ಕೊರೊನಾ ಗೆದ್ದವರು- ಒಂದೇ ಕುಟುಂಬದ ಐವರು

ವಿಜಯಪುರ: ಇದು ಬಸವ ನಾಡಿನಲ್ಲಿ ಒಂದೇ ಕುಟುಂಬದ ಐದು ಜನ ಕೊರೊನಾ ವಿರುದ್ಧ ಸೆಣಸಾಡಿ ಗೆದ್ದ ಸ್ಟೋರಿ.

ಮೊದಲಿಗೆ ಮೂರು ಜನ ಸಹೋದರರಲ್ಲಿ ಮೂರನೇಯರಿಗೆ ಸೋಂಕು ತಗುಲಿ ಮನೆಯಲ್ಲಿಯೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆದು ಗುಣಮುಖರಾದರೆ. ಇನ್ನುಳಿದ ನಾಲ್ಕು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಇದು ವಿಜಯಪುರ ನಗರದ ಜಲನಗರದಲ್ಲಿ ವಾಸಿಸುವ ಕುಮಾನಿ ಕುಟುಂಬದ ಕಥೆ. ಈ ಕುಟುಂಬದಲ್ಲಿ ಮೂರು ಜನ ಸಹೋದರರು ಮತ್ತು ಇಬ್ಬರು ಸೊಸೆಯಂದಿರಿಗೆ ಕೊರೊನಾ ಸೋಂಕು ತಗುಲಿತ್ತು. ಈಗ ಎಲ್ಲರೂ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಕುಮಾನಿ ಕುಟುಂಬದಲ್ಲಿ ರಾಜಕುಮಾರ ಕುಮಾನಿ(ಗುತ್ತಿಗೆದಾರ), ದುಂಡಪ್ಪ(ಅಪ್ಪಾಸಿ) ಕುಮಾನಿ(ಸಾಫ್ಟವೇರ್ ಎಂಜಿನಿಯರ್) ಮತ್ತು ಅವರ ಪತ್ನಿ, ಶ್ರೀಶೈಲ ಕುಮಾನಿ(ಪಿಡಿಓ) ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ತಗುಲಿತ್ತು. ಇವರಲ್ಲಿ ಶ್ರೀಶೈಲ ಕುಮಾನಿ ಅವರಿಗೆ HRCT SCORE 4 ಇದ್ದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆದು ಗುಣಮುಖರಾದರು.

ರಾಜಕುಮಾರ ಕುಮಾನಿ

ಆದರೆ, ಇದೇ ಸಮಯದಲ್ಲಿ ರಾಜಕುಮಾರ ಕುಮಾನಿ ಬೆಂಗಳೂರಿಗೆ ಹೋಗಿ ಬಂದ ನಂತರ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದವು. ಮನೆಯಲ್ಲಿಯೇ ನಾಲ್ಕೈದು ದಿನ ಚಿಕಿತ್ಸೆ ಪಡೆದರೂ ಗುಣಮುಖರಾಗಲಿಲ್ಲ. ನಂತರ HRCT Scan ಮಾಡಿಸಿದಾಗ SCORE 10 ಕಂಡು ಬಂತು. ಕೂಡಲೇ ಧನ್ವಂತರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಒಂದೆರಡು ದಿನಗಳಲ್ಲಿ ಗುಣಮುಖರಾಗಿ ಮನೆಗೆ ಮರಳಿ ಐಸೋಲೇಟ್ ಗೆ ಒಳಗಾದರು.

ದುಂಡಪ್ಪ(ಅಪ್ಪಾಸಿ) ಕುಮಾನಿ

ರಾಜಕುಮಾರ ಕುಮಾನಿ ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಇವರ ಸಹೋದರ ದುಂಡಪ್ಪ ಕುಮಾನಿ ಅವರಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮನೆಯಲ್ಲಿಯೇ ಐಸೋಲೇಟ್ ಆಗಿದ್ದರೂ ಕೂಡ ಗುಣಮುಖರಾಗದೇ ಸಮಸ್ಯೆ ಎದುರಾಯಿತು. HRCT Scan ಮಾಡಿಸಿದಾಗ Score 14 ಬಂತು. ಕೂಡಲೇ ಇವರೂ ಕೂಡ ಧನ್ವಂತರಿ ಆಸ್ಪತ್ರೆಗೆ ದಾಖಲಾದರು. ಅಷ್ಟರಲ್ಲಿ ಇವರ ಪತ್ನಿಗೂ ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ಅವರನ್ನೂ ಧನ್ವಂತರಿ ಆಸ್ಪತ್ರೆಗೆ ದಾಖಲು ಮಾಡಿದಾಗ HRCT SCORE 24 ಕಂಡು ಬಂತು. ಅಲ್ಲಿನ ಡಾ. ಸುನಿಲ ಕಲ್ಲೂರ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡಿತು. ಒಂದೇ ಒಂದು ರೆಮಿಡಿಸಿವಿರ್ ಎಂಜೆಕ್ಷನ್ ಬಳಸದೇ ಇತರ ಔಷಧಿಗಳ ಮೂಲಕ 5 ದಿನಗಳಲ್ಲಿ ಗುಣಮುಖರಾಗಿ ಮನೆಗೆ ಮರಳಿದರು.

ಶ್ರೀಶೈಲ ಕುಮಾನಿ

ಇದೇ ವೇಳೆ ಶ್ರೀಶೈಲ ಕುಮಾನಿ ಅವರ ಪತ್ನಿಗೂ ಸೋಂಕು ಕಾಣಿಸಿಕೊಂಡಿತು. ಇವರ HRCT SCORE 26 ಇತ್ತು. ಮೊದಲಿಗೆ ಆಸ್ಪತ್ರೆಯೊಂದರಲ್ಲಿ ಐದು ದಿನ ಚಿಕಿತ್ಸೆ ಪಡೆದರೂ ಗುಣಮುಖರಾಗದ ಹಿನ್ನೆಲೆಯಲ್ಲಿ ವಿಜಯಪುರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ, ರೆಮಿಡಿಸಿವರ್ ಸೇರಿದಂತೆ ಎಲ್ಲ ಔಷಧಿಗಳನ್ನು ಬಳಸಿ ಡಾ. ನಿತೀನ ಅಗರವಾಲ ಅವರ ಆರೈಕೆಯಲ್ಲಿ 16 ದಿನಗಳ ಬಳಿಕ ಶ್ರೀಶೈಲ ಕುಮಾನಿ ಅವರ ಪತ್ನಿಯೂ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಶ್ರೀಶೈಲ ಕುಮಾನಿ ಆಗಷ್ಟೇ ಕೊರೊನಾದಿಂದ ಗುಣಮುಖರಾಗಿದ್ದರೂ, 21 ದಿನಗಳ ಕಾಲ ಆಸ್ಪತ್ರೆಯಲ್ಲಿ ಪತ್ನಿಯ ಜೊತೆಗಿದ್ದುಕೊಂಡೆ ಆರೈಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಮನೋಸ್ಥೈರ್ಯ ಹೆಚ್ಚಿಸಿ ಬೇಗ ಗುಣಮುಖರಾಗಲೂ ಕಾರಣರಾಗಿದ್ದಾರೆ.

ಕುಮಾನಿ ಕುಟುಂಬದ ಹಿರಿಯಣ್ಣ ರಾಜಕುಮಾರ ಕುಮಾನಿ ಅವರ ಪ್ರಕಾರ ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಲ್ಲಿ ಬೇಗ ಚೇತರಿಸಿಕೊಂಡೆುವು. ಇದರ ಜೊತೆಯಲ್ಲಿಯೇ ತಮ್ಮ ತಾಯಿ ಜಕ್ಕೂಬಾಯಿ(ಜಕ್ಕವ್ವಾ) ಅವರ ಆಶೀರ್ವಾದವೂ ಮೂರು ಜನ ಸಹೋದರರು ಮತ್ತು ಇಬ್ಬರು ಸೊಸೆಯಂದಿರು ಕೊರೊನಾದಿಂದ ಬೇಗ ಗುಣುಖರಾಗಲು ಪ್ರಮುಖ ಕಾರಣ ಎಂದು ಕಳೆದ ವರ್ಷವಷ್ಟೇ ತಾಯಿಯನ್ನು ಕಳೆದುಕೊಂಡಿರುವ ರಾಜಕುಮಾರ ಕುಮಾನಿ ಭಾವುಕರಾಗಿ ಹೇಳಿದ್ದು, ಮನೆ ಮಂದಿಗೆ ಸೋಂಕು ಹರಡಿದಾಗ ಎದುರಿಸಿದ್ದ ಕ್ಷಣಗಳಿಗೆ ಸಾಕ್ಷಿಯಾಗಿದೆ.

ಈ ಸಹೋದರರ ಅನುಭವದ ಪ್ರಕಾರ ಕೊರೊನಾ ಕಾಯಿಲೆ ಬಂದರೆ ಹೆದರುವ ಅಗತ್ಯವಿಲ್ಲ. ಧೈರ್ಯವಾಗಿರಬೇಕು. ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ ಸೋಂಕು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಈ ಸಂದರ್ಭದಲ್ಲಿ ಧೈರ್ಯಂ ಸರ್ವತ್ರ ಸಾಧನಂ ಎಂಬ ನಾಣ್ಣುಡಿಯಂತೆ ನಿರ್ಭೀತಿಯಿಂದ ಇದ್ದರೆ ಬೇಗ ಗುಣಮುಖರಾಗಿ ಹೊರ ಬರಬಹುದಾಗಿದೆ.

Leave a Reply

ಹೊಸ ಪೋಸ್ಟ್‌