ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರಕ್ಕೆ ಸಧ್ಯಕ್ಕೆ ಶಾಸಕರಿಲ್ಲ. ಹೀಗಾಗಿ ಸಿಂದಗಿ ಮತ್ತು ಆಲಮೇಲ ತಾಲೂಕಿನಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಸರಕಾರ ಕೂಡಲೇ ರೂ. 1 ಕೋ. ಅನುದಾನ ಬಿಡುಗಡೆ ಮಾಡುವಂತೆ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಸಿಎಂ ಮತ್ತು ಆರೋಗ್ಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ದಿ. ಎಂ. ಸಿ. ಮನಗೂಳಿ ಅವರ ನಿಧನದಿಂದ ಸಿಂದಗಿ ಮತಕ್ಷೇತ್ರದಲ್ಲಿ ಶಾಸಕ ಸ್ಥಾನ ತೆರವಾಗಿದೆ. ರಾಜ್ಯ ಸರಕಾರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಶಾಸಕರ ಅನುದಾನವನ್ನು ಕೋವಿಡ್-19 ನಿಯಂತ್ರಣಕ್ಕೆ ಬಳಸಿಕೊಳ್ಳಲು ಆದೇಶ ಹೊರಡಿಸಿದೆ. ಆದರೆ, ಸಿಂದಗಿ ತಾಲೂಕಿಗೆ ಶಾಸಕರ ಕೊರತೆ ಇರುವ ಹಿನ್ನೆಲೆಯಲ್ಲಿ ಅನುದಾನದ ಕೊರತೆಯೂ ಸಹಜವಾಗಿ ಉಂಟಾಗುತ್ತದೆ.
ಆದ್ದರಿಂದ ಸಿಂದಗಿ ಮತ್ತು ಆಲಮೇಲ ತಾಲೂಕುಗಳ ಜನರ ಆರೋಗ್ಯದ ಹಿತದೃಷ್ಠಿಯಿಂದ ಇಲ್ಲಿನ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಅಳವಡಿಸಬೇಕಾಗಿದೆ. ಅಷ್ಟೇ ಅಲ್ಲ, ಈ ಸರಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕಾಗಿದೆ. ಅಲ್ಲದೇ, ಮಕ್ಕಳ ಹಿತದೃಷ್ಠಿಯಿಂದ ಪ್ರತ್ಯೇಕ ವಾರ್ಡ್ ಕೂಡ ತೆರೆಯಬೇಕಾಗಿದೆ. ಆಕ್ಸಿಜನ್ ವ್ಯವಸ್ಥೆ ಕೂಡ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳಿಗೆ ತಲಾ ರೂ. 1 ಕೋ. ಅನುದಾನ ಮಂಜೂರು ಮಾಡಬೇಕು ಎಂದು ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಪತ್ರ ಬರೆದಿದ್ದಾರೆ.
ಅರುಣ ಶಹಾಪುರ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ ಅವರಿಗೆ ಬರೆದ ಪತ್ರದ ಪ್ರತಿಗಳು ಬಸವ ನಾಡಿಗೆ ಲಭ್ಯವಾಗಿವೆ.