ವಿಜಯಪುರ: ಇದು ಜನ ಮರಳೋ ಜಾತ್ರೆ ಮರಳೋ ಎಂಬುದಕ್ಕೆ ತಾಜಾ ಉದಾಹರಣೆ. ಜಾತ್ರೆಯ ಸಂದರ್ಭದಲ್ಲಿ ಮದ್ಯದ ನೈವೇದ್ಯ ಬೇಡ ಬೇಡ ಎಂದು ಕಾರ್ಣಿಕ ಹೇಳಿದರೂ ಕೇಳದ ಜನ ಈಗ ಕೊರೊನಾ ಲಾಕಡೌನ್ ಸಂದರ್ಭದಲ್ಲಿ ನಾನಾ ಗ್ರಾಮಗಳಿಂದ ಅಂಬಲಿಯೊಂದಿಗೆ ನೈವೇದ್ಯ ಅರ್ಪಿಸಲು ಬಂದು ಪೊಲೀಸರಿಂದ ಬುದ್ಧಿಹೇಳಿಸಿಕೊಂಡ ಕಥೆಯಿದು.
ಅಷ್ಟಕ್ಕೂ ಆಗಿದ್ದೇನೆಂದರೆ, ಎರಡು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಸದಾಶಿವ ಮಠದ ಕಾರ್ಣಿಕ ಮತ್ತು ಸ್ವಾಮೀಜಿ ಸಿದ್ಧರಾಮಯ್ಯ ಹೊಳಿಮಠ ಅವರು ಭವಿಷ್ಯ ವೈದ್ಯರಿಗೂ ತಿಳಿಯದ ರೋಗ ಜನರನ್ನು ಕಾಡಲಿದೆ ಎಂದು ಭವಿಷ್ಯ ನುಡಿದಿದ್ದರು. ಅದು ಈಗ ನಿಜವಾಗಿದೆ.
ಈಗ ಕೊರೊನಾ ಎರಡನೇ ಅಲೆ ಜನರನ್ನು ಹೈರಾಣಾಗಿಸಿದೆ. ಇದರಿಂದ ಆತಂಕದಲ್ಲಿರುವ ಭಕ್ತರು ಅಂದು ಭವಿಷ್ಯ ನುಡಿದಿದ್ದ ಕಾರ್ಣಿಕ ಮತ್ತು ಸದಾಶಿವ ಮಠದ ಶ್ರೀ ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಅವರಿಗೆ ಪದೇ ಪದೇ ಕರೆ ಮಾಡಿ ಕೊರೊನಾ ಬಗ್ಗೆ ಭವಿಷ್ಯ ನುಡಿದಿದ್ದೀರಿ. ಈಗ ಇದರ ನಿಯಂತ್ರಣ ಹೇಗೆ ಎಂದು ಪ್ರಶ್ನೆ ಮಾಡಿದ್ದರು. ಆಗ, ಸ್ವಾಮೀಜಿ, ಕಳೆದ ಎರಡು ದಿನಗಳ ಹಿಂದೆ ಆಡಿಯೊಂದನ್ನು ರೆಕಾರ್ಡ್ ಮಾಡಿ ಸೋಮವಾರ ಸದಾಶಿವ ಮುತ್ಯಾಗೆ ಅಂಬಲಿ ನೈವೆದ್ಯ ಮಾಡಿ ಮನೆಯಲ್ಲಿಯೇ ದೇವರಿಗೆ ಅರ್ಪಿಸಿರಿ. ಎರಡು ಬೋಳು ಟೆಂಗಿನಕಾಯಿ ಒಡೆಯಿರಿ. ಯಾರೂ ಮನೆಯ ಹೊರಗೆ ಬರಬೇಡಿ. ಎಣ್ಣೆಯಲ್ಲಿ ವಸ್ತುಗಳನ್ನು ಕರೆಯಬೇಡಿ. ಬರಿಗಾಲಲ್ಲಿ ಮನೆಯಲ್ಲಿಯೇ ಇರಿ ಎಂದು ಆರೋಗ್ಯಪೂರ್ಣ ಮತ್ತು ಭಕ್ತರ ಮನಸ್ಸಿಗೆ ಸಮಾಧಾನವಾಗುವಂತ ಸಲಹೆ ನೀಡಿದ್ದರು.
ಆದರೆ, ಜನ ಮರಳೋ ಜಾತ್ರೆ ಮರಳೋ ಎಂಬಂತೆ, ಆಡಿಯೋವನ್ನೂ ಕೇಳಿರದ ಅಂಬಲಿ ನೈವೇದ್ಯದೊಂದಿಗೆ ಸದಾಶಿವ ಮಠಕ್ಕೆ ಬರಲು ಸ್ವಾಮೀಜಿ ಹೇಳಿದ್ದಾರೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಂಬಲಿ ಬಾನ ತೆಗೆದುಕೊಂಡು ಸದಾಶಿವ ಮಠಕ್ಕೆ ಬಂದಿದ್ದಾರೆ. ಜೊತೆಗೆ ತಾವು ತಂದಿದ್ದ ಅಂಬಲಿಯನ್ನು ಸದಾಶಿವ ಮುತ್ಯಾಗೆ ನೈವೇದ್ಯ ಅರ್ಪಿಸಲು ತಮ್ಮ ಪಾಳಿಗಾಗಿ ಕಾಯುತ್ತಿದ್ದಾರೆ. ನೂರಾರು ಜನ ಭಕ್ತರು ಮಠದ ಮುಂದೆ ನೈವೇದ್ಯ ಅರ್ಪಣೆಗೆ ಗುಂಪು ಗುಂಪಾಗಿ ಸೇರಿದ ಮಾಹಿತಿ ತಿಳಿದ ಬಬಲೇಶ್ವರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಜನರನ್ನು ಚದುರಿಸಲು ಹರಸಾಹಸ ಪಟ್ಟಿದ್ದಾರೆ.
ಈ ಮಧ್ಯೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ ಸ್ವಾಮೀಜಿ, ಭಕ್ತರು ತಂತಮ್ಮ ಮನೆಯಲ್ಲಿಯೇ ಪೂಜೆ ಮಾಡಿ. ಯಾರೂ ಮಠಕ್ಕೆ ಬರುವ ಮೂಲಕ ಲಾಕಡೌನ್ ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಮದ್ಯದ ನೈವೇದ್ಯದ ಬದಲು ಅಂಬಲಿ ಅಂದರೆ ಮಜ್ಜಿಗೆ ಮತ್ತು ಜೋಳ ಹಿಟ್ಟನ್ನು ಮಿಶ್ರಣ ಮಾಡಿ ಬಳ್ಳೋಳ್ಳಿಯನ್ನು ಅದರಲ್ಲಿ ಹಾಕಿ ದ್ರವರೂಪದ ದ್ರಾವಣ ತಯಾರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಇದು ಖ್ಯಾತಿಯಾಗಿದ್ದು, ಇದನ್ನು ಸೇವಿಸುವುದರಿಂದ ಆರೋಗ್ಯ ವರ್ಧನೆಯಾಗುತ್ತದೆ. ದೇಹಕ್ಕೆ ತಂಪು ನೀಡುತ್ತದೆ. ಅಷ್ಟೇ ಅಲ್ಲ, ಆಹಾರ ಪಚನವೂ ಸರಿಯಾಗಿ ನಡೆಯುತ್ತದೆ ಎಂಬುದು ಗ್ರಾಮೀಣ ಭಾಗದ ಜನರಲ್ಲಿರುವ ನಂಬಿಕೆ.
ಒಟ್ಟಾರೆ, ಕೊರೊನಾ ಸಂಕಷ್ಟ ಕಾಲದಲ್ಲಿ ಸ್ವಾಮೀಜಿ ಮನೆಯಲ್ಲಿಯೇ ಇದ್ದು ಪೂಜೆ ಮಾಡಿ, ದೇವರಿಗೆ ಅಂಬಲಿ ಬಾನ ಅಂದರೆ ನೈವೇದ್ಯ ಅರ್ಪಿಸಿ. ಅದನ್ನು ಸೇವಿಸಿ ಮನೆಯಲ್ಲಿಯೇ ಇರಿ ಎಂದು ಹೇಳಿದ ಮಾತನ್ನು ಈ ಅಮಾಯಕ ಜನ ತಪ್ಪಾಗಿ ತಿಳಿದು ಮಠಕ್ಕೆ ಹೋಗಿರುವುದು ಮಾತ್ರ ಜನ ಮರಳೋ, ಜಾತ್ರೆ ಮರಳೋ ಎಂಬುವಂತೆ ಮಾಡಿದೆ. ಅಷ್ಟೇ ಅಲ್ಲ, ಶ್ರೀ ಸಿದ್ಧರಾಮಯ್ಯ ಸ್ವಾಮೀಜಿ ಅವರಿಗೂ ಸಾಕಷ್ಟು ಕಿರಿಕಿರಿ ಅಷ್ಟೇ ಅಲ್ಲ, ಕಸಿವಿಸಿ ಉಂಟು ಮಾಡಿದೆ.