ಬೆಂಗಳೂರು: ಕೊರೊನಾ ನಿಯಂತ್ರಣ ವಿಚಾರದಲ್ಲಿ ಈವರೆಗೆ ನಗರ ಕಡೆಗೆ ಗಮನ ಹರಿಸಿದ್ದ ರಾಜ್ಯ ಸರಕಾರ ಈಗ ಗ್ರಾಮೀಣ ಭಾಗದತ್ತ ದೃಷ್ಠಿ ನೆಟ್ಟಿದೆ.
ಕೊರೊನಾ ಸೋಂಕು ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶದಲ್ಲಿ ಮೈಕ್ರೋ ಕಂಟೇನ್ಮೆಂಟ್ ವಲಯ ನಿರ್ಮಾಣ ಮಾಡುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರಕಾರ ತನ್ನ ಸಂಪೂರ್ಣ ಗಮನವನ್ನು ಗ್ರಾಮೀಣ ಭಾಗಕ್ಕೆ ಮೀಸಲಿಡಲು ನಿರ್ಧರಿಸಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೈಕ್ರೋ ಕಂಟೇನ್ಮೆಂಟ್ ವಲಯ ಸ್ಥಾಪಿಸುವ ಜವಾಬ್ದಾರಿಯನ್ನು ತಾಲೂಕು ಆರೋಗ್ಯಾಧಿಕಾರಿಗಳು, ಪಿಡಿಓಗಳು ಮತ್ತು ಪೊಲೀಸರಿಗೆ ವಹಿಸಲಾಗಿದೆ ಎಂದು ತಿಳಿಸಿದರು.
ಕೊರೊನಾ ಸೋಂಕಿತರು ಯಾವ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಆ ಗ್ರಾಮಗಳಲ್ಲಿ ಮೈಕ್ರೋ ಕಂಟೇನ್ಮೆಂಟ್ ಜೋನ್ ಗಳನ್ನು ನಿರ್ಮಿಸಲಾಗುವುದು. ಈ ರೀತಿ ಮಾಡದ ಹೊರತು ಕೊರೊನಾ ಸೋಂಕು ಹರಡುವುದನ್ನು ನಿಲ್ಲಿಸುವುದು ಅಸಾಧ್ಯ. ಹೀಗಾಗಿ ಈ ಜೋನ್ ಗಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ತಪಾಸಣೆ ನಡೆಸುವಂತೆ ವೈದ್ಯರಿಗೆ ಆದೇಶ ನೀಡಲಾಗಿದೆ. ಸೋಂಕಿತರಿಗೆ ವಿಟಮಿನ್-ಸಿ, ಜಿಂಕ್ ಸೇರಿದಂತೆ ಕೊರೊನಾಗೆ ನೀಡಲಾಗುವ ಎಲ್ಲಾ ಔಷದೋಪಚಾರವನ್ನು ಒದಗಿಸಲಾಗುವುದು. ಸೋಂಕಿನ ಲಕ್ಷಣ ಹೊಂದಿರುವವರನ್ನು ಆರ್ ಎ ಟಿ ಮತ್ತು ಆರ್ ಟಿ ಸಿ ಪಿ ಸಿ ಆರ್ ಟೆಸ್ಟ್ ಗೆ ಒಳಪಡಿಸಲಾಗುವದು ಎಂದು ಅವರು ತಿಳಿಸಿದರು.
ಸಿಎಂ ವಿಡಿಯೋ ಕಾನ್ಫರೆನ್ಸ್
ಕೊರೊನಾ ಹೆಚ್ಚಾಗಿರುವ ರಾಜ್ಯದ ಆಯ್ದ ಕೆಲ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಈ ಮೂಲಕ ಗ್ರಾಮಾಂತರ ಪ್ರದೇಶದಲ್ಲಿರುವ ಕೊರೊನಾ ಪರಿಸ್ಥಿತಿಯನ್ನು ಸಿಎಂ ಅವಲೋಕನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಬ್ಲಾಕ್ ಫಂಗಸ್ ಗೆ 1000 ಎಂಜೆಕ್ಷನ್
ಈ ಮಧ್ಯೆ ರಾಜ್ಯದಲ್ಲಿ ಬ್ಲಾಕ್ ಫಂಗಸ್ ಸೋಂಕು ಹರಡುತ್ತಿದೆ. ಇದರ ನಿವಾರಣೆಗೆ ಕೇಂದ್ರ ರಾಸಾಯನಿಕ ಸಚಿವ ಡಿ. ವಿ. ಸದಾನಂದಗೌಡರು 1000ಕ್ಕೂ ಹೆಚ್ಚು ಎಂಜೆಕ್ಷನ್ ವಿತರಣೆ ಮಾಡುವ ಭರವಸೆ ನೀಡಿದ್ದಾರೆ. ಬೆಂಗಳೂರು, ಧಾರವಾಡ ಸೇರಿದಂತೆ ಯಾವ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಹರಡುತಿದೆಯೋ ಅಲ್ಲಿ ಈ ಚಿಕಿತ್ಸೆಗೆ ವಿಶೇಷವಾದ ವಾರ್ಡ್ ನಿರ್ಮಾಣ ಮಾಡುವಂತೆ ಸೂಚನೆ ನೀಡಲಾಗಿದೆ. ಅದರ ಜೊತೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲು ಜಿಲ್ಲಾ ಮಟ್ಟದಲ್ಲಿ ಮಕ್ಕಳ ವಿಶೇಷ ವಾರ್ಡ್ ಹಾಗೂ ಅದರ ಜೊತೆಗೆ ಐಸಿಯು ಚಿಕಿತ್ಸಾ ಸೌಲಭ್ಯವನ್ನು ವ್ಯವಸ್ಥೆ ಮಾಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು.