ಕೂಡಗಿ ಎನ್ ಟಿ ಪಿ ಸಿ, ಪವನ ವಿದ್ಯುತ್ ಕಂಪನಿಗಳ ವಿರುದ್ಧ ಬಸವ ಸೈನ್ಯ ಸಂಸ್ಥಾಪಕ ಶಂಕರಗೌಡ ಬಿರಾದಾರ ಅಸಮಾಧಾನ

ವಿಜಯಪುರ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿರುವ ಕೂಡಗಿಯ ಎನ್ ಟಿ ಪಿ ಸಿ ಮತ್ತು ಬಸವನ ಬಾಗೇವಾಡಿ ಸುತ್ತಮುತ್ತಲಿರುವ ಪವನ ವಿದ್ಯುತ್ ಕಂಪೆನಿಗಳು ಜನರಿಗೆ ಮೋಸ ಮಾಡುತ್ತಿವೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಆರೋಪಿಸಿದ್ದಾರೆ

ಕರೊನಾ ರೋಗದಿಂದ ಇಡೀ ಮನುಕುಲವೇ ತತ್ತರಿಸಿ ಹೋಗಿದೆ. ಸಾಕಷ್ಟು ಜನರು ಜೀವ ಕಳೆದುಕೊಂಡಿದ್ದಾರೆ. ಅಲ್ಲದೇ, ಬಸವನ ಬಾಗೇವಾಡಿ ತಾಲೂಕಿನಲ್ಲಿ ಸಾವಿರಾರು ಜನ ನಿರ್ಗತಿಕರಾಗಿದ್ದಾರೆ. ಆದರೆ, ಎನ್ ಟಿ ಪಿ ಸಿ ಮತ್ತು ಪವನ ವಿದ್ಯುತ್ ಕಂಪನಿಯವರು ಈ ಭಾಗದ ಜನಸಾಮಾನ್ಯರ ಅನುಕೂಲಕ್ಕಾಗಿ ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಕಂಪೆನಿಗಳು ಬಸವನ ಬಾಗೇವಾಡಿ ಬಂದಾಗ ಇಲ್ಲಿನ ರೈತರಿಗೆ, ಜನರಿಗೆ ಒಳ್ಳೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪನೆ ಮಾಡುತ್ತೇವೆ. ತಾಲೂಕಿನ್ಯಾದಂತ ಲಕ್ಷಾಂತರ ಗಿಡಗಳನ್ನು ನೆಟ್ಟು ಹಸಿರು ಕ್ರಾಂತಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಬಸವನ ಬಾಗೇವಾಡಿ ತಾಲೂಕಾಸ್ಪತ್ರೆಯಲ್ಲಿ ವೆಂಟಿಲೇಟರ್, ಆಕ್ಸಿಜನ್ ಬೆಡ್, ಸಿಬ್ಬಂದಿ ಕೊರತೆ ಇದ್ದರೂ ಈ ಕಂಪೆನಿಗಳು ಯಾವುದೇ ರೀತಿಯಿಂದ ಸಹಾಯ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಎನ್ ಟಿ ಪಿ ಸಿ ಮತ್ತು ಪವನ ವಿದ್ಯುತ್ ಕಂಪನಿಯ ಸಿಬ್ಬಂದಿಗಳು ಕೊರೊನಾ ಸೋಂಕಿಗೆ ತುತ್ತಾದರೆ ಅವರನ್ನು ನಮ್ಮ ಆಸ್ಪತ್ರೆಗೆ ತಂದು ಸೇರಿಸುತ್ತಿದ್ದಾರೆ. ತಾಲೂಕಿನ ಬಡ ರೈತರಿಗೋಸ್ಕರ ಇರುವ ಆಸ್ಪತ್ರೆಯಲ್ಲಿ ಎನ್ ಟಿ ಪಿ ಸಿ ಯ ರೋಗಿಗಳನ್ನು ದಾಖಲು ಮಾಡುತ್ತಿದ್ದಾರೆ. ಕೂಡಲೇ ಈ ಕಂಪೆನಿಗಳು ಬಸವನ ಬಾಗೇವಾಡಿ, ಕೋಲ್ಹಾರ ಮತ್ತು ನಿಡಗುಂದಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆಗಳನ್ನು ಪೂರೈಕೆ ಮಾಡಬೇಕು. ಕೇವಲ ಕಾಟಾಚಾರಕ್ಕೆ ನಾಲ್ಕು ಜನಕ್ಕೆ ಮಾಸ್ಕ್ ಹಂಚಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಈ ಮೂರೂ ಪಟ್ಟಣಕ್ಕೆ ಅತೀ ಅವಶ್ಯವಿರುವ ಆಕ್ಸಿಜನ್ ಹೊಂದಿರುವ ಅಂಬ್ಯುಲೆನ್ಸ್ ಗಳನ್ನು ಕೊಡಬೇಕು. ಇಲ್ಲದಿದ್ದರೆ ಈ ಕಂಪೆನಿಗಳ ವಿರುದ್ಧ ರಾಷ್ಟ್ರೀಯ ಬಸವ ಸೈನ್ಯ ಉಗ್ರ ಸ್ವರೂಪದ ಹೋರಾಟವನ್ನು ನಡೆಸಲಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌