ವಿಜಯಪುರ: ಕೊರೊನಾ ಲಸಿಕೆ ನೀಡುವ ಕುರಿತಂತೆ ಇಲಾಖಾವಾರು ನೋಡಲ್ ಅಧಿಕಾರಿಗಳನ್ನು ನೇಮಿಕ ಮಾಡಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆದೇಶ ಹೊರಡಿಸಿದ್ದಾರೆ.
ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯುವ ಕುರಿತಂತೆ ಪಟ್ಟಿ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆರ್ ಸಿ ಎಚ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಅಭಿಯಾನದಡಿ ನಾನಾ ಹಂತಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೇ 20 ರಂದು ಸರಕಾರ ನಿಗದಿ ಪಡಿಸಿದ 18 ರಿಂದ 44 ವರ್ಷದ ಕರೋನಾ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಮೊದಲನೇ ಡೋಸ್ ಲಸಿಕೆಯನ್ನು ನೀಡಲು ಇಲಾಖಾವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ನೋಡಲ್ ಅಧಿಕಾರಿಗಳು ಮುಂಚಿತವಾಗಿ ಸರಕಾರದ ಆದೇಶದಲ್ಲಿರುವ ಮುಂಚೂಣಿ ಕಾರ್ಯಕರ್ತರ ಪಟ್ಟಿಯನ್ನು ತಯಾರಿಸಿ ಜಿಲ್ಲಾ ಆರ್ ಸಿ ಎಚ್ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.
ಪಟ್ಟಿಯಲ್ಲಿರುವ ಫಲಾನುಭವಿಗಳಿಗೆ ಆಯಾ ನೋಡಲ್ ಅಧಿಕಾರಿಗಳು ನಿಗದಿತ ನಮೂನೆಯಲ್ಲಿ ದೃಢಿಕೃತ ಪ್ರಮಾಣ ಪತ್ರವನ್ನು ನೀಡಿ, ಆಯಾ ಇಲಾಖೆಗಳಿಗೆ ನಿಗದಿ ಪಡಿಸಿದ ದಿನಾಂಕ ಹಾಗೂ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆಯನ್ನು ಪಡೆಯಲು ಸೂಚಿಸಬೇಕು. ಮುಂಬರುವ ದಿನಗಳಲ್ಲಿ ಈ ಆದೇಶದಲ್ಲಿ ತಿಳಿಸಿರುವ 18 ರಿಂದ 44 ವರ್ಷದ ಆದ್ಯತೆಯ ಗುಂಪಿನಲ್ಲಿರುವ ಇತರೆ ಇಲಾಖೆಗಳ ಅರ್ಹ ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲಾಗುವುದು. ಅಧ್ಯತೆಯ ಗುಂಪಿನಲ್ಲಿ ಸೂಚಿಸಿರುವವರು ವಿನಾಕಾರಣ ಸರಕಾರದ ಆದೇಶದ ಪ್ರತಿಯನ್ನು ತೆಗೆದುಕೊಂಡು ಪ್ರಸ್ತುತ ಲಸಿಕೆ ನೀಡಲಾಗುತ್ತಿರುವ ಕೇಂದ್ರಗಳಿಗೆ ತೆರಳಿ ಲಸಿಕೆ ನೀಡಬೇಕೆಂದು ಒತ್ತಾಯ ಮಾಡಬಾರದು. 18 ರಿಂದ 44 ವರ್ಷದ ಸಾಮಾನ್ಯ ನಾಗರಿಕರಿಗೆ ಲಸಿಕೆಯನ್ನು ನೀಡುವ ಪ್ರಕ್ರಿಯೆಯನ್ನು ಸರಕಾರದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ. ಮಹೇಶ ನಾಗರಬೆಟ್ಟ ಮಾತನಾಡಿ, ಗುರುತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳಿಗೆ ಮತ್ತು ರಾಜ್ಯ ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಿದ ನಂತರವೇ ಸರಕಾರದ ಸೂಚನೆಯಂತೆ ಆದ್ಯತೆ ಗುಂಪುಗಳಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.
ಸಧ್ಯಕ್ಕೆ ಯಾರೆಲ್ಲ ಲಸಿಕೆ ಪಡೆಯಲು ಅವಕಾಶವಿದೆ ಗೊತ್ತಾ?
ಈಗ ನಡೆಯುತ್ತಿರುವ ಕೊರೊನಾ ಲಸಿಕೆ ಕಾರ್ಯಕ್ರಮದಲ್ಲಿ ಸರಕಾರ ಯಾರು ಸಧ್ಯಕ್ಕೆ ಅರ್ಹರು ಎಂಬುದನ್ನು ನಿಗದಿ ಪಡಿಸಿ ಆದೇಶ ಹೊರಡಿಸಿದೆ. ಅದರಂತೆ ಕೊರೊನಾ ಮುಂಚೂಣಿ ಕಾರ್ಯಕರ್ತರಾದ ಅಂಗವೈಕಲ್ಯ ಹೊಂದಿರುವ(ಮಾನಸಿಕ ಅಸ್ವಸ್ಥೆತೆ ಸೇರಿದಂತೆ) ಫಲಾನುಭವಿಗಳು ಮತ್ತು ಅವರ ಒಬ್ಬ ಆರೈಕೆದಾರರು, ಕೈದಿಗಳು, ಚಿತಾಗಾರ, ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರು, ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು, ಕೊರೊನಾ ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು, ಸರಕಾರಿ ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಇಲಾಖೆ, ಅಂಚೆ ಇಲಾಖೆಯ ಸಿಬ್ಬಂದಿ, ಬೀದಿ ಬೀದಿಯ ವ್ಯಾಪಾರಿಗಳು, ಭದ್ರತೆ ಮತ್ತು ಕಚೇರಿಗಳನ್ನು ಹೌಸ್ ಕೀಪಿಂಗ್ ಸಿಬ್ಬಂದಿಗಳು, ನ್ಯಾಯಾಂಗ ಇಲಾಖೆ ಅಧಿಕಾರಿಗಳು, ವಯೋವೃದ್ಧರ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಆರೈಕೆದಾರರು, ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಧ್ಯಮದವರು, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು, ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು(ಪೆಟ್ರೋಲ್ ಬಂಕ್ ಸಿಬ್ಬಂದಿ ಸೇರಿ) ಔಷಧಿ ತಯಾರಿಸುವ ಕಂಪನಿಯ ಸಿಬ್ಬಂದಿ, ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿ, ಅಧಿಕೃತ ಗುರುತಿನ ಚೀಟಿ ಹೊಂದಿರದ ಫಲಾನುಭವಿಗಳು(ವೃದ್ದಾಶ್ರಮ ವಾಸಿಗಳು, ನಿರ್ಗತಿಕರು), ಭಾರತೀಯ ಆಹಾರ ನಿಗಮ ಸಿಬ್ಬಂದಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೆಲಸಗಾರರು ಸಧ್ಯಕ್ಕೆ ಲಸಿಕೆ ಪಡೆಯಬಹುದಾಗಿದೆ.
ಆದ್ಯತೆ ಗುಂಪುಗಳಲ್ಲಿ ಬರುವ ಕಟ್ಟಡ ಕಾರ್ಮಿಕರು, ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾದಾರರು, ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳು, ಬ್ಯಾಂಕ್ ಸಿಬ್ಬಂದಿ, ಪೆಟ್ರೋಲ್ ಬಂಕ್ ಕೆಲಸಗಾರರು, ಚಿತ್ರೋದ್ಯಮದ ಉದ್ಯಮಿಗಳು, ಕಾರ್ಯಕರ್ತರು, ಸಿಬ್ಬಂದಿ, ನ್ಯಾಯವಾದಿಗಳು, ಹೋಟೆಲ್ ಮತ್ತು ಅತಿತ್ಯ ಸೇವಾದಾರರು, ಕೆ ಎಂ ಎಫ್ ಸಿಬ್ಬಂದಿಗಳು, ರೈಲ್ವೆ ಸಿಬ್ಬಂದಿಗಳು, ಗಾರ್ಮೆಂಟ್ ಕಾರ್ಖಾನೆ ಸಿಬ್ಬಂದಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು, ಜಿ ಎ ಐ ಎಲ್ ಸಿಬ್ಬಂದಿಗಳು, ಆರ್ ಎಸ್ ಕೆ ಕೆಲಸಗಾರರು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳು, ಸ್ವಧಾರ ಗೃಹ ನಿವಾಸಿಗಳು ಮತ್ತು ರಾಜ್ಯ ಮಹಿಳಾ ನಿಲಯವಾಸಿಗಳು(ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ), ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ ಸಿಬ್ಬಂದಿಗಳು ಲಸಿಕೆ ಪಡೆಯಬಹುದಾಗಿದೆ.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪ್ಸೆ, ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ. ಮಹೇಶ ನಾಗರಬೆಟ್ಟ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.