ವಿಜಯಪುರ: ಅಮೇರಿಕ ಯುರೋಪ್ ರಾಷ್ಟ್ರಗಳು ಮತ್ತು ಇಸ್ರೆಲ್ ಈಗಾಗಲೇ ಕೊರೊನಾ ಲಸಿಕೆ ಕಾರ್ಯಕ್ರಮವ ನ್ನು ಮುಗಿಸಿವೆ. ಅಲ್ಲಿನ ಜನ ಕೊರೊನಾ ಮುಕ್ತರಾಗಿದ್ದಾರೆ. ಅಲ್ಲಿನ ಜನ-ಜೀವನ ಎಂದಿನಂತೆ ಸಹಜ ಸ್ಥಿತಿಗೆ ಮರಳುತ್ತಿದೆ. ಆ ದೇಶಗಳ ಮಾದರಿಯಲ್ಲಿ ಭಾರತದಲ್ಲಿಯೂ ಪ್ರಧಾನಿ ಮತ್ತು ರಾಜ್ಯದಲ್ಲಿ ಸಿಎಂ ಎಲ್ಲ ವಿಷಯಗಳನ್ನು ಬದಿಗಿಟ್ಟು ಕೂಡಲೇ ಎಲ್ಲ ಜನರಿಗೂ ಕೊರೊನಾ ಲಸಿಕೆ ಹಾಕಬೇಕು ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೊನಾ ಮೊದಲನೇ ಅಲೆ ಮುಗಿದು ಈಗ ಆರಂಭವಾಗಿರುವ ಎರಡನೇಯ ಅಲೆ ತನ್ನ ಪ್ರಭಾವದಿಂದ ಸಾಕಷ್ಟು ಹಾನಿಯನ್ನುಂಟು ಮಾಡುತ್ತಿದೆ. ಅಲ್ಲದೇ, ಭಾರತಕ್ಕೆ ಮುಂದೆ 3ನೇ ಅಲೆ ಆತಂಕವೂ ಇರುವ ಹಿನ್ನೆಲೆಯಲ್ಲಿ ಕೂಡಲೇ ದೇಶದ ಎಲ್ಲರಿಗೂ ಕೊರೊನಾ ಲಸಿಕೆ ಹಾಕಿಸಲು ಪ್ರಧಾನಿ ಮತ್ತು ರಾಜ್ಯದಲ್ಲಿ ಸಿಎಂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೊನಾ ಎರಡನೇ ಅಲೆಯಿಂದಾಗಿ ದೇಶದಲ್ಲಿ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ. ಅವರ ಕುಟುಂಬಗಳು ಬೀದಿಗೆ ಬಂದಿವೆ. ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ತಡೆಯಲು ದೇಶದ 10 0 ಕೋಟಿ ಜನರಿಗೆ ಕೊರೊನಾ ಲಸಿಕೆ ಮಾಡುವುದೊಂದೆ ಶಾಶ್ವತ ಪರಿಹಾರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರಕಾರ, ಪ್ರಧಾನಿ, ರಾಜ್ಯ ಸರಕಾರ, ಮುಖ್ಯಮಂತ್ರಿಗಳು ಉಳಿದ ಎಲ್ಲ ವಿಷಯಗಳನ್ನು ಬದಿಗಿರಿಸಿ, ಅತೀ ಕಡಿಮೆ ಅವಧಿಯಲ್ಲಿ 100 ಕೋಟಿ ಜನರಿಗೆ ವ್ಯಾಕ್ಸಿನೆಷನ್ ಮಾಡಿಸುವ ಅಭಿಯಾನವನ್ನು ಕೈಗೊಳ್ಳಬೇಕು. ಅದಕ್ಕೆ ಎಲ್ಲ ಅಗತ್ಯ ನೆರವು ಒದಗಿಸಿ, ವಿಶೇಷ ಆದ್ಯತೆಯನ್ನು ನೀಡಬೇಕಾದ ತುರ್ತು ಅಗತ್ಯವಿದೆ. ಆಗ ಮಾತ್ರ ಈ ಸಮಸ್ಯೆಗೆ ಸಂಪೂರ್ಣ ಮತ್ತು ಶಾಶ್ವತ ಪರಿಹಾರ ಸಾಧ್ಯ ಎಂದು ಶಾಸಕರು ತಿಳಿಸಿದ್ದಾರೆ.
ದೇಶದ ಒಟ್ಟು 130 ಕೋಟಿ ಜನರಲ್ಲಿ ಕನಿಷ್ಠ 100 ಕೋಟಿ ಜನರನ್ನು ಗುರಿಯಾಗಿಸಿ, ಈ ಲಸಿಕೆ ಹಾಕಿಸಬೇಕು. ನಮ್ಮ ದೇಶದಲ್ಲಿಯೇ ಹೆಚ್ಚಿನ ಲಸಿಕೆ ಉತ್ಪಾದನೆ ಮಾಡಬೇಕು. ಅಗತ್ಯವಿರುವಷ್ಟು ಬೇರೆ ರಾಷ್ಟ್ರಗಳಿಂದ ಕೂಡ ಲಸಿಕೆ ಆಮದು ಮಾಡಿಕೊಂಡು ಒಟ್ಟಾರೆ 100 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಇಟ್ಟುಕೊಂಡು ನಮ್ಮ ಸರಕಾರಗಳು ಕಾರ್ಯಪ್ರವೃತ್ತರಾಗಬೇಕು ಎಂದು ಎಂ. ಬಿ. ಪಾಟೀಲ ಸಲಹೆ ನೀಡಿದ್ದಾರೆ.