ಸಿಎಂ ಬದಲಾವಣೆ ಕುರಿತು ಮತ್ತೆ ಯತ್ನಾಳ ಹೊಸ ಬಾಂಬ್- ಜೂ. 15ರೊಳಗೆ ಸಿಎಂ ಬದಲಾಗ್ತಾರೆ ಇಲ್ಲವೇ ಯೋಗೇಶ್ವರ ಡಿಸಿಎಂ ಆಗ್ತಾರೆ

ವಿಜಯಪುರ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ. ವೈ. ವಿಜಯೇಂದ್ರ ವಿರುದ್ಧ ಸದಾ ವಾಗ್ದಾಳಿ ನಡೆಸುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಜೂ. 15ರೊಳಗೆ ಒಂದು ಸಿಎಂ ಬದಲಾಗುತ್ತಾರೆ. ಇಲ್ಲದಿದ್ದರೆ, ಸಿ. ಪಿ. ಯೋಗೇಶ್ವರ ಅವರಿಗೆ ಡಿಸಿಎಂ ಮಾಡಿ ಇಂಧನ ಖಾತೆ ನೀಡಬೇಕಾಗುತ್ತದೆ ಎಂದು ಭವಿಷ್ಯ ನುಡಿದರು. ಯೋಗಿಶ್ವರ ಅವರನ್ನು ತೆಗೆದು ಹಾಕುವ ಅಥವಾ ಉಚ್ಚಾಟನೆ ಮಾಡುವ ಧೈರ್ಯ ಯಡಿಯೂರಪ್ಪನವರಿಗೆ ಇಲ್ಲ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

ಜಿಂದಾಲ್ ಗೆ ಭೂಮಿ ನೀಡುವಲ್ಲಿ ಭ್ರಷ್ಟಾಚಾರ

ಇದೇ ವೇಳೆ, ಜಿಂದಾಲ್ ಗೆ ಸರಕಾರ 3666 ಎಕರೆ ಭೂಮಿಯನ್ನು ನೀಡುತ್ತಿರುವುದರ ಹಿಂದೆ ರೂ. 3500 ಕೋ. ಭ್ರಷ್ಟಾಚಾರವಿದೆ ಎಂದು ಅವರು ಆರೋಪಿಸಿದರು.

ಜಿಂದಾಲ್ ಗೆ ರೂ. 1.25 ಲಕ್ಷ ಕ್ಕೆ ಒಂದು ಎಕರೆ ಭೂಮಿ ನೀಡುತ್ತಾರೆ ಎಂದರೆ ಏನರ್ಥ? ಇಡೀ ದೇಶದ ಯಾವುದೇ ಮೂಲೆಯಲ್ಲಾದರೂ ರೂ. 1.25 ಲಕ್ಷ ಬೆಲೆಗೆ ಭೂಮಿ ಸಿಗುತ್ತಾ ಎಂದು ಪ್ರಶ್ನಿಸಿದರು. ಅದು ಬಂಗಾರದಂಥ ಭೂಮಿಯಿದೆ. ಈ ಭೂಮಿ ನೀಡಿರುವುದರ ಹಿಂದೆ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಅವರು ಆರೋಪಿಸಿದರು.

ವಿಜಯೇಂದ್ರ ವಿರುದ್ಧ ಮತ್ತೆ ಗುಡುಗಿದ ಯತ್ನಾಳ

ತಮ್ಮ ತಂದೆಯ ಸಿಎಂ ಕುರ್ಚಿ ಉಳಿಸಲು ವಿಜಯೇಂದ್ರ ತಮ್ಮ ಚೇಲಾಗಳ ಮೂಲಕ ಮಠಾಧೀಶರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಮತ್ತೆ ಆರೋಪಿಸಿದರು.

ಲಿಂಗಾಯತ ಮಠಾದೀಶರಿಗೆ ವಿಜಯೇಂದ್ರ ತಮ್ಮ ಚೇಲಾಗಳ ಮೂಲಕ ಆಮಿಷ ಒಡ್ಡುತ್ತಿದ್ದಾರೆ. ಈ ಕುರಿತು ತಾವು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ. ಯಡಿಯೂರಪ್ಪ ಅವರ ಸ್ಥಾನಕ್ಕೆ ಕಂಟಕ ಎದುರಾಗಿದೆ. ನೀವು ಕೇಂದ್ರ ಸರಕಾರಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಯಿಗೆ ಬಂದಂಗೆ ಬಯ್ಯಿರಿ ಎಂದು ವಿಜಯೇಂದ್ರ ವ್ಯವಸ್ಥಿತ ತಂತ್ರ ಹಣೆದಿದ್ದಾನೆ ಎಂದು ಆರೋಪಿಸಿದರು.

ಈಗಾಗಲೇ ಹಲವರು ಬೇಟಿಯಾಗುವ ಕಾರ್ಯಕ್ರಮ ಆರಂಭಿಸಿದ್ದಾರೆ. ನಾನು ಮಠಾದೀಶರಿಗೆ ಸಾಮಾಜಿಕ ಜಾಲ ತಾಣದ ಮೂಲಕ ವಿನಂತಿ ಮಾಡಿಕೊಂಡಿದ್ದೇನೆ. ಯಡಿಯೂರಪ್ಪನವರ ಕುಟುಂಬದಿಂದ ನಮ್ಮ ಲಿಂಗಾಯತರ ಮಾನ ಮರ್ಯಾದೆ ಹಾಳಾಗಿದೆ. ವೀರಶೈವ ಲಿಂಗಾಯತರಲ್ಲಿ ಒಳ್ಳೆಯ ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ನಿಜಲಿಂಗಪ್ಪನವರು, ಜೆ. ಎಚ್. ಪಟೇಲರು, ವಿರೇಂದ್ರ ಪಾಟೀಲ ಅವರಂತೆ ಒಳ್ಳೆಯ ಮುಖ್ಯಮಂತ್ರಿಗಳಾಗಿದ್ದರೆ ನಾವು ಬೆಂಬಲಿಸುತ್ತಿದ್ದೆವು. ಆದರೆ ಇಂದು ಇಡೀ ಸಿಎಂ ಕುಟುಂಬ ಲೂಟಿಗೆ ನಿಂತಿದೆ ಎಂದು ಆರೋಪಿಸಿದರು.

ತಮಗೆ ಆರ್ ಎಸ್ ಎಸ್ ನಿಂದ ಯಾವುದೇ ಬುಲಾವ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನನಗೆ ಯಾವುದೇ ಕರೆಗಳು ಬಂದಿಲ್ಲ. ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಲಾಕಡೌನ್ ಸಡಿಲಿಕೆ ಮಾಡಲು ಯತ್ನಾಳ ಆಗ್ರಹ

ಇದೇ ವೇಳೆ, ಲಾಕ್ ಡೌನ್ ಮುಂದುವರೆಸುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಈಗ ರಾಜ್ಯದಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಕೊರೋನಾ ಹಾವಳಿ ಎಲ್ಲೆಲ್ಲಿ ಕಡಿಮೆಯಾಗಿದೆ ಅಲ್ಲಿ ಲಾಕ್ ಡೌನ್ ತೆಗೆಯಬೇಕು. ಉದ್ಯೋಗ ಸೃಷ್ಟಿ ಆಗುವಂತೆ ಸಹಕಾರವನ್ನು ರಾಜ್ಯ ಸರಕಾರ ಮಾಡಬೇಕು. ರಾಜಕೀಯ ಕುರ್ಚಿ ಸಲುವಾಗಿ ಲಾಕ್ ಡೌನ್ ದುರುಪಯೋಗ ಆಗಬಾರದು ಎಂದು ಯತ್ನಾಳ ಮತ್ತೆ ಸಿಎಂ ಗೆ ಟಾಂಗ್ ನೀಡಿದರು.

ಲಾಕಡೌನ್ ಮುಂದೆವರೆಸುವದು ಬೇಡಾ ಎನ್ನುವ ಚರ್ಚೆ ಅನವಶ್ಯಕ. ಜೂ. 7 ರೊಳಗೆ ಲಾಕಡೌನ್ ನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

Leave a Reply

ಹೊಸ ಪೋಸ್ಟ್‌