ಸಿಎಂ ಜೊತೆ ವಿಡಿಯೋ ಸಂವಾದ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಜನಪ್ರತಿನಿಧಿ ಮಧ್ಯೆ ಮಾತಿನ ಸಮರ

ವಿಜಯಪುರ: ಕೊರೊನಾ ಎರಡನೇ ಅಲೆ ತಡೆಗಟ್ಟುವ ಕುರಿತು ಸಿಎಂ ಐದು ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಸಿಎಂ‌ ನಡೆಸಿದ ವಿಡಿಯೋ ಸಂವಾದ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಜನಪ್ರತಿನಿಧಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.

ವಿಡಿಯೋ ಸಂವಾದದಲ್ಲಿ ವಿಜಯಪುರದಲ್ಲಿ ಪಾಲ್ಗೊಂಡ ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ ಸರಕಾರ ಅಗತ್ಯಕ್ಕೆ ತಕ್ಕಂತೆ ಔಷಧಿ, ಲಸಿಕೆ ಪೂರೈಸಬೇಕು ಎಂದು ಆಗ್ರಹಿಸಿ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಲು ಪ್ರಯತ್ನಿಸಿದರು.

ಆಗ ಕಲಬುರಗಿಯಿಂದ ಪಾಲ್ಗೊಂಡಿದ್ದ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮತ್ತು ಇತರರು ಲಸಿಕೆ ಹಾಕಲು ಆರಂಭಿಸಿದಾಗ ಲಸಿಕೆ ವಿರುದ್ಧ ಅಪಪ್ರಚಾರ ಮಾಡಿದವರು ನೀವೇ ಎಂದು ಕಾಂಗ್ರೆಸ್ಸಿಗರ ವಿರುದ್ಧ ಆಕ್ರೋಶ ವ್ಕಕ್ತಪಡಿಸಿದರು.

ಈ ಸಂವಾದದಲ್ಲಿ ಮಾತನಾಡಿದ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ, ಕೊರೊನಾ ಜೊತೆಗೆ ಈಗ ಬ್ಯಾಕ್ ಫಂಗಸ್ ಕೇಸ್ ಗಳೂ ಪತ್ತೆಯಾಗುತ್ತಿವೆ‌. ಸರಕಾರ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಔಷಧಿ ಸರಬರಾಜು ಮಾಡುತ್ತಿದೆ. ತಮ್ಮ ನೇತೃತ್ವದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಕೊರೊನಾ ಅಷ್ಟೇ ಅಲ್ಲ, ಬ್ಯಾಕ್ ಫಂಗಸ್ ರೋಗಿಗಳಿಗೂ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯ ಶೇ.50ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಕೂಡಲೇ ಅಗತ್ಯಕ್ಕೆ ತಕ್ಕಷ್ಟು ಔಷಧಿ ಮತ್ತು ಸಲಕರಣೆಗಳನ್ನು ಪೂರೈಸಬೇಕು ಎಂದು ಆಗ್ರಹಿಸಿದರು.

ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ ಕಾರ್ಯ ವೈಖರಿಯ ಬಗ್ಹೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು‌. ನಾನು ಮಾಜಿ ಆರೋಗ್ಯ ಸಚಿವರಾಗಿದ್ದರೂ ಸಚಿವ ಸುಧಾಕರ ನನ್ನ ಕರೆ ಸ್ವೀಕರಿಸುವುದಿಲ್ಲ. ಶಾಸಕರ ಕರೆಗಳನ್ನೂ ಸ್ವೀಕರಿಸುವುದಿಲ್ಲ. ಅವರ ಕಾರ್ಯ ವೈಖರಿ ಬದಲಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಮಾತನಾಡಿ, ಈ ಹಿಂದಿನಿಂದ ಇಲ್ಲಿಯವರೆಗೆ ಎಲ್ಲ ಸರಕಾರಗಳು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದ್ದೇವೆ. ಹೀಗಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ತೊಂದರೆಯಾಗುತ್ತಿದೆ. ಈ ವರ್ತನೆಯನ್ನು ಕೈಬಿಡದಿದ್ದರೆ ಈ ಕ್ಷೇತ್ರಗಳ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರಿನಿಂದಲೇ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ, ವೈದ್ಯರು, ತಾಂತ್ರಿಕ ಸಿಬ್ಬಂದಿ ನೇಮಕಾತಿಗೆ, ಆಕ್ಸಿಜನ್ ಮತ್ತು ಇತರ ಔಷಧಿ, ಸಲಕರಣೆಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ, ಮುದ್ದೇಬಿಹಾಳ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ, ದೇವರ ಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಉಪಸ್ಥಿತರಿದ್ದರು.

ಸಿಎಂ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಮೈಸೂರು, ಹಾದನ, ಬೆಳಗಾವಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಆಯಾ ಜಿಲ್ಲೆಗಳಿಂದ ಪಾಲ್ಗೊಂಡಿದ್ದರು.

Leave a Reply

ಹೊಸ ಪೋಸ್ಟ್‌