ಡಾ. ರವಿ. ಎಸ್. ಕೋಟೆಣ್ಣವರ,
ಹೋಮಿಯೋಪಥಿ ವೈದ್ಯರು
ವಿಜಯಪುರ: ವಿಶ್ವ ಆರೋಗ್ಯ ಸಂಸ್ಥೆಯು ಪ್ರತೀ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನಾಚಾರಣೆ ಘೋಷಣೆ ಮಾಡಿದ್ದು, ಇದನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ದಿನದಂದು ಒಂದು ಘೋಷ ವಾಖ್ಯವನ್ನು ನೀಡಿ ಈ ನಿಟ್ಟಿನಲ್ಲಿ ವರ್ಷವಿಡಿ ಸರಕಾರ ಮತ್ತು ಸರಕಾರ ಹೊರತಾದ ಸಂಘ-ಸಂಸ್ಥೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ವರ್ಷದ ಘೋಷ ವಾಖ್ಯ ತ್ಯಜಿಸಲು ಬದ್ಧರಾಗಿ ಎಂಬುದಾಗಿದೆ.
ಈಗಾಗಲೇ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಇದರ ಜೊತೆಗೆ ಬ್ಲ್ಯಾಕ ಫoಗಸ್ ಕೂಡ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಶ್ವಾಸಕೋಶ ಸಂಬಂಧಿಸಿದ ರೋಗವಾಗಿರುವ ಕಾರಣ ಧೂಮಪಾನದಿಂದ ಶ್ವಾಸಕೋಶ ದುರ್ಬಲಗೊಳ್ಳುತ್ತವೆ. ಆದ್ದರಿಂದ ಧೂಮಪಾನಿಗಳು ಇಂದು ದೃಢ ನಿಧಾ೯ರ ಮಾಡಿ- ವ್ಯಸನ ತ್ಯಜಿಸಲು ಬದ್ಧರಾಗಿರಿ.
ಸಾರ್ವಜನಿಕ ಆರೋಗ್ಯ ಸಮಸ್ಯೆ ಮತ್ತು ಸಾಮಾಜಿಕ ಸಮಸ್ಯೆಗಳಲ್ಲಿ ತಂಬಾಕು ಸೇವನೆಯು ಒಂದಾಗಿದೆ, ತಂಬಾಕಿನಲ್ಲಿ ನಿಕೋಟಿನ್, ಅಮೋನಿಯಾ, ಕಾಬ೯ನ್ ಮೋನಾಕ್ಸೈಡ, ಹೈಡ್ರೋಜನ ಸೈನೆಡ, ಟಾರ ಹಾಗೂ ಆರ್ಸನಿಕ ನಂಥ ಹಲವಾರು ಹಾನಿಕಾರಾಕ, ವಿಷಕಾರಕ ರಾಸಾಯನಿಕ ಪದಾರ್ಥಗಳಿರುತ್ತವೆ. ವಿಶ್ವಾದ್ಯಂತ ಪ್ರತಿವರ್ಷ 5.40 ಮಿಲಿಯನ್ ಜನರು ತಂಬಾಕು ಸೇವನೆಯಿಂದ ಮರಣ ಹೊಂದುತ್ತಿದ್ದರೆ, ಧೂಮಪಾನ ಮಾಡದವರು ಪರೋಕ್ಷವಾಗಿ ಧೂಮಪಾನಕ್ಕೆ ಬಲಿಯಾಗುವವರ ಸಂಖ್ಯೆ 1.20 ದಶಲಕ್ಷದಷ್ಟಿದೆ. ಪ್ರಪಂಚದ ಸಾವಿಗೆ ಕಾರಣವಾಗುವ ಎಂಟು ಮುಖ್ಯ ಕಾರಣಗಳಲ್ಲಿ ತಂಬಾಕಿನಿಂದ ಸಂಭವಿಸುವ ಕಾರಣ ಆರನೇಯ ಸ್ಥಾನದಲ್ಲಿದೆ.
ಸಮೀಕ್ಷೆಯ ಪ್ರಕಾರ ಭಾರತದಲ್ಲಿಯೂ ಪ್ರತೀ ವರ್ಷ ಎಂಟರಿಂದ ಒಂಬತ್ತು ಲಕ್ಷ ಭಾರತೀಯರು ತಂಬಾಕು ಸಂಬಂಧಿತ ಕಾಯಿಗಳಿಂದ ಸಾವಿಗೀಡಾಗುತ್ತಿದ್ದಾರೆ. ದೃಢ ನಿಧಾ೯ರ ಮಾಡಿದರೆ ಈ ಸಾವುಗಳನ್ನು ತಡೆಗಟ್ಟಬಹುದು.
ಪ್ರತಿ ಸಿಗರೇಟು ಅಥವಾ ಬೀಡಿ ಸೇವನೆಯಿಂದ ಒಬ್ಬ ವ್ಯಕ್ತಿಯ ಏಳು ನಿಮಿಷ ಆಯುಷ್ಯ ಕಡಿಮೆಯಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ವಿಶ್ವಾದ್ಯಂತ ಇರುವ 11.10 ಶತಕೋಟಿ ಧೂಮಪಾನಿಗಳಲ್ಲಿ ಸುಮಾರು ಶೇ. 80 ರಷ್ಟು ಜನ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ತಂಬಾಕು ಸಂಬಂಧಿತ ಕಾಯಿಲೆ ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದೆ. ಮನೆಯ ದೈನಂದಿನ ಆಹಾರ ಮತ್ತು ಮೂಲಭೂತ ಅಗತ್ಯಗಳಿಗೆ ವೆಚ್ಚಗಳನ್ನುಮಾಡುವ ಬದಲಾಗಿ ತಂಬಾಕಿಗೆ ಖರ್ಚು ಮಾಡುವ ಮೂಲಕ ತಂಬಾಕು ಬಳಕೆಯು ಬಡತನಕ್ಕೆ ಕಾರಣವಾಗಿದೆ. ಭಾರತ ಸರಕಾರ 2007-08ರಲ್ಲಿ 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು (ನ್ಯಾಶನಲ್ ಟೊಬ್ಯಾಕೋ ಕಂಟ್ರೋಲ ಪ್ರೋಗ್ರಾಮ) ಪ್ರಾರಂಬಿಸಿತು.
ಕಡ್ಡಾಯವಾಗಿ ತಂಬಾಕು ಉತ್ಪನ್ನಗಳ ಮೇಲೆಯೇ ತಂಬಾಕು ಸೇವನೆ ಹಾನಿಕಾರಕ ಮತ್ತು ಅಪಾಯಕಾರಕ ಎಂದು ಮುದ್ರಿಸಿದ್ದರೂ ಕೂಡ ತಂಬಾಕು ಸೇವನೆ ಮಾಡುವ ವ್ಯಸನಿಗಳು ಇದರ ದಾಸರಾಗಿದ್ದಾರೆ.
ತಂಬಾಕಿನಿಂದ ಮಾನವನ ಶರೀರದ ಮೇಲಾಗುವ ದುಷ್ಪರಿಣಾಮಗಳು
ತಂಬಾಕು ಸೇವನೆಯಿಂದ ಕಾಣುವ ಸಾಮಾನ್ಯ ಆರೋಗ್ಯ ತೊಂದರೆಗಳೆಂದರೆ, ಕೆಮ್ಮು, ಉಬ್ಬಸ, ಪಿತ್ತ ಹಾಗೂ ಪುರುಷರಲ್ಲಿ ನಪುಂಸಕತ್ವ. ಮಹಿಳೆಯರಲ್ಲಿ ಗರ್ಭಪಾತ, ಅಸಹಜ ಶಿಶುಗಳ ಜನನ, ಕಡಿಮೆ ತೂಕದ ಶಿಶುಗಳ ಜನನಗಳಿಂದ ಗಂಭೀರ ಕಾಯಿಲೆಗಳಾದ ಧ್ವನಿ ಪೆಟ್ಟಿಗೆಯ ಕ್ಯಾನ್ಸರ, ಬಾಯಿ ಕ್ಯಾನ್ಸರ, ಶ್ವಾಸಕೋಶದ ಕ್ಯಾನ್ಸರ, ಜಠರದ ಹುಣ್ಣುಗಳು, ಪ್ಯಾಂಕ್ರಿಯಾಟೈಟಿಸ್ ಕಾಯಿಲೆ, ಪ್ಯಾಂಕ್ರಿಯಾ ಕ್ಯಾನ್ಸರ, ಹೃದಯದ ಕಾಯಿಲೆಗಳು, ಮೂತ್ರಕೋಶದ ಕ್ಯಾನ್ಸರನಂಥ ಮಾರಕ ರೋಗಗಳು ಬರುತ್ತವೆ.
ಕವಿ ಸರ್ವಜ್ಞನು ಧೂಮಪಾನ ವ್ಯಸನದ ಕುರಿತು ತಮ್ಮ ತ್ರಿಪದಿ ವಚನದಲ್ಲಿ ಹೀಗೆ ಹೇಳಿದ್ದಾರೆ
ಹೊಗೆಯ ತಿಂಬುವದೊಂದು। ಸುಗುಣವೆಂದೆನಬೇಡ।
ಹೊಗೆಯ ಕುಡಿದೆಲೆಯನಗಿದ ಬಾಯ್ಸಿಂದಿಯಾ।
ಲಗಳೆಯಂತಿಹುದು ಸರ್ವಜ್ಞII
ಸ್ವಸ್ಥ-ಸದೃಢ-ಸಮಥ೯ ಆರೋಗ್ಯ ಪಡೆಯ ಬೇಕಾದರೆ ಸಮಾಜದ ಪ್ರತಿಯೊಬ್ಬ ನಾಗರಿಕ ತಂಬಾಕಿನಿಂದ ಶರೀರದ ಮೇಲಾಗುವ ದುಷ್ಪರಿಣಾಮಗಳನ್ನು ಅಕ್ಕ-ಪಕ್ಕದವರಿಗೂ ಜೊತೆಗೆ ತಾವೂ ಕೂಡ ಆತ್ಮಾಲೋಕನ ಮಾಡಿಕೊಳ್ಳಬೇಕು. ಜೀವನವನ್ನು ಆಯ್ದುಕೊಳ್ಳಿ ತಂಬಾಕನ್ನಲ್ಲ-ವ್ಯಸನಗಳಿಗೆ ದೃಢ ನಿಧಾ೯ರವೇ ಮದ್ದು-ಇಂದೇ ಧೂಮಪಾನ ತ್ಯಜಿಸಲು ಬದ್ಧರಾಗೋಣ(Commit to quit ).
IIಸವೇ೯ ಜನಃ ಸುಖಿನೋ ಭವಂತುII
(ಲೇಖನ ಮತ್ತು ಫೋಟೋ ಲೇಖಕರಿಗೆ ಸಂಬಂಧಿಸಿದ್ದು).