ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಸಾಕಷ್ಟು ಯಶಸ್ಸು ಸಾಧಿಸಿರುವ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಈಗ ಮೂರನೇ ಅಲೆ ತಡೆಗಟ್ಟಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಗಮನ ಹರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿ. ಪ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಜೊತೆ ವಿಜಯಪುರ ಜಿಲ್ಲಾಸ್ಪತ್ರಗೆ ಭೇಟಿ ನೀಡಿದ ಅವರು, ಕೊರೊನಾ ಮೂರನೇ ಅಲೆಯನ್ನು ತಡೆಯಲು ಪೂರ್ವ ಸಿದ್ಧತೆಗಳ ಬಗ್ಗೆ ಸದೀರ್ಘ ಸಭೆ ನಡೆಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ವೈದ್ಯರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಈ ಕುರಿತು ಅವರು ಚರ್ಚೆ ನಡೆಸಿದರು.
ಹೊಸದಾಗಿ ಅಳವಡಿಸಲಿರುವ 13 ಕೆ. ಎಲ್. ಸಾಮರ್ಥ್ಯದ ದ್ರವ ಆಮ್ಲಜನಕ ಘಟಕವನ್ನು ಯಾವ ಸ್ಥಳದಲ್ಲಿ ಸ್ಥಾಪಿಸುವುದು ಸೂಕ್ತ ಎಂಬುದರ ಕುರಿತು ಚರ್ಚೆ ನಡೆಯಿತು.
ಕೊರೊನಾ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಣೆ ನಡೆಸಿದ ಡಿಸಿ, ಸಿಇಎ
ಈ ಮಧ್ಯೆ ಕೊರೊನಾ ರೋಗಿಗಳನ್ನು ನಿಯಮಾನುಸಾರ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ ಅವರು, ಅಲ್ಲಿನ ವ್ಯವಸ್ಥೆಯ ಬಗ್ಗೆಯೂ ಮಾಹಿತಿ ಪಡೆದರು. ಅಲ್ಲದೇ, ಪೂರೈಕೆಯಾದ ಆಕ್ಸಿಜನ್ ಕಾನ್ಸಂಟ್ರೇಟರ್ ಗಳ ಬಳಕೆಯ ಕುರಿತೂ ವೈದ್ಯರೊಂದಿಗೆ ಚರ್ಚೆ ನಡೆಸಿದರು.
ಮಕ್ಕಳಿಗಾಗಿ ಪ್ರತ್ಯೇಕ ತೀವ್ರ ನಿಗಾ ಚಿಕಿತ್ಸಾ ಘಟಕ ಸ್ಥಾಪನೆಗೆ ಸೂಚನೆ
ಇದೇ ವೇಳೆ ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸೂಚನೆಗಳಿರುವ ಹಿನ್ನೆಲೆಯಲ್ಲಿ ಮಕ್ಕಳಿಗಾಗಿಯೇ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ ಗಳ ಒಂದು ಪ್ರತ್ಯೇಕ ತೀವ್ರ ನಿಗಾ ಘಟಕ(ಐಸಿಯು) ಸ್ಥಾಪಿಸಬೇಕು. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಕ್ಸಿಜನ್ ಸಿಲಿಂಡರ್ ಗಳನ್ನು ಖರೀದಿ ಮಾಡಿ ಇಟ್ಟುಕೊಳ್ಳುವಂತೆಯೂ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪಸೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶರಣಪ್ಪ ಕಟ್ಟಿ, ಸಿಎಂಓ ಡಾ. ಲಕ್ಕಣ್ಣವರ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.