ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಬೀಟ್ ಸಿಬ್ಬಂದಿಗಳು ನಿರಂತರ ಆಯಾ ಗ್ರಾಮದಲ್ಲಿ ಪರಿಶೀಲಿಸಬೇಕು. ಅಲ್ಲದೇ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆಗಳಿಗೆ ನೆರವಾಗುವಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಜಯಪುರದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣ ಕುರಿತು ಪರಿಶೀಲನೆ ಸಭೆ ನಡೆಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈಗಾಗಲೇ ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಒಳಗೊಂಡ ಕಾರ್ಯಪಡೆಗಳು ಕೆಲಸ ನಿರ್ವಹಿಸುತ್ತಿವೆ. ಅವರಿಗೆ ಸೂಕ್ತ ರೀತಿಯಲ್ಲಿ ನೆರವಾಗಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ದೃಢಪಟ್ಟ ತಕ್ಷಣ ಅವರನ್ನು ಕೋವಿಡ್ ಕೇರ್ ಸೆಂಟರಗಳಿಗೆ ತೆರಳಲು ರೋಗಿಗಳು ನಿರಾಕರಿಸುವ ಪ್ರಕರಣಗಳು ವರದಿಯಾಗುತ್ತಿವೆ. ಇಂಥ ಪ್ರಕರಣಗಳ ಬಗ್ಗೆ ವಿಶೇಷ ಗಮನ ನೀಡಿ ಕಾರ್ಯ ಪಡೆಗಳಿಗೆ ಸ್ಪಂದಿಸಬೇಕು. ಪ್ರತಿ ಗ್ರಾಮದಲ್ಲಿ ಬೀಟ್ ಸಿಬ್ಬಂದಿಗಳು ನಿರಂತರ ಭೇಟಿ ನೀಡುವ ಮೂಲಕ ಕಾರ್ಯಪಡೆಗಳ ಜೊತೆ ಸಮನ್ವಯತೆ ಸಾಧಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಕೊರನಾ ರೋಗಿಗಳು ಗ್ರಾಮೀಣ ಪ್ರದೇಶದಲ್ಲಿ ನಿರಾತಂಕವಾಗಿ ಓಡಾಡುವುದರಿಂದ ಕೂಡ ಪ್ರಕರಣಗಳು ಸಹ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಅಂತಹ ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲು ಗಮನ ನೀಡುವಂತೆ ಸೂಚಿಸಿದ ಸಚಿವೆ ಶಶಿಕಲಾ ಜೊಲ್ಲೆ, ಲಾಕಡೌನ್ ಜಾರಿ ಆಗಿರುವುದರಿಂದ ಸರಕಾರದ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳು ಸಂಘಟಿತ ಪ್ರಯತ್ನದ ಮೂಲಕ ಕೊರೊನಾ ಹತೋಟಿಗೆ ತರಲು ಪ್ರಯತ್ನಿಸೋಣ ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಜೀವದ ಹಂಗನ್ನು ತೊರೆದು ಅತ್ಯುತ್ತಮವಾಗಿ ಸೇವೆ ಸಲ್ಲಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಅವರು ಲಾಕಡೌನ್ ಸಂದರ್ಭದಲ್ಲಿ ಅನಗತ್ಯ ಓಡಾಡುವವರ ವಿರುದ್ಧ ಕ್ರಮ ಆಗಬೇಕು. ರೈತರು ಸಕಾರಣ ಹೊಂದಿದವರಿಗೆ ತೊಂದರೆ ಆಗದಂತೆ ಮಾನವೀಯತೆಯ ಆಧಾರದ ಮೇಲೆ ಪಾರದರ್ಶಕವಾಗಿ ನೆರವಾಗಲು ಕಾರ್ಯ ನಿರ್ವಹಿಸಬೇಕು. ತಳ್ಳುವ ಗಾಡಿ ವ್ಯಾಪಾರಸ್ಥರ ಬಗ್ಗೆಯೂ ಮಾನವೀಯತೆಯ ನೆಲೆಯ ಮೇಲೆ ನೋಡಿಕೊಳ್ಳಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ನಗರದ ಇಟಗಿ ಕ್ರಾಸ್ ಬಗ್ಗೆ ನಿಗಾ ಇಡಿ, ಸಿಂದಗಿ ಮತ್ತು ಆಲಮೆಲ್ ಭಾಗಗಳಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಇನ್ನಷ್ಟು ಕಟ್ಟೆಚ್ಚರ ವಹಿಸಬೇಕು. ಅನಧಿಕೃತ ಮರಳು ಸಾಗಾಣಿಕೆ ಬಗ್ಗೆ ತೀವ್ರ ನಿಗಾ ಇಡುವಂತೆಯೂ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಬಿನೆಪಿ ಸದಸ್ಯ ಅರುಣ ಶಹಾಪುರ ಅವರು ಮಾತನಾಡಿ ಭೀಮಾ ನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಹೆಚ್ಚಿನ ನಿಗಾ ಇಡಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಬೇಕು. ಕೊರೊನಾ ಹಿನ್ನೆಲೆ ಬೀಟ್ ಪೊಲೀಸರನ್ನು ಹೆಚ್ಚಿಸಬೇಕಾಗಿರು ಹಿನ್ನೆಲೆಯಲ್ಲಿ ಜಿಲ್ಲೆಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಅನುಪಾತ ಆಧಾರದ ಮೇಲೆ ನಿಯೋಜಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಜಯಪುರ ಎಸ್ಪಿ ಅನುಪಮ ಅಗರವಾಲ ಅವರು ಮಾತನಾಡಿ, ಪೊಲೀಸ್ ಇಲಾಖೆಯ ಹೆಚ್ಚಿನ ಅಧಿಕಾರಿ ಸಿಬ್ಬಂದಿಗಳು ಕೊರೊನಾ ಪ್ರಥಮ ಹಾಗೂ ದ್ವಿತೀಯ ಲಸಿಕೆ ಪಡೆದಿರುವುದರಿಂದ ಪೊಲೀಸ್ ಇಲಾಖೆ ಸಿಬ್ಬಂದಿಗಳ ಆರೋಗ್ಯಕ್ಕೆ ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಲಾಕ್ ಡೌನ್ ಆರಂಭವಾದಾಗಿನಿಂದ 25 ಚೆಕ್ ಪೋಸ್ಟಗಳನ್ನು ಸ್ಥಾಪಿಸಿ 3 ಶಿಫ್ಟ ಲಗಳಲ್ಲಿ ಅಧಿಕಾರಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ಉಪವಿಭಾಗದ 4 ಮತ್ತು ಇಂಡಿ ಉಪವಿಭಾಗ ವ್ಯಾಪ್ತಿಯಲ್ಲಿ 7 ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ಮಾಡಲಾಗುತ್ತಿದೆ. ಅಂತಾರಾಜ್ಯ ಗಡಿಯಲ್ಲಿ ವಲಸೆ ಪ್ರಮಾಣ ಈಗ ಕಡಿಮೆಯಾಗಿದೆ. ಪೊಲೀಸ್ ಸಿಬ್ಬಂದಿಗಳಿಗೆ ಮೆಡಿಕಲ್ ರೀ ಎಂಬರ್ಸಮೆಂಟ್ ಅನುದಾನ ಬಿಡುಗಡೆ ಮಾಡಬೇಕು ಎಂದು ಎಸ್ಪಿಯವರು ಅವರು ಸಚಿವರ ಗಮನಕ್ಕೆ ತಂದರು.
ಈ ಸಭೆಯಲ್ಲಿ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪುರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸೇರಿದಂತೆ ಇಂಡಿ, ವಿಜಯಪುರ, ಬಸವನ ಬಾಗೇವಾಡಿ ಉಪವಿಭಾಗದ ಡಿ ವೈ ಎಸ್ಪಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.