ರಾಜ್ಯ, ಕೇಂದ್ರ ಸರಕಾರಗಳ ವಿರುದ್ಧ ಎಂ. ಬಿ. ಪಾಟೀಲ ಆಕ್ರೋಶ- ಯಾಕೆ ಗೊತ್ತಾ?

ವಿಜಯಪುರ: ಕೊರೊನಾ ನಿಯಂತ್ರಣ ವಿಚಾರದಲ್ಲಿ ಲಸಿಕೆ ಪೂರೈಕೆ ಮತ್ತು ಔಷಧಿ ಸರಬರಾಜು ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣವಾಗಿ ಎಡವಿವೆ ಎಂದು ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಇಂದು ಲಕ್ಷಾಂತರ ಜನ ಜೀವನವನ್ನು ಕಳೆದುಕೊಂಡಿದ್ದಾರೆ. ಲಕ್ಷಾಂತರ ಮನೆಗಳು ಮುರಿದಿವೆ. ಲಕ್ಷಾಂತರ ಜನ ಅನಾಥರಾಗಿದ್ದಾರೆ. ಆದರೂ ನಾವು ವಿರೋಧ ಪಕ್ಷದವರಾಗಿ, ಖಾಸಗಿಯವರಾಗಿ ಸಹಕಾರ ಮಾಡಬೇಕಿದೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಆದರೆ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ನೂರು ದಾಟಿದೆ. ಅದಕ್ಕೆ ಬೇಕಾದ ಔಷಧಿ ಸರಬರಾಜು ಆಗುತ್ತಿಲ್ಲ. ಒಂದು ರೋಗಿಗೆ 40 ರಿಂದ 50 ಔಷಧಿ ಬೇಕಾಗುತ್ತದೆ. ಈಗ ತಾವು ಅಧ್ಯಕ್ಷರಾಗಿರುವ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ 60 ರೋಗಿಗಳಿದ್ದಾರೆ. ಆದರೆ, ಅವರು ಕೇವಲ 30 ಔಷಧಿ ನೀಡಿದ್ದಾರೆ. ಇದು ಒಂದು ರೋಗಿಗೆ ಸಹಿತ ಆಗುವದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಔಷಧಿ‌ ಇಲ್ಲದೇ ನಾವು ಬ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ. ಈಗಾಗಲೇ 18 ಜನರಿಗೆ ಚಿಕಿತ್ಸೆ ನೀಡಿ ಡಿಶ್ಚಾರ್ಜ ಮಾಡಿದ್ದೇವೆ. ಕೇಂದ್ರ ಸರಕಾರ ರಾಜ್ಯಕ್ಕೆ ಈವರೆಗೆ ಕೇವಲ ಐದು ಸಾವಿರ ಔಷಧಿ ನೀಡಿದೆ. ಪ್ರತಿದಿನ 15 ಸಾವಿರ ಔಷಧಿ ರಾಜ್ಯಕ್ಕೆ ಬೇಕಾಗುತ್ತದೆ ಎಂದು ಎಂ. ಬಿ. ಪಾಟೀಲ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

Leave a Reply

ಹೊಸ ಪೋಸ್ಟ್‌