ವಿಜಯಪುರ: ಕಳೆದ ಎರಡು ತಿಂಗಳಿಂದ ಹೆಚ್ಚಳವಾಗಿದ್ದ ಕೊರೊನಾ ರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ ಪ್ಯಾಕ್ ಫಂಗಸ್ ಕಾಯಿಲೆಯಿಂದ ಬಳಲುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ. ಇದು ಆತಂಕಕಾರಿ ವಿಷಯವಾಗಿದ್ದು, ಈ ರೋಗದ ಚಿಕಿತ್ಸೆಗೆ ಅಗತ್ಯವಿರುವ ಆಂಪೊಟೆರಿಸಿನ್ ಎಂಜೆಕ್ಷನ್ ನ್ನು ಸರಕಾರ ಕೂಡಲೇ ಪೂರೈಸಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ ಮತ್ತು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಮಾಜಿ ಸಚಿವ ಮತ್ತು ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲ್ಲಿ ವೈದ್ಯರ ಸಭೆ ನಡೆಸಿ ಅವರು, ಉಪಕುಲಪತಿ ಡಾ. ಆರ್. ಎಸ್, ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಅವರಿಂದ ಮಾಹಿತಿ ಪಡೆದ ಎಂ. ಬಿ. ಪಾಟೀಲ ಅವರು, ಕೊರೊನಾ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಈ ಹಿಂದೆ 450 ಕೊರೊನಾ ರೋಗಿಗಳು ದಾಖಲಾಗಿದ್ದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಈಗ ಆ ಸಂಖ್ಯೆ 250ಕ್ಕೆ ಇಳಿಮುಖವಾಗಿದೆ. ಇದು ಸಮಾಧಾನಕರ ವಿಷಯ ಎಂದು ಅವರು ತಿಳಿಸಿದರು.
ಕೊರೊನಾ ನಂತರದಲ್ಲಿ ಕಾಡುವ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈವರೆಗೆ ಬಿ ಎಲ್ ಡಿ ಈ ಆಸ್ಪತ್ರೆಗೆ 56 ಜನ ಬ್ಲ್ಯಾಕ್ ಫಂಗಸ್ ರೋಗಿಗಳು ದಾಖಲಾಗಿದ್ದಾರೆ. ಎಂಟು ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮೂರು ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ತೆರಳಿದ್ದಾರೆ. ಸದ್ಯ 45 ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಆಂಪೊಟೆರಿಸಿನ್ ಎಂಜೆಕ್ಷನ್ ಕೇವಲ ಸರಕಾರಿ ಆಸ್ಪತ್ರೆಗೆ ಹಾಗೂ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ ಮಾತ್ರ ನೀಡುತ್ತೇವೆ ಎಂಬ ಸರಕಾರದ ನಿಲುವು ಬದಲಾವಣೆಯಾಗಬೇಕು. ಔಷಧಿ ಇಲ್ಲದೆ ರೋಗಿಗಳಿಗೆ ಖಾಸಗಿ ಆಸ್ಪತ್ರೆಯವರು ಚಿಕಿತ್ಸೆ ನೀಡಲು ಹೇಗೆ ಸಾಧ್ಯ? ಇದು ನೈತಿಕವಾಗಿ ಕೂಡ ಸರಿಯಲ್ಲ. ಒಬ್ಬ ಬ್ಲ್ಯಾಕ್ ಫಂಗಸ್ ರೋಗಿಗೆ ಕನಿಷ್ಠ 50 ಎಂಜೆಕ್ಷನ್ ಡೋಸ್ ಗಳು ಬೇಕಾಗುತ್ತವೆ. ಪರಿಸ್ಥಿತಿ ಹೀಗಿರುವಾಗ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿರುವ 45 ರೋಗಿಗಳ ಸಂಖ್ಯೆಗೆ ಅನುಗುಣವಾಗಿ 2250 ಡೋಸ್ ಎಂಜೆಕ್ಷನ್ ಬೇಕಾಗುತ್ತವೆ. ಆಗ ಮಾತ್ರ ಪೂರ್ಣ ಚಿಕಿತ್ಸೆ ನೀಡಲು ಸಾಧ್ಯ. ಸರಕಾರ ಈ ಎಂಜೆಕ್ಷನ್ ಗಳನ್ನು ನಮಗೆ ಉಚಿತವಾಗಿ ನೀಡಲಿ. ನಾವು ರೋಗಿಗಳಿಗೆ ಉಚಿತವಾಗಿಯೇ ಕೊಟ್ಟು, ಚಿಕಿತ್ಸೆ ಮಾಡುತ್ತೇವೆ. ಇಲ್ಲದಿದ್ದರೆ ಸರಕಾರವೇ ಮುಂದಾಗಿ ಎಲ್ಲ ಬ್ಲ್ಯಾಕ್ ಫಂಗಸ್ ರೋಗಿಗಳನ್ನು ತಾವೇ ದಾಖಲಿಸಿ ಚಿಕಿತ್ಸೆ ನೀಡಲಿ. ಅಲ್ಲಿಯೂ ನಮ್ಮ ಸಹಕಾರ ನೀಡುತ್ತೇವೆ. ಇಲ್ಲವಾದಲ್ಲಿ ಕನಿಷ್ಠ ಪಕ್ಷ ಅಗತ್ಯವಿರುವ ಎಂಜೆಕ್ಷನ್ ಗಳನ್ನಾದರೂ ಒದಗಿಸಲಿ ಎಂದು ಎಂ. ಬಿ. ಪಾಟೀಲ ಮನವಿ ಮಾಡಿದ್ದಾರೆ.