ ಮನಸ್ಕ ಸ್ನೇಹಿತರ ಪಡೆ ಕಟ್ಟಿಕೊಂಡು ಕೊರೊನಾ ಸೋಂಕಿತರ ನೆರವಿಗೆ ಟೊಂಕಕಟ್ಟಿ ನಿಂತಿದ್ದಾನೆ. ವಿಜಯಪುರ ನಗರದ ಕೆ. ಸಿ. ಮಾರ್ಕೆಟ್ ಪೀಠೋಪಕರಗಳ ಖ್ಯಾತ ವ್ಯಾಪಾರಿ ಶಕೀಲ್ ಸುತಾರ ಕಳೆದ ಮೂರು ತಿಂಗಳಿಂದ ಕೊರೊನಾ ಸೋಂಕಿತರಿಗಾಗಿ ನಾನಾ ರೀತಿಯಲ್ಲಿ ನೆರವಾಗುತ್ತಿದ್ದಾರೆ.
ಒಂದೆಡೆ ಉಚಿತವಾಗಿ ಪ್ರಾಣವಾಯು ಆಮ್ಲಜನಕ ಟ್ಯಾಂಕರ್ ವ್ಯವಸ್ಥೆ ಮಾಡುತ್ತಿದ್ದರೆ, ಮತ್ತೋಂದೆಡೆ ಆಹಾರ, ನೀರು ನೀಡುವುದರ ಜೊತೆಗೆ ಕೊರೊನಾದಿಂದ ಸಾವಿಗೀಡಾದವರ ಅಂತ್ಯಸಂಸ್ಕಾರವನ್ನೂ ಮಾಡುವ ಮೂಲಕ ಮಾನವೀಯತೆಗೆ ತಾಜಾ ಉದಾಹರಣೆಯಾಗಿದ್ದಾರೆ.
ಕಡು ಬಡವರಿಗೆ ಆಹಾರ ಧಾನ್ಯಗಳ ಕಿಟ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಉಚಿತ ಆಕ್ಸಿಜನ್ ಪೂರೈಕೆ ಮಾಡುವ ಮೂಲಕ ಹಲವು ಜೀವಗಳನ್ನು ಉಳಿಸುವ ಮೂಲಕ ತಮ್ಮ ಕಾಯಕ ಮುಂದುವರೆಸಿದ್ದಾರೆ. ಕಳೆದ ವರ್ಷ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಸಮಸ್ಯೆ ಕಂಡು ಬಂದಿರಲಿಲ್ಲ, ಆದರೆ ಈ ಸಲ ಕೊರೊನಾ ಎರಡನೇ ಅಲೆಯಿಂದಾಗಿ ರಾಜ್ಯಾದ್ಯಂತ ವ್ಯಾಪಕವಾಗಿ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೊರೊನಾ ಎರಡನೇ ಅಲೆಗೆ ಕಡಿವಾಣ ಹಾಕಲು ಲಾಕಡೌನ್ ಜಾರಿ ಮಾಡಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಉಸಿರಾಟದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆ ದಾಖಲಾದರೂ ಆಮ್ಲಜನಕ ಸಿಲಿಂಡರ್ ಸಿಗದೇ ಸಾವು–ಬದುಕಿನ ನಡುವೆ ಹೋರಾಡುತ್ತಿರುವ ಕೊರೊನಾ ಸೋಂಕಿತರ ಸಮಸ್ಯೆಗಳನ್ನು ಮನಗಂಡು ಶಕೀಲ್ ಸುತಾರ ಸಮಾನ ಮನಸ್ಕ ಯುವಕರನ್ನು ಆಹ್ವಾನಿಸಿ ಜನಸ್ನೇಹಿ ಗುಂಪೊಂದನ್ನು ರಚಿಸಿದ್ದಾರೆ.
ಈ ಗುಂಪಿನಲ್ಲಿ ಸಹಾಯಕ್ಕೆಂದು ನಾಮುಂದು ತಾ ಮುಂದು ಎಂದು 15 ಜನರು ಸೇರಿಕೊಂಡು ದಿನದ 24 ಗಂಟೆಗಳ ಕಾಲ ಆಕ್ಸಿಜನ್ ಮತ್ತು ಬೆಡ್ ವ್ಯವಸ್ಥೆಗೆ’ ಕೆಲಸ ಮಾಡುತ್ತಿದ್ದಾರೆ. ದಿನದ 24 ಗಂಟೆ ಜನರ ಸೇವೆಗಾಗಿ ನಿಂತಿರುವ ಸುತಾರ ಈವರೆಗೆ ಸುಮಾರು 300ಕ್ಕೂ ಹೆಚ್ಚು ಜನರಿಗೆ ಆಮ್ಲಜನಕವನ್ನು ಉಚಿತವಾಗಿ ಪೂರೈಕೆ ಮಾಡುವ ಮೂಲಕ ಅವರ ನೆರವಾಗಿದ್ದಾರೆ.
ಅಷ್ಟೇ ಅಲ್ಲ, ನೆರೆಯ ಮಹಾರಾಷ್ಟ್ರದ ಸೋಲಾಪೂರ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ಆಕ್ಸಿಜನ್ ಇಲ್ಲದೇ ನೂರಾರು ಜನರು ಬಲಿಯಾಗಿದ್ದಾರೆ, ಅಲ್ಲಿಯ ಸಮಸ್ಯೆಯನ್ನರಿತ ಇವರು ಸೋಲಾಪುರದ ಹಲವಾರು ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. ಅಲ್ಲದೇ, ರಾಜ್ಯದ ಬೆಳಗಾವಿ, ಕಲಬುರಗಿ ಮತ್ತು ಬೆಂಗಳೂರಿಗೂ ಕೂಡ ಆಮ್ಲಜನಕ ಪೂರೈಕೆ ಮಾಡಿ ಗಮನ ಸೆಳೆದಿದ್ದಾರೆ.
ಈ ಜನಸ್ನೇಹಿ ಸದಸ್ಯರು ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ತೊಂದರೆಗೊಳಗಾದ ಅನೇಕ ಕೊರೊನಾ ಸೋಂಕಿತರಿಗೆ ನಾನಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ. ಅಷ್ಟೇ ಅಲ್ಲ, ತೀವ್ರ ಸಂಕಷ್ಟದಲ್ಲಿರುವ ಬಡವರ ಆಸ್ಪತ್ರೆಯ ಸಂಪೂರ್ಣ ಖರ್ಚನ್ನು ಭರಿಸುವ ಮೂಲಕ ಪರೋಪಕಾರಿ ಎನಿಸಿಕೊಂಡಿದ್ದಾರೆ.
ಮೊದಲಿಗೆ 30 ಆಕ್ಸಿಜನ ಸಿಲೆಂಡರ್ ಹೊಂದಿದ್ದ ಇವರು ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗಿದ್ದರಿಂದ ನಂತರ 50, 80. ಹೀಗೆ ಹಂತ ಹಂತವಾಗಿ 92 ಜಂಬೋ ಸಿಲಿಂಡರ್‌ಗಳನ್ನು ಬಾಡಿಗೆ ಮತ್ತು ಸ್ವಂತ ಖರೀದಿ ಮಾಡಿದ್ದಾರೆ. ಜೊತೆಗೆ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಆಮ್ಲಜನಕ ಸಿಗದೇ ತೊಂದರೆಗೆ ಒಳಗಾದವರು ದಿನದ 24 ಗಂಟೆಯೂ ಇವರನ್ನು ಸಂಪರ್ಕಿಸಿದರೆ ಕೂಡಲೆ ತಮ್ಮ ಆಟೋದಲ್ಲಿ ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡು ಅವರ ಬಳಿಗೆ ತೆರಳುತ್ತಾರೆ.
ವಿಜಯಪುರ ನಗರದ ಕುಲಕರ್ಣಿ ಏಜೆನ್ಸಿ, ಎಂ. ಆರ್. ಆಕ್ಸಿಜನ್ ಏಜನ್ಸಿ ಬಳಿ ಖಾಲಿ ಸಿಲಿಂಡರ್ ಭರ್ತಿ ಮಾಡಿಸಿ ಸಿಲಿಂಡರ್ ತುಂಬಿಸಲು ತಗಲುವ ವೆಚ್ಚವನ್ನು ಇವರೇ ನೀಡುತ್ತಾರೆ. ಇವರ ಬಳಿ ಗೋಡ್ಸ್ ಆಟೋಗಳಿವೆ. ಅವುಗಳ ಮೂಲಕ ರೋಗಿಗಳು ದಾಖಲಾಗಿರುವ ಆಸ್ಪತ್ರೆಗೆ ಕೊಂಡೊಯ್ದು ಉಚಿತ ಸೇವೆ ನೀಡುವ ಮೂಲಕ ಇವರು ಗಮನ ಸೆಳೆದಿದ್ದಾರೆ. ಇವರ ಸೇವೆಯನ್ನು ಮೆಚ್ಚಿ ಕೆಲವರು ದುಡ್ಡು ಕೊಡಲು ಮುಂದೆ ಬದಂರೆ ಇವರು ಯಾರ ಬಳಿಯೂ ಹಣವನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಆ ದುಡ್ಡನ್ನು ಸಂಕಷ್ಟದಲ್ಲಿರುವ ಬಡ ರೋಗಿಗಳ ಆಸ್ಪತ್ರೆ ವೆಚ್ಚವನ್ನು ಭರಿಸುವಂತೆ ಕೋರುತ್ತಿದ್ದಾರೆ.
ಈ ಮಧ್ಯೆ ಶಕೀಲ ಸುತಾರ ಮತ್ತು ಅವರ ಸ್ನೇಹಿತರ ಜನಪರ ಕಾಳಜಿಯನ್ನು ಕೊರೊನಾ ಸೋಂಕಿತರ ಸಂಬಂಧಿ ಸೋಮಶೇಖರ ಎಂಬುವರು ಶ್ಲಾಘಿಸಿದ್ದಾರೆ. ಆಕ್ಸಿಜನ್ ಸಿಲಿಂಡರ್ ನೀಡುವ ಮೂಲಕ ಜನರ ಜೀವ ಉಳಿಸುವ ಕೆಲಸಕ್ಕೆ ಮುಂದಾಗಿರುವ ಈ ಯುವಕರ ತಂಡಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಯುವಕರ ಗುಂಪು ಕಟ್ಟಿಕೊಂಡು ಸೋಂಕಿತರ ನೆರವಿಗೆ ನಿಂತಿರುವ ಶಕೀಲ ಸುತಾರ ಅವರ ಕಾರ್ಯ ಎಂಥವರೂ ಮೆಚ್ಚುವಂಥದ್ದಾಗಿದೆ.