ವಿಜಯಪುರ: ಕೊರೊನಾ ನಿಯಂತ್ರಣ ಕುರಿತು ಚರ್ಚಿಸಲು ಸಿಎಂ ಬಿ. ಎಸ್. ಯಡಿಯೂರಪ್ಪ ನಡೆಸಿದ ಐದು ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಕಲಬುರಗಿ ಜಿಲ್ಲೆ ಬಿಜೆಪಿ ಶಾಸಕರೊಬ್ಬರು ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ ಮಾತನಾಡುವಾಗ ವ್ಯಾಕ್ಸಿನೇಶನ್ ತಡವಾಗಲು ಕಾಂಗ್ರೆಸ್ಸಿಗರೆ ಕಾರಣ ಎಂದು ಆರೋಪಿಸಿದ್ದರು. ಈ ಸಂದರ್ಭದಲ್ಲಿ ಮಾತಿನ ಸಮರ ನಡೆದಿತ್ತು.
ವಿಡಿಯೋ ಸಂವಾದದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ, ವ್ಯಾಕ್ಸಿನೇಷನ್ ತಡವಾಗಲು ಕಾಂಗ್ರೆಸ್ ನವರೇ ಕಾರಣ ಎಂದು ಕಲಬುರಗಿ ಜಿಲ್ಲೆಯ ಜನಪ್ರತಿನಿಧಿಯೊಬ್ಬರು ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ ಅವರು ಮಾತನಾಡುವಾಗ ಟೀಕಿಸಿದರು. ಆದರೆ, ಕಲಬುರಗಿ ಜಿಲ್ಲೆಯ ಆ ಮೂರ್ಖರಿಗೆ ಗೊತ್ತಿಲ್ಲ, ಕೋವ್ಯಾಕ್ಸಿನ್ ಒಂದು ಡೋಸ್ ಕೊಡುವ ಮೊದಲು ಮೂರು ಬಾರಿ ಟ್ರಯಲ್ ಮಾಡಬೇಕಾಗುತ್ತದೆ. ಇದರ ಬಗ್ಗೆ ಗೊತ್ತಿರದೆ ಕಾಂಗ್ರೆಸ್ ನವರು ವ್ಯಾಕ್ಸಿನೇಶನ್ ಗೆ ತಡ ಮಾಡಿದರು ಎಂದು ಹೇಳಿಕೆ ಕೊಡುತ್ತಾರೆ. ಮೂರನೇ ರೌಂಡಿನಲ್ಲಿ ಟ್ರಯಲ್ ಫೇಲಾಗಿ ಲಕ್ಷಾಂತರ ಜನರಿಗೆ ತೊಂದರೆಯಾದರೆ ಇವರು ಇಂಥ ಹೇಳಿಕೆ ಕೊಡುತ್ತಾರಾ ಎಂದು ಎಂ. ಬಿ. ಪಾಟೀಲ ಪ್ರಶ್ನಿಸಿದರು.
ಮೂರ್ಖತನದ ಮತ್ತು ತಿಳುವಳಿಕೆ ಇಲ್ಲದ ಗಿರಾಕಿಗಳು ಈ ರೀತಿಯ ಹೇಳಿಕೆ ಕೊಡುತ್ತಾರೆ ಎಂದು ಎಂ. ಬಿ. ಪಾಟೀಲ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.