ಆಶಾ, ಅಂಗನವಾಡಿ ಕಾರ್ಯಕರ್ತರ ಸೇವೆಗೆ ಮೆಚ್ಚುಗೆ- ಜಿ. ಪಂ. ನಿಂದ ನಾಳೆಯಿಂದ ಆಹಾರದ ಕಿಟ್, ಸೀರೆ ನೀಡಲು ನಿರ್ಧಾರ- ಜಿ. ಪಂ. ಸಿಇಓ ಗೋವಿಂದರೆಡ್ಡಿ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಕಳೆದ ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲ ಗ್ರಾಮೀಣ ಪ್ರದೇಶದಲ್ಲಿ ನಡೆಸಿದ ಕೊರೊನಾ ಸೋಂಕಿತರ ಮನೆ-ಮನೆ ಸಮೀಕ್ಷೆ ಈಗ ಮುಕ್ತಾಯವಾಗಿದೆ.

ವಿಜಯಪುರ ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಮನೆ-ಮನೆ ಸಮೀಕ್ಷೆಯಲ್ಲಿ ತೊಡಗಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು

ಈ ಕಾರ್ಯದಲ್ಲಿ ಗ್ರಾಮೀಣ ಭಾಗದ 1785 ಆಶಾ ಮತ್ತು 1733 ಅಂಗನವಾಡಿ ಕಾರ್ಯಕರ್ತರು ಕೆಲಸ ನಿರ್ವಹಿಸಿದ್ದಾರೆ. ಇವರ ಈ ಕಾರ್ಯವನ್ನು ವಿಜಯಪುರ ಜಿಲ್ಲಾಡಳಿತ ಮೆಚ್ಚಿಕೊಂಡಿದ್ದು, ಶಹಬ್ಬಾಶ್ ಎಂದಿದೆ. ಈ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಕಾರ್ಯಪಡೆಗಳ ಜೊತೆ ಸೇರಿ ವಿಜಯಪುರ ಜಿಲ್ಲೆಯ 629 ಗ್ರಾಮಗಳ ಪ್ರತಿಯೊಂದು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದಾರೆ. ಸೋಂಕಿನ ಲಕ್ಷಣವುಳ್ಳವರನ್ನು ಅವರ ಮನೆಯಲ್ಲಿಯೇ ಐಸೋಲೇಶನ್ ಆಗಲು ಸಾಧ್ಯವಿದ್ದರೆ ಅವಕಾಶ ಕಲ್ಪಿಸಿದ್ದಾರೆ. ಸೋಂಕಿನ ಲಕ್ಷಣ ಹೊಂದಿದವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅಗತ್ಯವಿರುವವರಿಗೆ ಹೋಂ ಕ್ವಾರಂಟೈನ್, ನೊಟೀಸ್ ನೀಡುವುದು, ಜಾಗೃತಿ ಮೂಡಿಸುವ ಕರಪತ್ರ ಹಂಚುವುದು ಸೇರಿದಂತೆ ಹೋಂ ಅಸೋಲೇಶನ್ ಸಾಧ್ಯವಿಲ್ಲದವರನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ ಶಿಫ್ಟ್ ಮಾಡಿದ್ದಾರೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗಳಿಗೂ ದಾಖಲಿಸಲು ನೆರವಾಗಿದ್ದಾರೆ.

ವಿಜಯಪುರ ಜಿಲ್ಲೆ ಗ್ರಾಮೀಣ ಭಾಗದಲ್ಲಿ ಕೊರೊನಾ ಪರೀಕ್ಷೆಗಾಗಿ ಗಂಟಲು ದ್ರವ ಸಂಗ್ರಹಿಸುತ್ತಿರುವುದು

ಅಲ್ಲದೇ, ಕೊರೊನಾ ಸೋಂಕಿತರ ಮನೆಗಳಿಗೆ ಔಷಧಿ ಮತ್ತು ಆಹಾರದ ಕಿಟ್ ವಿತರಣೆಯಲ್ಲಿಯೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ಕೇವಲ ಒಂದೇ ವಾರದಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಿರುವುದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರ ಸಂತಸಕ್ಕೆ ಕಾರಣವಾಗಿದೆ.

ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗಲ್ಲಿ ಕೊರೊನಾ ಸೋಂಕಿನ ಲಕ್ಷಣವುಳ್ಳವರನ್ನು ಆ್ಯಂಬ್ಯೂಲನ್ಸ್ ನಲ್ಲಿ ಶಿಫ್ಟ್ ಮಾಡುತ್ತಿರುವುದು

ಅಷ್ಟೇ ಅಲ್ಲ, ಜಿಲ್ಲಾಡಳಿತ ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಆರೋಗ್ಯ, ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಸಮೀಕ್ಷೆ ಪೂರ್ಣಗೊಂಡಿರುವುದಕ್ಕೆ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಕೂಡ ಜಿಲ್ಲಾಡಳಿತವನ್ನು ಅಭಿನಂದಿಸಿದ್ದಾರೆ.

ವಿಜಯಪುರ ಜಿಲ್ಲೆಯ ಚವಡಿಹಾಳ ಗ್ರಾಮದಲ್ಲಿ ಆಹಾರ, ಔಷಧಿ ಕಿಟ್ ವಿತರಿಸುತ್ತಿರುವುದು

ಈ ಎಲ್ಲ ಅಂಶಗಳನ್ನು ಪರಿಗಣಿಸಿರುವ ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಈ ಸಮೀಕ್ಷೆಯಲ್ಲಿ ಪಾಲ್ಗೋಂಡ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಶುಕ್ರವಾರವೇ ಆಹಾರದ ಕಿಟ್ ಮತ್ತು ಸೀರೆಯನ್ನು ವಿತರಿಸಲು ನಿರ್ಧರಿಸಿದ್ದಾರೆ. ಗ್ರಾಮ ಪಂಚಾಯಿತಿ ಕಾರ್ಯಪಡೆಗಳು ಈ ಆಹಾರದ ಕಿಟ್ ಮತ್ತು ಸೀರೆಗಳನ್ನು ಹಂಚಿಕೆ ಮಾಡಲಿವೆ. ಈ ಕಿಟ್ ನಲ್ಲಿ ತಲಾ ಐದು ಕೆಜಿ ಅಕ್ಕಿ ಮತ್ತು ಗೋದಿ ಹಿಟ್ಟು, ತಲಾ ಎರಡು ಕೆಜಿ ರವೆ ಮತ್ತು ಬೆಲ್ಲ, ತಲಾ ಒಂದು ಕೆಜಿ ಬೇಳೆ, ಶೇಂಗಾ ಸೇರಿದಂತೆ ದಿನ ನಿತ್ಯ ಬಳಸುವ ಒಟ್ಟು 18 ಸಾಮಗ್ರಿಗಳು ಇವೆ ಎಂದು ಗೋವಿಂದ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌