ಬಸವ ನಾಡಿನಲ್ಲಿ ಉಚಿತವಾಗಿ ಬಡವರ ಹೊಟ್ಟೆ ತುಂಬಿಸುತ್ತಿರುವ ಇಂದಿರಾ ಕ್ಯಾಂಟಿನ್ ಗಳು

ವಿಜಯಪುರ: ರಾಜ್ಯಾದ್ಯಂತ ಈಗ ಕೊರೊನಾ ಎರಡನೇ ಅಲೆಯದ್ದೆ ಕಾಟ. ಹೀಗಾಗಿ ಮೂರನೇ ಈ ಅಲೆಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಲಾಕಡೌನ್ ವಿಸ್ತರಿಸಿದ್ದು, ನಾನಾ ವರ್ಗಗಳಿಗೆ ಪ್ಯಾಕೇಜ್ ಕೂಡ ಘೋಷಣೆ ಮಾಡಿದೆ.

ಈ ಲಾಕಡೌನ್ ಸಂದರ್ಭದಲ್ಲಿ ಬಡವರು ಮತ್ತು ನಿರ್ಗತಿಕರಾರೂ ಉಪವಾಸದಿಂದ ಇರಬಾರದು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಉಪಹಾರ ಮತ್ತು ಊಟ ನೀಡಲಾಗುತ್ತಿದೆ. ಈ ಇಂದಿರಾ ಕ್ಯಾಂಟಿನ್ ಗಳು ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಈಗ ಬಡವರ ಪಾಲಿಗೆ ಹೊಟ್ಟೆ ತುಂಬಿಸುವ ತಾಣಗಳಾಗಿವೆ.

ವಿಜಯಪುರದಲ್ಲಿ ಇಂದಿರಾ ಕ್ಯಾಂಟಿನ್ ನಲ್ಲಿ ತಿಂಡಿ, ಊಟ ತಯಾರಿಸುತ್ತಿರುವುದು

ಬಡವರು, ನಿರ್ಗತಿಕರು ಮತ್ತು ನಿರಾಶ್ರಿತರು ಉಪವಾಸದಿಂದ ಇರಬಾರದೆಂದು ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದ್ದು, ಈಗ ಬಡವರು ಇಂದಿರಾ ಕ್ಯಾಂಟೀನ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಒಂದು ಹೊತ್ತು ತಿಂಡಿ, ಎರಡು ಹೊತ್ತು ಊಟ ಮಾಡುವ ಮೂಲಕ ಹಸಿದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಗುಮ್ಮಟನಗರಿ ವಿಜಯಪುರ ದಲ್ಲಿ ಇಂದಿರಾ ಕ್ಯಾಂಟೀನ್ ಗಳಲ್ಲಿ ಕೊರೊನಾ ರೂಲ್ಸ್ ಪಾಲಿಸಿಕೊಂಡು ಊಟ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರತಿದಿನ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡುವ ಬಡವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ವಿಜಯಪುರದ ಇಂದಿರಾ ಕ್ಯಾಂಟಿನ್ ನಲ್ಲಿ ಬಡವರು ಆಹಾರದ ಪಾಕೀಟು ಪಡೆಯಲು ನಿಂತಿರುವುದು

ವಿಜಯಪುರದ ಇಂದಿರಾ ಕ್ಯಾಂಟಿನ್ ವ್ಯವಸ್ಥಾಪಕ ಸಚಿನ ಝಳಕಿ ಅವರ ಪ್ರಕಾರ, ಲಾಕಡೌನ್ ಗೂ ಮುಂಚೆ ಪ್ರತಿದಿನ 300 ರಿಂದ 360 ಮಂದಿ ಊಟಕ್ಕೆ ಬರುತ್ತಿದ್ದರು. ಲಾಕಡೌನ್ ಆರಂಭವಾದಾಗಿನಿಂದ ಪ್ರತಿದಿನ 450 ರಿಂದ 500 ಜನ ಬಂದು ಊಟ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ಅಲ್ಪೋಹಾರಕ್ಕಾಗಿ ರೂ. 5, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕಾಗಿ ರೂ. 10 ತೆಗೆದುಕೊಳ್ಳಲಾಗುತ್ತಿತ್ತು. ಈಗ ಸರಕಾರದ ಆದೇಶದಂತೆ ಉಚಿತವಾಗಿ ಊಟ ನೀಡಲಾಗುತ್ತಿದೆ. ಬೆಳಿಗ್ಗೆ ಇಡ್ಲಿ, ಉಪ್ಪಿಟ್ಟು, ಚಿತ್ರಾನ್ನ ಮತ್ತು ಮಧ್ಯಾಹ್ನ ಹಾಗೂ ರಾತ್ರಿ ಪುಳಿಯೋಗರೆ, ಮಸಾಲೆ ಅನ್ನ, ಮೇಂಥ್ಯ ಪಲಾವು, ಜೀರಾ ರೈಸ್ ವಿತರಿಸಲಾಗುತ್ತಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಬರಲಾಗದ ಅಶಕ್ತರಿಗೆ ನಾನಾ ಸಂಘ-ಸಂಸ್ಥೆಗಳು ಮತ್ತು ಅನ್ನದಾನ ಮಾಡುವ ಬಯಸುವ ಜನರಿಗೂ ಪಾರ್ಸಲ್ ಪ್ಯಾಕೆಟ್ ಮಾಡಿ ಕೊಡಲಾಗುತ್ತಿದೆ.

ಇಷ್ಟು ದಿನ ಇಂದಿರಾ ಕ್ಯಾಂಟೀನ್ ಎಂದರೆ ಮೂಗು ಮುರಿಯುತ್ತಿದ್ದ ಜನರಿಗೆ ಈಗ ಹೊಟ್ಟೆ ತುಂಬಿಸಿಕೊಳ್ಳಲು ಇಂದಿರಾ ಕ್ಯಾಂಟೀನ್ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲದೇ ತಮ್ಮ ಮನೆಯವರಿಗೆ ಸುತ್ತಲಿನ ಬಡವರಿಗೆ ಅನ್ನವನ್ನು ಹಂಚುತ್ತಿದ್ದಾರೆ. ವಿಜಯಪುರ ನಗರದ ಎಲ್ಲ ಇಂದಿರಾ ಕ್ಯಾಂಟೀನ್ ನಲ್ಲಿ ಅಲ್ಲಿನ ಸಿಬ್ಬಂದಿ ನಗುಮುಖದಿಂದಲೇ ಸ್ವಾಗತಿಸಿ, ಪಾರ್ಸಲ್ ಪ್ಯಾಕೇಟ್ ನೀಡುತ್ತಿದ್ದಾರೆ. ಶುಧ್ದ ಮತ್ತು ಶುಚಿಯಾದ ಆಹಾರ ಬಡವರ ಹೊಟ್ಟೆ ತುಂಬಿಸುತ್ತಿದೆ. ಸರಕಾರ ಇಂದಿರಾ ಕ್ಯಾಂಟಿನ್ ಮೂುಲಕ ಉಚಿತ ಊಟ ನೀಡುವ ಒಳ್ಳೆಯ ನಿರ್ಧಾರ ಕೈಗೊಂಡಿದೆ.

ದುಡಿಯಲು ಉದ್ಯೋಗ ಇಲ್ಲದವರು, ಕೈಯಲ್ಲಿ ದುಡ್ಡಿಲ್ಲದೇ ಇರುವಾಗ ಇಂದಿರಾ ಕ್ಯಾಂಟೀನ್ ಬಡವರ ಪಾಲಿಗೆ ವರದಾನವಾಗಿದೆ. ಒಂದು ಹೊತ್ತು ತಿಂಡಿ, ಎರಡು ಹೊತ್ತು ಊಟ ಸಿಗುವುದರಿಂದ ಸ್ವಲ್ಪ ನೆಮ್ಮದಿಯಿಂದ ಇರಬಹುದಾಗಿದೆ ಎನ್ನುತ್ತಾರೆ ವಿಜಯಪುರದ ಯುವಕ ವಿಜಯ ಜೋಶಿ ಮತ್ತು ರಾಕೇಶ ಜೋಶಿ. ಒಟ್ಟಾರೆ ಬಡವರ ಹೊಟ್ಟೆ ತುಂಬಿಸುವ ಸದುದ್ದೇಶದಿಂದ ಆರಂಭಿಸಿದ್ದ ಇಂದಿರಾ ಕ್ಯಾಂಟಿನ್ ಈಗ ನಿಜವಾಗಿಯೂ ಬಡವರ ಹೊಟ್ಟೆ ತುಂಬಿಸುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ.

Leave a Reply

ಹೊಸ ಪೋಸ್ಟ್‌