ಮೋರಟಗಿ, ದೇವಣಗಾಂವ ಚೆಕ್ ಪೋಸ್ಟ್ ಗಳಿಗೆ ವಿಜಯಪುರ ಡಿಸಿ, ಇಂಡಿ ಎಸಿ ದಿಢೀರ, ಭೇಟಿ, ಪರಿಶೀಲನೆ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮೋರಟಗಿ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೆಕ್ ಪೋಸ್ಟ್ ದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ಅವರು, ಅಕ್ರಮವಾಗಿ ಮರಳು ತುಂಬಿದ ವಾಹನಗಳು ಚೆಕ್ ಪೋಸ್ಟ್ ಮೂಲಕ ದಾಟಿ ಹೋಗದಂತೆ ತಡೆಯಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿ‌ನೆ ನೀಡಿದರು.

ನಂತರ ಬಗಲೂರ-ಘತ್ತರಗಿ ಸೇತುವೆಯನ್ನು ವೀಕ್ಷಿಸಿದ ಅವರು, ಅಲ್ಲಿಂದ ದೇವಣಗಾಂವ ಗ್ರಾಮದ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವಣಗಾಂವ ಗ್ರಾಮದ ಭೀಮಾ ನದಿ ದಂಡೆಯಲ್ಲಿ ಈಗಾಗಲೇ ವಶಪಡಿಸಿಕೊಂಡ ಅಕ್ರಮ ಮರಳನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ರಾಹುಲ ಸಿಂಧೆ ಮಾತನಾಡಿ, ಸುಮಾರು ರೂ. 5 ಲಕ್ಷ ಮೌಲ್ಯದ ವಶಪಡಿಸಿಕೊಂಡ ಮರಳು ವಶಪಡಿಸಿಕೊಳ್ಳಲಾಗಿದೆ. ಇಂಡಿ ತಾಲೂಕಿನಲ್ಲಿ ಈವರೆಗೆ ಸುಮಾರು ರೂ. 17 ಲಕ್ಷ ಮೌಲ್ಯದ ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದು, ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಅಕ್ರಮ ಮರಳು ಗಣಿಗಾರಿಕೆ ನಡೆಯದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ನೀಡಿದರು.

ಇದೇ ವೇಳೆ, ಮೇ 20ರಂದು ಬಬಲೇಶ್ವರ ತಾಲೂಕು ಮಮದಾಪುರ ಹೋಬಳಿಯ ವ್ಯಾಪ್ತಿಯ ಚಿಕ್ಕ ಗಲಗಲಿಯ ಗ್ರಾಮದ ಕಡೆಯಿಂದ ಬಬಲೇಶ್ವರ್ ಕಡೆಗೆ ಬರುತ್ತಿದ್ದ 3 ಕಳ್ಳತನದಿಂದ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮರಳು ಮತ್ತು ಲಾರಿಗಳನ್ನು ಜಪ್ತಿ ಮಾಡಿ ವಾಹನಗಳನ್ನು ಮತ್ತು ಅದರಲ್ಲಿನ ಮರಳನ್ನು ಬಬಲೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಇಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕಳೆದ 2 ತಿಂಗಳಲ್ಲಿ ಒಟ್ಟು 8 ಪ್ರಕರಣಗಳನ್ನು ದಾಖಲಿಸಿದ್ದು, ಫೆಬ್ರವರಿಯಲ್ಲಿ 3 ಹಾಗೂ ಮೇ ಯಲ್ಲಿ 5 ಪ್ರಕರಣಗಳನ್ನು ದಾಖಲಿಸಿ 5 ವಾಹನಗಳನ್ನು ಸೀಜ್ ಮಾಡಲಾಗಿದೆ. ಒಟ್ಟು 3344 ಟನ್ ಅಕ್ರಮ ಮರಳು ವಶಪಡಿಸಿಕೊಂಡಿದೆ ಎಂದು ಇಂಡಿ ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಧಿಕಾತಿಗಳ ಜೊತೆ ಈ ಸಂದರ್ಭದಲ್ಲಿ ಸಿಂದಗಿ ತಹಶೀಲ್ದಾರ್ ಸಂಜೀವಕುಮಾರ್ ದಾಸರ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಾದ ಚಿದಂಬರ, ಸಿಂದಗಿ ಪಿ ಎಸ್ ಆಯ್ ಸಂಗಮೇಶ ಹೊಸಮನಿ ಹಾಗೂ ಆಲಮೇಲ ಪಿ ಎಸ್ ಆಯ್ ಸುರೇಶ್ ಗಡ್ಡಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌