ವಿಜಯಪುರ: ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳ ಸಿಬ್ಬಂದಿಗೂ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ವಿಧಾನ ಪರಿಷತ ಸದಸ್ಯರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಭೆ ನಡೆಸಿದರು.
ಸಿಎಂ ಗೃಹ ಕಛೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಿದ ಈ ಸಭೆಯಲ್ಲಿ ವಿಧಾನ ಪರಿಷತ ಸದಸ್ಯ ಅರುಣ ಶಹಾಪೂರ, ಪುಟ್ಟಣ್ಣ, ಶಶೀಲ ನಮೋಶಿ, ಹಣಮಂತ ನಿರಾಣಿ, ಎಸ್. ವಿ. ಸಂಕನೂರ, ವೈ. ಎ. ನಾರಾಯಣಸ್ವಾಮಿ, ಚಿದಾನಂದಗೌಡ ಅವರು ಉಪಸ್ಥಿತರಿದ್ದರು.
ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಸರಕಾರ ಲಾಕಡೌನ್ ಜಾರಿ ಮಾಡಿದೆ. ಇದರಿಂದಾಗಿ ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳ ಸಿಬ್ಬಂದಿ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೂ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಈ ಹಿಂದೆಯೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದರು.
ಇಂದು ಸಿಎಂ ಭೇಟಿ ಮಾಡಿದ ಸಚಿವರು ಮತ್ತು ಸದಸ್ಯರು ಅನುದಾನ ರಹಿತ ಶಾಲೆ-ಕಾಲೇಜುಗಳ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಸರಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ನಿಧನರಾದ ಸಿಬ್ಬಂದಿಯ ಕುಟುಂಬಸ್ಥರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಒದಗಿಸಬೇಕು ಎಂದು ಈ ಸಭೆಯಲ್ಲಿ ವಿಧಾನ ಪರಿಷತ ಸದಸ್ಯರು ಆಗ್ರಹಿಸಿದರು.
ಈ ವಿಷಯಗಳ ಪ್ರಸ್ತಾವಕ್ಕೆ ಧನಾತ್ಮಕವಾಗಿ ಸ್ಪಂದಿಸಿದ ಸಿಎಂ ಬಿ. ಎಸ್. ಯಡಿಯೂರಪ್ಪ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ತಿಳಿಸಿದ್ದಾರೆ.
ಈ ಸಭೆಯಲ್ಲಿ ಶಿಕ್ಷಕ, ಪದವೀಧರರ ಕ್ಷೇತ್ರಗಳ ವಿಧಾನ ಪರಿಷತ ಸದಸ್ಯರಾದ ಪುಟ್ಟಣ್ಣ, ಶಶೀಲ ನಮೋಶಿ, ಹಣಮಂತ ನಿರಾಣಿ, ಎಸ್. ವಿ ಸಂಕನೂರ, ವೈ. ಎ. ನಾರಾಯಣಸ್ವಾಮಿ, ಚಿದಾನಂದಗೌಡ ಉಪಸ್ಥಿತರಿದ್ದರು.