ವಿಜಯಪುರ: ರೈತರು ತಮ್ಮ ಕೃಷಿ ಬೆಳೆಗಳ ಮಾರಾಟ ಮತ್ತು ಸರಬರಾಜಿಗೆ ಯಾವುದೇ ನಿರ್ಬಂಧವಿಲ್ಲ. ರೈತರು ತರುವ ತರಕಾರಿ,ಹಣ್ಣು, ಕೃಷಿ ಬೆಳೆಗಳನ್ನು ವರ್ತಕರಿಂದ ವ್ಯಾಪಾರಸ್ಥರಿಗೆ ಮಾರಾಟ ಮಾಡಲು ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸುವಂತೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೃಷಿ, ತೋಟಗಾರಿಕೆ, ಎಪಿಎಂಸಿ ಇಲಾಖೆ ಅಧಿಕಾರಿಗಳು ಹಾಗೂ ತರಕಾರಿ, ಹಣ್ಣು, ಲಿಂಬೆ ಹಣ್ಣು ವರ್ತಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರ ಪಾರಂಪರಿಕ ಕೃಷಿ ಬೆಳೆ ಸೇರಿದಂತೆ ಹಣ್ಣು, ತರಕಾರಿ ಮತ್ತು ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ರೈತರು ಹಾಗೂ ವ್ಯಾಪಾರಸ್ಥರ ಮಧ್ಯೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸಿ ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.
ಲಾಕಡೌನ್ ಜಾರಿಯಲ್ಲಿದ್ದರೂ ಕೃಷಿ ಉತ್ಪನ್ನ ಸರಬರಾಜಿಗೆ ಯಾವುದೇ ನಿರ್ಬಂಧವಿಲ್ಲ. ಲಾಕಡೌನ್ ಮಾರ್ಗಸೂಚಿಗಳನ್ನು ಪಾಲಿಸಿ ಕೃಷಿ ಮಾರುಕಟ್ಟೆಯಲ್ಲಿ ರೈತರಿಗೆ ತೊಂದರೆಯಾಗದಂತೆ ನೆರವಾಗಬೇಕು. ರೈತರಿಂದ ಹೋಲಸೇಲ್ ವ್ಯಾಪಾರಸ್ಥರು ಮತ್ತು ಚಿಲ್ಲರೆ ವ್ಯಾಪಾರಿಗಳ ಮೂಲಕ ಕೃಷಿ ಉತ್ಪನ್ನಗಳು ಜನರಿಗೆ ತಲುಪುವಂತಾಗಬೇಕು. ಇಂಥ ಕಷ್ಟ ಕಾಲದಲ್ಲಿ ರೈತರಿಗೆ ಸ್ಪಂದಿಸಿ ನೆರವಾಗುವಂತೆ ವರ್ತಕರು ಮತ್ತು ವ್ಯಾಪಾರಸ್ಥರಲ್ಲಿ ಅವರು ಮನವಿ ಮಾಡಿದರು.
ಲಾಕಡೌನ್ ನೆಪ ಹೇಳಿಕೊಂಡು ರೈತರಿಗೆ ತೊಂದರೆ ಮಾಡುವುದನ್ನು ಸಹಿಸುವುದಿಲ್ಲ. ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ತಕ್ಷಣ ಅಪರ್ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಬಹುದು. ದೂರುಗಳಿದ್ದಲ್ಲಿ ತಮಗೂ ಮೆಸೇಜ್ ಮೂಲಕ ಸ್ಪಂಪರ್ಕಿಸಬಹುದಾಗಿದೆ. ಕೃಷಿ, ತೋಟಗಾರಿಕೆ, ಎಪಿಎಂಸಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ರೈತರಿಂದ ಗ್ರಾಹಕರವರೆಗೆ ಇರುವಂತಹ ಸಂಪರ್ಕ ಮತ್ತು ಮಾರುಕಟ್ಟೆಯಲ್ಲಿರುವ ಬೆಲೆಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಎಪಿಎಂಸಿಯಲ್ಲಿ ಬರುವ ತರಕಾರಿ, ಹಣ್ಣುಗಳಿಗೆ ಯಾವುದೇ ರೀತಿಯ ನಿರ್ಬಂಧ ಇರದಂತೆ ನೋಡಿಕೊಳ್ಳಬೇಕು. ಬೆಳಗ್ಗೆ ತರಕಾರಿ ಮತ್ತು ಹಣ್ಣು ಹಂಪಲಗಳ ಮಾರಾಟಕ್ಕೆ ಅವಕಾಶವಿದ್ದು, ನಂತರ ತಳ್ಳುವ ಗಾಡಿಯ ಮೂಲಕ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಅಲ್ಲದೇ, ಹಾಪಕಾಮ್ಸ್ ವಾಹನಗಳನ್ನು ಮತ್ತು ಹಣ್ಣು-ಹಂಪಲಗಳ ಮಾರಾಟ ವ್ಯವಸ್ಥೆಯನ್ನು ಸದೃಢಗೊಳಿಸಿ ಮನೆಮನೆಗೆ ವಾಹನಗಳ ಮೂಲಕ ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಲಿಂಬೆ ಹಣ್ಣು ವ್ಯಾಪಾರಕ್ಕೆ ವ್ಯವಸ್ಥೆ ಕಲ್ಲಿಸಲು ಸೂಚನೆ
ಇದೇ ವೇಳೆ, ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುವ ಲಿಂಬೆ ಹಣ್ಣು ವಹಿವಾಟಿಗೆ ಸಂಬಂಧಿಸಿದಂತೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಉತ್ತಮ ಬೆಲೆಯಲ್ಲಿ ಲಿಂಬೆಹಣ್ಣು ಖರೀದಿಗೆ ವರ್ತಕರಲ್ಲಿ ಮನವಿ ಮಾಡಿದ ಡಿಸಿ, ಎಪಿಎಂಸಿ ವ್ಯಾಪ್ತಿಯಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಿ ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಬೇಕು. ಅದರಂತೆ ಇಲ್ಲಿಯ ಉತ್ಪನ್ನಗಳನ್ನು ಬೇರೆ ಜಿಲ್ಲೆಗಳಿಗೆ ಸರಬರಾಜು ಮಾಡಲು ಇಚ್ಚಿಸಿದಲ್ಲಿ ಅವಶ್ಯಕ ಗ್ರೀನ್ ಪಾಸ್ ಗಳಂತಹ ವ್ಯವಸ್ಥೆ ಸಹ ಮಾಡಲಾಗುವುದು. ಯಾವುದೇ ಸಂದರ್ಭದಲ್ಲಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ 25 ಸಾವಿರ ಲಿಂಬೆ ಬೆಳಯುವ ರೈತರಿದ್ದಾರೆ. ಜಿಲ್ಲೆಯಲ್ಲಿ 13 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಲಿಂಬೆ ಹಣ್ಣು ಬೆಳೆಯಲಾಗುತ್ತಿದೆ. ಈಗ ಬೆಲೆ ಕುಸಿತದಿಂದ ಲಿಂಬೆ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಪರಿಹಾರ ಕೂಡ ಒದಗಿಸಬೇಕು. ರಾಜ್ಯ ಸರಕಾರದಿಂದ ನೆರವು ಒದಗಿಸುವ ಅಗತ್ಯವಿದ್ದು, ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಲಿಂಬೆ ಹಣ್ಣಿನ ಬೆಳೆಯನ್ನು ಆಯ್ಕೆ ಮಾಡಲಾಗಿದೆ. ಈ ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಈ ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ್ ವಿಲಿಯಮ್ಸ್, ಎಪಿಎಂಸಿ ಕಾರ್ಯದರ್ಶಿ ಕೆ. ಎಮ್. ನಾಗೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ಧರಾಮಯ್ಯ ಬರಗಿಮಠ, ಎಪಿಎಂಸಿ ಸಹಾಯಕ ನಿರ್ದೇಶಕ ಚಬನೂರ ಸೇರಿದಂತೆ ಹಣ್ಣು ಹಾಗೂ ಲಿಂಬೆ ಹಣ್ಣು ವರ್ತಕರು, ವ್ಯಾಪಾರಸ್ಥರು ಉಪಸ್ಥಿತರಿದ್ದರು.