ಸಿಎಂ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಸಚಿವರು, ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಆಗ್ರಹ

ವಿಜಯಪುರ: ಸಿಎಂ ಬದಲಾವಣೆ ಕುರಿತು ಷಡ್ಯಂತ್ರ ನಡೆಸುತ್ತಿರುವ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಮತ್ತು ಇದರಲ್ಲಿ ಶಾಮೀಲಾಗಿರವ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಿಜೆಪಿ ಶಾಸಕ ಮತ್ತು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಕೇವಲ ಗಾಳಿ ಸುದ್ದಿ. ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಸಧ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಯಾರೋ ಒಂದಿಬ್ಬರು ಮಾಡುವ ಷಡ್ಯಂತ್ರಕ್ಕೆ ಮಹತ್ವ ಕೊಡುವುದಿಲ್ಲ. ಬಿಜೆಪಿಯ ಎಲ್ಲ ಶಾಸಕರೂ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ವಿಶ್ವಾಸ ಹೊಂದಿದ್ದಾರೆ. ಸಚಿವ ಸಂಪುಟದಲ್ಲಿದ್ದುಕೊಂಡು ಸಿಎಂ ಬದಲಾವಣೆಗೆ ಷಡ್ಯಂತ್ರ ನಡೆಸುತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ನಾಯಕತ್ವದ ವಿರುದ್ಧ ಧ್ವನಿ ಎತ್ತುವ ಶಾಸಕರ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುದ್ದೇಬಿಹಾಳ ಶಾಸಕ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ

ಯಡಿಯೂರಪ್ಪನವರಿಗೆ ಸಿಎಂ ಹುದ್ದೆ ಸಿಕ್ಕಿದ್ದು ಭಿಕ್ಷೆಯಲ್ಲ. ಅದು ಅವರ ಪರಿಶ್ರಮದ ಫಲ ಮತ್ತು ಅವರ ನಾಯಕತ್ವದಲ್ಲಿ ವಿಶ್ವಾಸ ಇಟ್ಟಿರುವ ಪಕ್ಷದ ರಾಷ್ಟ್ರೀಯ ನಾಯಕರ ವಿಶ್ವಾಸ ಹಾಗೂ ರಾಜ್ಯದ ಜನತೆಯ ಬೆಂಬಲದ ಪ್ರತೀಕ. ಇದನ್ನು ಯಾರೂ ಅಲುಗಾಡಿಸುವುದು ಸಾಧ್ಯವಿಲ್ಲ. 40-45 ವರ್ಷಗಳಿಂದ ದಿ. ಅನಂತಕುಮಾರ ಅವರ ಜೊತೆ ಸೇರಿ ಯಡಿಯೂರಪ್ಪ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಈ ಮಟ್ಟಕ್ಕೆ ತಂದಿದ್ದಾರೆ. ಅವರೊಬ್ಬ ಪ್ರಶ್ನಾತೀತ ನಾಯಕರು. ಅವರ ವಿರುದ್ಧ ಷಡ್ಯಂತ್ರ ನಡೆಸುವುದು ಪಕ್ಷಕ್ಕೆ ದ್ರೋಹ ಬಗೆದಂತೆ ಎಂದು ನಡಹಳ್ಳಿ ತಿಳಿಸಿದರು.

ಸಮಸ್ಯೆ ಇದ್ದರೆ ಯಡಿಯೂರಪ್ಪ ಅವರನ್ನು ನೇರವಾಗಿ ಭೇಟಿ ಮಾಡಿ ಬಗೆಹರಿಸಿಕೊಳ್ಳಲು ಅವಕಾಶ ಇದೆ. ಇದನ್ನು ಬಳಸಿಕೊಳ್ಳಬೇಕೇ ಹೊರತು ಷಡ್ಯಂತ್ರ ನಡೆಸಬಾರದು. ಮುಖ್ಯಮಂತ್ರಿ ವಿರುದ್ಧ ನಡೆಸುವ ಷಡ್ಯಂತ್ರ, ಅಪಪ್ರಚಾರ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. 2018ರ ಚುನಾವಣೆಯಲ್ಲಿ ನನಗೆ ಬಿಜೆಪಿ ಟಿಕೇಟ್ ಕೊಟ್ಟು, ನನ್ನ ಪರ ಪ್ರಚಾರಕ್ಕೆ ಬಂದು ಈ ಭಾಗದಲ್ಲಿ ಬಿಜೆಪಿಯ ಮೊದಲ ಶಾಸಕ ಎನ್ನುವ ಹೆಗ್ಗಳಿಕೆ ನನಗೆ ತಂದು ಕೊಟ್ಟವರು ಯಡಿಯೂರಪ್ಪನವರು. ಅವರ ನಾಯಕತ್ವದಲ್ಲಿ ನನ್ನ ಸಂಪೂರ್ಣ ವಿಶ್ವಾಸ ಇದೆ. ಒಂದಿಬ್ಬರನ್ನು ಹೊರತುಪಡಿಸಿ ನನ್ನಂತೆ ಎಲ್ಲ ಶಾಸಕರೂ ವಿಶ್ವಾಸ ಇರಿಸಿದ್ದಾರೆ. ನಮ್ಮೆಲ್ಲ ಶಾಸಕರ ಬೆಂಬಲ ಇರುವವರೆಗೂ ಯಡಿಯೂರಪ್ಪನವರನ್ನು ಸಿಎಂ ಹುದ್ದೆಯಿಂದ ಇಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

2018ರಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಚುನಾವಣಎ ನಡೆದಿದೆ. ಆಗ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಯಡಿಯೂರಪ್ಪನವರೇ ಸಿಎಂ ಎಂದು ಘೋಷಿಸಿ, ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು ಇಲ್ಲಿನ ಬೆಳವಣಿಗೆ ಗಮನಿಸುತ್ತಿದ್ದು, ಷಡ್ಯಂತ್ರ ನಡೆಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ. ಯಡಿಯೂರಪ್ಪನವರ ರಾಜಕೀಯ ಅನುಭವ ರಾಷ್ಟ್ರೀಯ ಮಟ್ಟದಲ್ಲಿ ಮಾಜಿ ಪ್ರಧಾನಿ ದಿ. ವಾಜಪೇಯಿ, ಬಿಜೆಪಿ ಭೀಷ್ಮ ಲಾಲಕೃಷ್ಣ ಅಡ್ವಾಣಿ ಅವರಂತಿದೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹೇಗೆ ವರ್ಚಸ್ಸು ಹೊಂದಿದೆಯೋ ಹಾಗೆ ಕರ್ನಾಟಕದಲ್ಲಿಯೂ ಇದೆ. ರಾಷ್ಟ್ರ ಮಟ್ಟದ ವರ್ಚಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣರಾದರೆ, ರಾಜ್ಯದಲ್ಲಿ ಬಿಜೆಪಿ ವರ್ಚಸ್ಸಿಗೆ ಸಿಎಂ ಯಡಿಯೂರಪ್ಪ ಕಾರಣ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಎ. ಎಸ್. ಪಾಟೀಲ ನಡಹಳ್ಳಿ ಹೇಳಿದರು.

Leave a Reply

ಹೊಸ ಪೋಸ್ಟ್‌