ಬಸವನ ಬಾಗೇವಾಡಿ ಪಟ್ಟಣದ ಜನತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ನೀಡಲು ರಾಷ್ಟ್ರೀಯ ಬಸವ ಸೈನ್ಯ ಆಗ್ರಹ

ವಿಜಯಪುರ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಜನತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.

ಬಸವನ ಬಾಗೇವಾಡಿಯಲ್ಲಿರುವ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ತೆರಳಿದ ಪದಾಧಿಕಾರಿಗಳು ತಾಲೂಕು ಆರೋಗ್ಯಾಧಿಕಾರಿ ಓತಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಬಸವನ ಬಾಗೇವಾಡಿ ಪಟ್ಟಣದಲ್ಲಿ ಕಳೆದ 15 ದಿನಗಳಿಂದ ಸಾರ್ವಜನಿಕರಿಗೆ ಕೊರೊನಾ ಲಸಿಕೆಯನ್ನು ನೀಡುವುದನ್ನು ನಿಲ್ಲಿಸಲಾಗಿದೆ. ಸಾರ್ವಜನಿಕರು ಲಸಿಕಾ ಕೇಂದ್ರಕ್ಕೆ ಹೋದರೆ ಅಲ್ಲಿಯ ಸಿಬ್ಬಂದಿ ಮುಂದಿನ ವಾರ ಬನ್ನಿ, ಈಗ ಲಸಿಕೆ ಎಂದು ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಬಸವನ ಬಾಗೇವಾಡಿ ಪಟ್ಟಣದಲ್ಲಿ ಸುಮಾರು 40 ಸಾವಿರ ಜನ ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆದ್ಯತೆ ಮೇರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಲಸಿಕೆ ಹಾಕಿ ಸಾರ್ವಜನಿಕರ ಪ್ರಾಣವನ್ನು ರಕ್ಷಿಸಬೇಕು. ಅಲ್ಲದೇ, ಪಟ್ಟಣದಲ್ಲಿ ಇನ್ನೋಂದು ಲಸಿಕಾ ಕೇಂದ್ರವನ್ನು ಆರಂಭಿಸಬೇಕು ಎಂದು ಶಂಕರಗೌಡ ಬಿರಾದಾರ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ತಾಲೂಕಾಧ್ಯಕ್ಷ ಸಂಜು ಬಿರಾದಾರ, ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ, ಗುರುರಾಜ ವಂದಾಲ, ವಿರೇಶ ಗಬ್ಬೂರ, ಮಹಾಂತೇಶ ಹಾರಿವಾಳ, ವಿಜಯ ರಗಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌