ಹಾವೇರಿ- ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕಡೌನ್ ವಿಸ್ತರಣೆ ಕುರಿತು ಜೂ. 5 ರಂದು ನಿಗದಿಯಾಗಿರುವ ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಗ್ರಾಮದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಈ ವಿಷಯ ತಿಳಿಸಿದ್ದಾರೆ.
ಜೂ.4 ರಂದು ಮುಖ್ಯಮಂತ್ರಿ ಬಿ ಎಸ್
ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ನಾನಾ ಜಿಲ್ಲೆಗಳಲ್ಲಿರುವ ಪರಿಸ್ಥಿತಿಯನ್ನು ಅವರು ಅರಿತುಕೊಳ್ಳುತ್ತಾರೆ. ಕೆಲ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಿದೆ. ಕೆಲ ಜಿಲ್ಲೆಗಳಲ್ಲಿ ಕಡಿಮೆ ಆಗಬೇಕಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ತಜ್ಞರು ನೀಡುವ ವರದಿಯನ್ನು ವಿಶ್ಲೇಷಣೆ ಮಾಡಿ ರಾಜ್ಯದಲ್ಲಿ ಲಾಕಡೌನ್ ಯಾವ ರೀತಿ ಇರಬೇಕು ಮತ್ತು ಹೇಗೆ ಮುಂದುವರಿಸಬೇಕು? ಎಂಬುದರ ಕುರಿತು ಆ ಸಭೆಯಲ್ಲಿ ಮುಖ್ಯಮಂತ್ರಿಗಳು ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕೊರೊನಾ ಮೂರನೇ ಅಲೆಗೆ ರಾಜ್ಯ ಸರಕಾರ ತನ್ನ ಶಕ್ತಿ ಮೀರಿ ಸಿದ್ಧತೆಗಳನ್ನು ಮಾಡಿದೆ. ಈಗಾಗಲೇ ರಾಜ್ಯದಲ್ಲಿ 24 ಸಾವಿರಕ್ಕಿಂತ ಹೆಚ್ಚು ಆಕ್ಸಿಜನ್ ಬೆಡ್ ಗಳನ್ನು ಸಿದ್ಧಪಡಿಸಲಾಗಿದೆ. ವೆಂಟಲೇಲೆಟರ್ ಗಳ ಸಂಖ್ಯೆಯನ್ನು ಶೇ. 100ರಷ್ಟು ಹೆಚ್ಚು ಮಾಡಲಾಗಿದೆ. ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜನ್ ಜನರೇಟರ್ ಮಾಡಬೇಕೆಂದು ತೀರ್ಮಾನಿಸಲಾಗಿದೆ. ಆಕ್ಸಿಜನ್ ಜನರೇಟರ್ ಇದ್ದರೆ ಅಪಾಯದಲ್ಲಿರುವ ಸೋಂಕಿತರಿಗೆ ಅನುಕೂಲ ಆಗುತ್ತದೆ ಎಂದು ಅವರು ಹೇಳಿದರು.
ಜುಲೈ-ಲ, ಆಗಸ್ಟ್, ಸಪ್ಟೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಲಸಿಕೆ ನೀಡುವ ಅಭಿಯಾನ ನಡೆಯಲಿದೆ. ಸದ್ಯಕ್ಕೆ ಕೊರೊನಾ ವಾರಿಯರ್ ಮತ್ತು ಎರಡನೇ ಡೋಸ್ ಪಡೆಯಲು ಅರ್ಹರಿರುವವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಹಾವೇರಿ ಜಿಲ್ಲೆಗೆ 51 ವೈದ್ಯರ ನೇಮಕ
ಹಾವೇರಿ ಜಿಲ್ಲೆಯ ಬಾನಾ ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇದ್ದ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಸದ್ಯಕ್ಕೆ 51 ಜನ ವೈದ್ಯರನ್ನು ನೇಮಕ ಮಾಡಲಾಗಿದೆ. ವೈದ್ಯರ ಅಗತ್ಯತೆಯನ್ನು ಇದು ನೀಗಿಸುತ್ತದೆ ಎಂಬ ಸಮಾಧಾನ ತಮಗಿದೆ. ಅವರು ಬೇಗ ಬಂದು ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡುತ್ತೇನೆ. ಖಾಲಿ ಇರುವ ಇನ್ನಷ್ಟು ವೈದ್ಯರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಬ್ಲಾಕ್ ಫಂಗಸ್ ಎಂಬ ಚಾಲೆಂಜ್
ಹಾವೇರಿ ಜಿಲ್ಲೆಯಲ್ಲಿ ನಮಗೆ ಮುಖ್ಯವಾಗಿ ಚಾಲೆಂಜ್ ಇರೋದು ಬ್ಲಾಕ್ ಫಂಗಸ್. ಈ ಸೋಂಕಿಗೆ ಹೆಚ್ಚಿನ ಪ್ರಮಾಣದಲ್ಲಿ ಔಷಧ ನೀಡುವಂತೆ ಕೇಂದ್ರ ರಾಸಾಯನಿಕ ಸಚಿವ ಡಿವಿ ಸದಾನಂದಗೌಡರಿಗೆ ಮನವಿ ಮಾಡಿದ್ದೇನೆ. ಹಾವೇರಿ ಜಿಲ್ಲೆಗೆ ಹೆಚ್ಚಿನ ಪ್ರಮಾಣದ ಔಷಧಿಯನ್ನು ನೀಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಮಕ್ಕಳಿಗಾಗಿ ವಿಶೇಷ ಐಸಿಯು
ಸೋಂಕು ತಗುಲಿದ ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳಿಗಾಗಿಯೇ ವಿಶೇಷ ವಾರ್ಡ್ ನಿರ್ಮಾಣ ಮಾಡುವಂತೆ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಹೆರಿಗೆ ವಾರ್ಡ್ ನ್ನು ವಿಶೇಷವಾಗಿ ಮಕ್ಕಳ ಐಸಿಯು ವಾರ್ಡ್ ಗಳನ್ನಾಗಿ ಪರಿವರ್ತನೆ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.
ಆಸ್ಪತ್ರೆಗಳ ಪರಿಶೀಲನೆ
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ, ಮಾಸೂರು ಮತ್ತು ಹಿರೇಕೆರೂರಿನ ಸರಕಾರಿ ಆಸ್ಪತ್ರೆಗಳಲ್ಲಿನ ಪರಿಸ್ಥಿತಿ ಹಾಗೂ ವೈದ್ಯೋಪಚಾರ ಗಳ ಕುರಿತು ಗೃಹ ಸಚಿವ ಬೊಮ್ಮಾಯಿ ಹಾಗೂ ಕೃಷಿ ಸಚಿವ ಬಿಸಿ ಪಾಟೀಲ ಪರಿಶೀಲನೆ ನಡೆಸಿದರು.
ಅಲ್ಲದೇ, ಸೋಂಕಿತರಿಗೆ ತಕ್ಷಣ ಚಿಕಿತ್ಸೆ ನೀಡಲು ನಿರ್ಮಾಣ ಮಾಡಲಾಗಿರುವ ಕೋವಿಡ್ ಕೇರ್ ಸೆಂಟರ್ ಗಳಿಗೆ ಸಚಿವರು ಭೇಟಿ ನೀಡಿದರು. ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಆಕ್ಸಿಜನ್ ವೆಂಟಿಲೇಟರ್ ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿ ಎಂದು ಅಧಿಕಾರಿಗಳಿಗೆ ಸಚಿವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು,