ಸ್ವತಃ ಕಷ್ಟದಲ್ಲಿದ್ದರೂ ಮಾನವೀಯತೆ ಮೆರೆದ ರೈತನಿಗೆ ಶಾಸಕ ಎಂ. ಬಿ. ಪಾಟೀಲ ನೆರವು

ವಿಜಯಪುರ- ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದ ರೈತ ಬಸವರಾಜ ಕಾತ್ರಾಳ ತಮ್ಮ ಮೂರು ಎಕರೆ ಜಮೀನಿನಲ್ಲಿ ಐದು ಸಾವಿರ ಬಾಳೆ ಸಸಿಗಳನ್ನು ನೆಟ್ಟು, ಪೋಷಿಸಿದ್ದರು. ಆದರೆ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಾಳೆಹಣ್ಣುಗಳನ್ನು ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾಗಿದ್ದರು.

ಇಂಥ ಸಂದಿಗ್ಧತೆಯ ನಡುವೆಯೂ ಮಾನವೀಯತೆಗೆ ಮುಂದಾದ ರೈತ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಮಾರುಕಟ್ಟೆ ಇಲ್ಲದೆ ಹಾಳಾಗುತ್ತಿದ್ದ ತಮ್ಮ ಬಾಳೆ ಬೆಳೆಯನ್ನು ಸುತ್ತಲಿನ ಹಳ್ಳಿಗಳ ರೈತರಿಗೆ ಉಚಿತವಾಗಿ ನೀಡವುದರ ಜೊತೆಗೆ ಮಾಸ್ಕ ಹಾಗೂ ಸೈನಿಟೈಸರ್ ವಿತರಿಸುತ್ತ ಕೊರೊನಾ ಜಾಗೃತಿಗೆ ಮುಂದಾಗಿದ್ದಾರೆ. ಈ ಕೊರೊನಾ ಕಾಯಿಲೆ ಮನುಷ್ಯರಿಗೆ ಶರೀರದಲ್ಲಿ ಎಲ್ಲ ತೊಂದರೆಗಳನ್ನು ಮಾಡಿದೆ. ರೈತರಾಗಿರುವ ನಾವು ನಮ್ಮ ತೋಟದಲ್ಲಿ ಪ್ರತ್ಯೇಕವಾಗಿದ್ದು, ಉತ್ತಮ ಬೇಸಾಯ ಮಾಡಿದರೆ ಫಲ ಕೈಗೆ ಬಂದ ತುತ್ತು ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಾಯಿಗೆ ಬರಲಿಲ್ಲ. ಏನೆ ಆಗಲಿ ನಮ್ಮ ಭಾಗದಲ್ಲಿ ಎಂ. ಬಿ. ಪಾಟೀಲರಿಂದ ಉತ್ತಮ ನೀರಾವರಿ ಆಗಿದೆ. ಈ ಬಾರಿ ಹಾನಿ ಅನುಭವಿಸದರೂ ಮುಂದಿನ ಬಾರಿ ಮತ್ತೆ ನಾನು ಉತ್ತಮ ಬೆಳೆ ಬೆಳೆಯುತ್ತೇನೆ ಎಂದು ರೈತ ಬಸವರಾಜ ಕಾತ್ರಾಳ ತಿಳಿಸಿದ್ದಾರೆ.

ವಿಷಯ ಅರಿತ ಬಬಲೇಶ್ವರ ಶಾಸಕ, ಮಾಜಿ ಸಚಿವ ಎಂ. ಬಿ. ಪಾಟೀಲ ಅವರು, ದೂರವಾಣಿಯಲ್ಲಿ ರೈತನಿಗೆ ಅಗತ್ಯ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಬಬಲೇಶ್ವರ ತಹಸೀಲ್ದಾರ ಹಾಗೂ ತಾಲೂಕು ತೋಟಗಾರಿಕೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಲ್ಲದೇ ರೈತ ಬಸವರಾಜನೊಂದಿಗೆ ಮಾತನಾಡಿ, ಧೈರ್ಯ ತುಂಬಿದ್ದಾರೆ.

ಈಗಾಗಲೇ ಬಸವರಾಜ ಕಾತ್ರಾಳ ಅವರು ಶೇಗುಣಿಸಿ, ಹಲಗಣಿ, ಬಬಲೇಶ್ವರ, ನಿಡೋಣಿ, ನಾಗರಾಳ, ಯಕ್ಕುಂಡಿ, ಹೊಕ್ಕುಂಡಿ ಹಾಗೂ ಅರ್ಜುಣಗಿ ಗ್ರಾಮಗಳಲ್ಲಿ ಬಾಳೆಹಣ್ಣು, ಮಾಸ್ಕ ಹಾಗೂ ಸೈನಿಟೈಸರ್‍ಗಳನ್ನು ವಿತರಿಸಿದ್ದು, ಮುಂದೆಯೂ ಕೂಡ ನಾನಾ ಹಳ್ಳಿಗಳಲ್ಲಿ ವಿತರಿಸುವುದಾಗಿ ತಿಳಿಸಿದ್ದಾರೆ‌.

Leave a Reply

ಹೊಸ ಪೋಸ್ಟ್‌