ವಿಜಯಪುರ: ಬೇರೆ ರಾಜ್ಯಗಳ ಮಾರುಕಟ್ಟೆಗಳಿಗೆ ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ತಲುಪಿಸಲು ಈಗಾಗಲೇ ತೋಟಗಾರಿಕೆ ಇಲಾಖೆಯಿಂದ ಹಸಿರು ಪಾಸ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಹಂತದಲ್ಲಿ ರೈತರು ಸರಕು ಸಾಗಾಟ ಮಾಡಲು ತೊಂದರೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.
ಯಾವುದೇ ಸಮಯದಲ್ಲಿ ಹೊರ ಜಿಲ್ಲೆ ಅಥವಾ ರಾಜ್ಯದಲ್ಲಿ ತಾವು ಕಳುಹಿಸುವ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಸಂಬಂಧಿಸಿದಂತೆ ತೊಂದರೆಯಾದಲ್ಲಿ, ರೈತರು ಅಪರ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಲ್ಲಿ ಅಗತ್ಯ ಸಹಾಯ ದೊರೆಯಲಿದೆ.
ಲಾಕಡೌನ್, ಜನತಾ ಕರ್ಫ್ಯೂ ಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಗ್ಗೆ ಏನಾದರೂ ಸಂದೇಹ ಬಂದರೆ ಜಿಲ್ಲಾಧಿಕಾರಿಗಳ ಕಛೇರಿಯ ದೂರವಾಣಿ ಸಂಖ್ಯೆ 1077 (08352-222102, 221261) ಕರೆಮಾಡಿ ಪರಿಹರಿಸಿಕೊಳ್ಳಲು ಅವರು ತಿಳಿಸಿದ್ದಾರೆ. ಅಲ್ಲದೇ, ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ ಉಪನಿರ್ದೇಶಕರು ಹೆಚ್.ಎಮ್ ಬರಗಿಮಠ- 9448999232
ಅವರನ್ನು ಸಂಪರ್ಕಿಸಬಹುದಾಗಿದೆ.
ವ್ಯಾಪಾರಸ್ಥರು ಯಾವುದೇ ನೆಪಗಳನ್ನು ಹೇಳಿ ರೈತರಿಗೆ ಕಡಿಮೆ ಬೆಲೆ ನೀಡಬಾರದು. ಕೊರೊನಾ ಸಮಯದಲ್ಲಿ ವರ್ತಕರು ತಮ್ಮ ಸಾಮಾಜಿಕ ಸೇವೆ ನೀಡುವಂತಾಗಬೇಕು. ಆದ್ದರಿಂದ ತಮ್ಮ ಲಾಭಾಂಶವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡುವ ಮೂಲಕ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ವಿನಂತಿ ಮಾಡಿದ್ದಾರೆ.
ಅನ್ಯ ರಾಜ್ಯಗಳ ಹೋಲಸೇಲ ವರ್ತಕರ ಮಾಹಿತಿಯನ್ನು ಕಲೆ ಹಾಕಲು ಹಾಗೂ ಅಲ್ಲಿಯ ಮಾರುಕಟ್ಟೆಯ ವಸ್ತುಸ್ಥಿತಿಯ ಕುರಿತು ಮಾಹಿತಿ ಪಡೆಯಲು, ಉತ್ಪಾದಕರ ಸಂಘಗಳ ಮೂಲಕ ಸದರಿ ವ್ಯಾಪಾರಿಗಳಿಗೆ ರೈತರ ಉತ್ಪನ್ನಗಳನ್ನು ತಲುಪಿಸಲು ಮತ್ತು ಸಮನ್ವಯ ಸಾಧಿಸಲು ಎ.ಪಿ.ಎಂ.ಸಿ ಅಧಿಕಾರಿಗಳು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೂ ಸಹ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಹಾಪ್ ಕಾಮ್ಸ್ ನಿಂದ ನಗರ ನಿವಾಸಿಗಳಿಗೆ ದಿನನಿತ್ಯದ ಅಗತ್ಯ ಹಣ್ಣು ಮತ್ತು ತರಕಾರಿಗಳನ್ನು 11 ಮಳಿಗೆಗಳ ಮುಖಾಂತರ ಈಗಾಗಲೇ ಮಾರಾಟ ಮಾಡಲಾಗುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಹಾಪಕಾಮ್ಸ್ ಅವರು ತಿಳಿಸಿದ್ದಾರೆ. ಮನೆ ಮನೆಗೆ ಹಣ್ಣು ಮತ್ತು ತರಕಾರಿಗಳು ತಲುಪುವ ಹಾಗೆ ಸಂಚಾರಿ ವಾಹನ ಮೂಲಕ ಮಾರಾಟ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಬೆಳೆದಂತಹ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ತಾವು ಕೂಡ ರೈತರಿಗೆ ಅನುಕೂಲ ಮಾಡಿಕೊಡಲು ಹಾಪಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರಿಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ
ಅವರು ರೈತರು ಬೆಳೆದ ಲಿಂಬೆ ಬೆಳೆಗೆ ಉತ್ತಮ ಬೆಲೆ ದೊರಕಿಸಲು ಲಿಂಬೆ ಸಂರಕ್ಷಣೆ ಘಟಕಗಳನ್ನು ಗುರುತಿಸಿ, ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಲು ಮತ್ತು ದೆಹಲಿಯ ಆಜಾದಪುರ ಮಂಡಳಿಗೆ ಲಿಂಬೆಯನ್ನು ತಲುಪಿಸಲು ಕ್ರಮ ವಹಿಸಲಾಗುವುದು. ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.