ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕೈಗೊಂಡ ಅನೇಕ ರೀತಿಯ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಕೊರೊನಾ ರೋಗಿಗಳ ಗುಣಮುಖ ಪ್ರಮಾಣದಲ್ಲಿ ಜಿಲ್ಲಡ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಎಲ್ಲರ ಸಹಕಾರದಿಂದ ಕೊರಪನಾ ಸಾವಿನ ಪ್ರಮಾಣ ಸಹ ತಗ್ಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ವಿಜಯಪುರ ನಗರದ ಆಯುಷ್ ಆಸ್ಪತ್ರೆಗೆ ತಜ್ಞ ವೈದ್ಯರ ತಂಡದೊಂದಿಗೆ ಕೊರೊನಾ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿದ ಅವರು, ನಿರಂತರ ಮತ್ತು ಹಗಲಿರುಳು ಶ್ರಮವಹಿಸಿ ಎಲ್ಲರ ಸಹಕಾರದಿಂದ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಸಹ ಕಡಿಮೆಯಾಗಿದೆ ಎಂದು ತಿಳಿಸಿದರು.
ಕೊರೊನಾ ರೋಗಿಗಳನ್ನು ಈ ರೋಗದಿಂದ ಗುಣಪಡಿಸಲು ರಾಜ್ಯದಲ್ಲಿಯೇ ನಾವು ಮುಂಚೂಣಿಯಲ್ಲಿದ್ದೇವೆ. ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಸಕಾಲಕ್ಕೆ ಆಕ್ಸಿಜನ್ ಪೂರೈಕೆ, ರೆಮಡಿಸಿವಿರ್ ಲಸಿಕೆಗಳ ಪೂರೈಕೆ ಮತ್ತು ಖಾಸಗಿ ಆಸ್ಪತ್ರೆಗಳ ಸಹಕಾರದಿಂದ ಜಿಲ್ಲೆಯಲ್ಲಿ ಕೊರೊನಾದಿಂದಾಗುವ ಸಾವು ಪ್ರಮಾಣ ಕೂಡ ಕಡಿಮೆಯಾಗಿದೆ ಎಂದು ಹೇಳಿದರು.
ನಾನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶಾ, ಅಂಗನವಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರನ್ನೊಳಗೊಂಡ ಕಾರ್ಯಪಡೆಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಕೊರೊನಾ ಲಕ್ಷಣ ಉಳ್ಳವರನ್ನು ಮತ್ತು ಕೊತೊನಾ ಶಂಕಿತರನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆಗೆ ಒಳಪಡಿಸುತ್ತಿರುವುದರಿಂದ ಜಿಲ್ಲೆಯು ಕೊರೊನಾ ರೋಗಿಗಳ ಗುಣಮುಖ ಪ್ರಮಾಣದಲ್ಲಿಯೂ ಮುಂಚೂಣಿಯಲ್ಲಿದ್ದೇವೆ. ಕೊರೊನಾ ಸಂಪೂರ್ಣ ನಿರ್ಮೂಲನೆ ಆಗುವವರೆಗೂ ತಮ್ಮೆಲ್ಲರ ಸಹಕಾರವಿರಲಿ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಕೊರೊನಾ ಪ್ರಕರಣಗಳು, ಕೊರೊನಾದಿಂದಾದ ಮರಣಗಳ ಬಗ್ಗೆಯೂ ಅವರು ಪರಿಶೀಲನೆ ನಡೆಸಿದರು.
ಈ ಸಭೆಯಲ್ಲಿ ಆಯುಷ್ ಆಸ್ಪತ್ರೆ ಮುಖ್ಯಸ್ಥ ಡಾ. ನಿತಿನ್ಲ ಅಗರವಾಲ ಕೊರೊನಾ ರೋಗಿಗಳ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪಸೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶರಣಪ್ಪ ಕಟ್ಟಿ, ಡಾ. ಲಕ್ಕಣ್ಣವರ, ಡಾ. ಮಲ್ಲನಗೌಡ ಬಿರಾದಾರ ಮತ್ತು ಇತರರು ಉಪಸ್ಥಿತರಿದ್ದರು.