ವಿಜಯಪುರ: ರಾಜ್ಯ ಸರಕಾರದಿಂದ ಅಭಿವೃದ್ಧಿ ಪಡಿಸಿದ ಬೆಡ್ ಮ್ಯಾನೇಜಮೆಂಟ್ ಸಿಸ್ಟಮ್ ಅಡಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಹಂಚಿಕೆ ಮಾಡಲಾದ ಬೆಡ್ ಪೈಕಿ ಶೇ.50ರಷ್ಟು ಹಾಸಿಗೆಗಳನ್ನು ಸರಕಾರಿ ಕೋಟಾದಡಿ ಕಾಯ್ದಿರಿಸುವಂತೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚಿನೆ ನೀಡಿದ್ದಾರೆ.
ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆ ಮುಖ್ಯಸ್ಥರು, ವೈದ್ಯಾಧಿಕಾರಿಗಳು, ಚಿಕ್ಕ ಮಕ್ಕಳ ತಜ್ಞ ವೈದ್ಯರು, ಇಂಡಿಯನ್ ಅಕ್ಯಾಡೆಮಿ ಆಫ್ ಪಿಡಿಯಾಟ್ರಿಕ್ಸ, ಅಧ್ಯಕ್ಷರು, ಐ ಎಮ್ ಎ ಅಧ್ಯಕ್ಷರೊಂದಿಗೆ ಕೊರೊನಾ ಮೂರನೇ ಅಲೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆ ನಡೆಸಿದ ಅವರು, ಮೂರನೇ ಅಲೆ ಎದುರಿಸಲು ಮತ್ತು ಸೂಕ್ತ ಚಿಕಿತ್ಸೆ ಒದಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಶೇ. 50ರಷ್ಟು ಬೆಡ್ ಗಳನ್ನು ಕಡ್ಡಾಯವಾಗಿ ಮೀಸಲಿಡುವಂತೆ ಖಾಸಗಿ ಆಸ್ಪತ್ರೆ ವೈದ್ಯರಿಗೆ ಸೂಚಿಸಿದರು.
ಕೊರೊನಾ ಮೂರನೇ ಅಲೆಯ ಸಂದರ್ಭದಲ್ಲಿ ಕೊರೊನಾ ಸೋಂಕಿತ ಮಕ್ಕಳಿಗಾಗಲಿ, ಸೋಂಕಿತರಿಗಾಗಲಿ ವೆಂಟಿಲೇಟರ್, ಆಕ್ಸಿಜನ್ ಮತ್ತು ಬೆಡ್ ಗಳ ಕೊರತೆಯಾಗದಂತೆ ಯೋಜನೆ ರೂಪಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಕೊರಬಾ ಜೊತೆಗಡ ಕೊರೊನಾ ಹೊರತಾದ ರೋಗಿಗಳಿಗೂ ಆದ್ಯತೆ ಮೇಲೆ ಚಿಕಿತ್ಸೆ ಒದಗಿಸಬೇಕು. ಈವರೆಗೆ ಎ ಬಿ ಎ ಆರ್ ಕೆ ಅಡಿ ಎನ್ರೋಲ್ ಮಾಡಿಕೊಳ್ಳದೆ ಬಾಕಿ ಉಳಿದಿರುವ ಖಾಸಗಿ ಆಸ್ಪತ್ರೆಗಳು ತಕ್ಷಣ ಎನ್ರೋಲ್ ಮಾಡಿಸಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಕೊರೊನಾ ಕರ್ತವ್ಯ ಕಾರಣವಾಗಿಟ್ಟುಕೊಂಡು ಕೊರೊನಾ ಹೊರತಾದ ರೋಗಿಗಳ ನಿರ್ಲಕ್ಷ ಮಾಡಬಾರದು. ಈವರೆಗೆ ವಿಜಯಪುರ ಜಿಲ್ಲಾಡಳಿತದೊಂದಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರ ಸಹಕಾರದಿಂದಾಗಿ ರಾಜ್ಯದಲ್ಲಿಯೇ ಕೋವಿಡ್ ಸಾವು ನಿಯಂತ್ರಣ, ಕೋವಿಡ್ ಸೋಂಕು ಪ್ರಮಾಣ ಕಡಿತವಾಗಿದೆ. ಆಕ್ಸಿಜನ್ ಮತ್ತು ರೆಮಡಿಸಿವಿರ ಎಂಜೆಕ್ಷನ್ ಸಮರ್ಪಕ ನಿರ್ವಹಣೆಯಿಂದಾಗಿ ರಾಜ್ಯದಲ್ಲಿಯೇ ನಾವು ಮುಂಚೂಣಿಯಲ್ಲಿ ಇದ್ದೇವೆ ಎಂದು ಪಿ. ಸುನೀಲ ಕುಮಾರ ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳನ್ನು ಆದ್ಯತೆ ಮೇಲೆ ಚಿಕಿತ್ಸೆ ಒದಗಿಸಬೇಕು. ರೋಗಿಗಳ ಕ್ರಿಟಿಕಲ್ ಸಂದರ್ಭದಲ್ಲಿ ಮಾತ್ರ ಇತರೆ ಆಸ್ಪತ್ರೆಗಳಿಗೆ ರೆಫರ್ ಮಾಡಬೇಕು. ಸಂಶೋಧನಾತ್ಮಕ ರೀತಿಯಲ್ಲಿ ಇಂತಹ ರೋಗಿಗಳಿಗೆ ಚಿಕಿತ್ಸಾ ವಿಧಾನ ಒದಗಿಸಬೇಕು ಎಂದು ಸೂಚನೆ ನೀಡಿದ ಅವರು, ಸಧ್ಯ ಬಿ ಎಲ್ ಡಿ ಇ ಆಸ್ಪತ್ತೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಯಶೋಧ ಆಸ್ಪತ್ರೆಯ ಮೂಲಕವು ನುರಿತ ವೈದ್ಯರು ಮತ್ತು ಸೌಕರ್ಯಗಳೊಂದಿಗೆ ಚಿಕಿತ್ಸೆ ಒದಗಿಸಲು ಸಲಹೆ ನೀಡಿದರು.
ಸಭೆಯಲ್ಲಿ ಈವರೆಗೆ ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ ನೀಡಿರುವ ಸಹಕಾರಕ್ಕೆ ಖಾಸಗಿ ಆಸ್ಪತ್ರೆ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದರು,
ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಅವರು ನೀಡಿದ ದೂರಿನ ಹಿನ್ನೆಲೆ ಜಿಲ್ಲೆಯಲ್ಲಿ ಸರಕಾರಿ ವೈದ್ಯರು ಖಾಸಗಿ ನರ್ಸಿಂಗ್ ಹೋಮ್ ನಡೆಸುತ್ತಿರುವ ಬಗ್ಗೆ ಪರಿಶೀಲನಾ ವರದಿ ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ವಿಜಯಪುರ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಈವರೆಗೆ ಸಾಂಘಿಕ ಪ್ರಯತ್ನ, ಸಮನ್ವಯತೆ ಖಾಸಗಿ ಆಸ್ಪತ್ರೆಗಳ ಸಹಕಾರದಿಂದ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿ, ರಾಜ್ಯದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಬೆಂಗಳೂರು, ಮಹಾರಾಷ್ಟ್ರ, ಬೆಳಗಾವಿ, ಧಾರವಾಡ ಮತ್ತು ಇತರೆ ಜಿಲ್ಲೆಗಳ ರೋಗಿಗಳು ಕೂಡ ವಿಶ್ವಾಸದಿಂದ ಇಲ್ಲಿ ಚಿಕಿತ್ಸೆ ಪಡೆದಿರುವುದು ಜಿಲ್ಲೆಯು ವೈದ್ಯಕೀಯ, ಸಾಧನೆಯ ಪ್ರತಿಕವಾಗಿದೆ. ಮುಂದಿನ ದಿನಗಳಲ್ಲಿಯೂ ಎಲ್ಲ ವೈದ್ಯರ ಸಹಕಾರವಿರಲಿ ಎಂದು ಕೋರಿದರು.
ಕೆಲವು ಆಸ್ಪತ್ರೆಗಳ ಮುಖ್ಯಸ್ಥರು ವೈದ್ಯಾಧಿಕಾರಿಗಳು ಈ ಮೂರನೇ ಅಲೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ಬಿ ಎಲ್ ಡಿ ಇ ಸಂಸ್ಥೆ
ಮೂರನೆ ನೇ ಅಲೆ ಬರುವ ಸಾಧ್ಯತೆಯಿದ್ದು ಎಲ್ಲ ರೀತಿಯ ಪೂರ್ವಭಾವಿ ತಯಾರಿಗಳನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ
ಇಂಡಿಯನ್ ಅಕಾಡೆಮಿ ಆಫ್ ಪೇಡಿಯಾಟ್ರಿಕ್ಸ್ ಅಧ್ಯಕ್ಷರು
ಕೊರೊನಾ ಮೂರನೇ ಅಲೆ ಬರುವ ಸಂಭವನೀಯತೆ ತೀರಾ ಕಡಿಮೆಯಿದೆ. ಕೆಲವು ಸರಕಾರಿ ವೈದ್ಯರು ತಮ್ಮ ಸ್ವಂತ ಖಾಸಗಿ ನರ್ಸಿಂಗ್ ಹೋಮ್ ಗಳನ್ನು ನಡೆಸುತ್ತಿದ್ದು, ಇದು ಕಾನೂನು ಬಾಹಿರವಾಗಿದ್ದು ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಡಾ. ಬಿದರಿ.ಅಶ್ವಿನಿ ಬಿದರಿ ಆಸ್ಪತ್ರೆ
ಮೂರನೇ ಅಲೆಯು ಬರುವ ಸಂಭವವಿದೆ. ಆದರೆ ಎರಡನೇ ಅಲೆಯಷ್ಟು ಏಕಾಏಕಿ ಒಮ್ಮೆಲೇ ಹೆಚ್ಚು ಪ್ರಕರಣಗಳು ಕಂಡು ಬರುವುದಿಲ್ಲ. ಆದರೆ ಮೂರನೇ ಅಲೆಯು ಹೆಚ್ಚಾಗಿ ಮಕ್ಕಳನ್ನು ಭಾಧಿಸುವ ಸಾಧ್ಯತೆಯಿದೆ. ಮಕ್ಕಳ ಚಿಕಿತ್ಸೆಯ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸರಕಾರದಿಂದ ಚಿಕಿತ್ಸಾ ದರವನ್ನು ಸೂಕ್ತ ರೀತಿಯಲ್ಲಿ ನಿಗದಿ ಪಡಿಸಬೇಕು.
ಡಾ. ಮದ್ದರಕಿ, ಯಶೋಧ ಆಸ್ಪತ್ರೆ
ಮೂರನೇ ಅಲೆಯು 5- 6 ತಿಂಗಳ ನಂತರ ಬರುವ ಸಾಧ್ಯತೆಯಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿರುವ ಪ್ರಕರಣಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು ಮತ್ರು ಕಾಲಕಾಲಕ್ಕೆ ಈ ರೀತಿಯ ಸಭೆಗಳನ್ನು ನಡೆಸಿ ಮುಂಜಾಗೃತ ಕ್ರಮಗಳ ಬಗ್ಗೆ ಚರ್ಚಿಸುವುದು ತೀರಾ ಅಗತ್ಯವಾಗಿದೆ.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ್, ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿಜಯಕುಮಾರ ಅಜುರೆ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ, ಮಹೇಂದ್ರ ಕಾಪಸೆ ಸ್ವಾಗತಿಸಿ, ವಂದಿಸಿದರು.