ಕೊರೊನಾ, ಲಾಕಡೌನ್ ಕಲಿಸಿದ ಪಾಠ- ಮನೆಯಂಗಳದಲ್ಲಿಯೇ ಕೈದೋಟ ನಿರ್ಮಿಸಿ ಮಾದರಿಯಾದ ದಂಪತಿ

ವಿಜಯಪುರ: ಕೊರೊನಾ ಎರಡನೇ ಅಲೆ ಬಸವ ನಾಡು ಅಷ್ಟೇ ಅಲ್ಲ, ಇಡೀ ರಾಜ್ಯ ಮತ್ತು ದೇಶವನ್ನು ಹೈರಾಣಾಗಿಸಿದೆ. ಇದರ ನಿಯಂತ್ರಣಕ್ಕೆ ಸರಕಾರ ಜಾರಿ ಮಾಡಿರುವ ಲಾಕಡೌನ್ ಜನರನ್ನು ಮನೆಯಲ್ಲಿಯೇ ಕೂಡುವಂತೆ ಮಾಡಿದ್ದು, ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ಬಸವ ನಾಡಿನ ದಂಪತಿ ಇತರರಿಗೆ ಮಾದರಿಯಾಗಿದ್ದಾರೆ.

ಬರಿ ಮನೆಯಲ್ಲಿ ಇದ್ದು ಏನು ಉಪಯೋಗ? ಈ ಸಮಯವನ್ನು ಸದುಪಯೋಗ ಪಡಿಸಿಕೊಂಡರಾಯಿತು ಎಂದು ಯೋಚಿಸಿದ ವಿಜಯಪುರ ನಗರದ ದಂಪತಿ ಹೊಸ ಯೋಜನೆಯನ್ನು ರೂಪಿಸಿ ಜಾರಿಗೆ ತಂದು ಈಗ ಅದರ ಫಲ ಉಣ್ಣುತ್ತಿದ್ದಾರೆ.

ವಿಜಯಪುರದಲ್ಲಿ ನಾಗಠಾಣ ದಂಪತಿ ಮನೆಯಂಗಳದಲ್ಲಿ ಮಾಡಿರುವ ಕೈದೋಟ

ಹೌದು. ಲಾಕಡೌನ್ ನಿಂದಾಗಿ ಕೇವಲ ಮನೆಯಲ್ಲಿ ಕುಳಿತರೆ ಸಾಕಾಗುವುದಿಲ್ಲ. ತರಕಾರಿಗಳಿಗಾದರೂ ಹೊರಗೆ ಹೋಗಲೇಬೇಕು. ಇಲ್ಲದಿದ್ದರೆ ಊಟಕ್ಕ ಏನು ಮಾಡಬೇಕು? ಮನೆಮನೆಗಳಿಗೆ ತರಕಾರಿ ಮತ್ತು ಹಣ್ಣು ಮಾರಾಟಗಾರರು ಓಣಿಗಳಲ್ಲಿ ಬರುತ್ತಾರಾದರೂ ಸುಮ್ಮನೆ ಯಾಕೆ ರಿಸ್ಕ್ ತೆಗೆದುಕೊಳ್ಳಬೇಕು ಎಂದುಕೊಂಡ ಈ ದಂಪತಿ ದಂಪತಿ ತಮ್ಮ ಮನೆಯಂಗಳದಲ್ಲಿಯೇ ಕೈದೋಟ ಮಾಡಿಕೊಂಡಿದ್ದಾರೆ.

ವಿಜಯಪುರದಲ್ಲಿ ನಾಗಠಾಣ ದಂಪತಿ ಮನೆಯಂಗಳದಲ್ಲಿ ಮಾಡಿರುವ ಕೈದೋಟದಲ್ಲಿ ಕೆಲಸ ಮಾಡುತ್ತಿರುವುದು

ರಾಸಾಯನಿಕ ಮುಕ್ತ ತರಕಾರಿ ಮತ್ತು ಹೂವು ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಇವರ ಮನೆಗೆ ಬಂದರೆ ಸಾಕು ಒಂದು ಕಡೆ ನಳನಳಿಸುತ್ತಿರುವ ಹೂವುಗಳು ಇನ್ನೊಂದೆಡೆ ಪಕ್ಕಾ ರೈತರ ಹಾಗೆ ಗಿಡಗಳಿಗೆ ನೀರುಣಿಸುತ್ತಿರುವ ದಂಪತಿಗಳು. ಇದು ವಿಜಯಪುರ ನಗರದ ಜೈಲ್ ದರ್ಗಾ ರಸ್ತೆಯಲ್ಲಿ ಇರೊ ಜೈ ಹನುಮಾನ ಕಾಲೋನಿಯಲ್ಲಿರುವ ನಾಗಠಾಣ ದಂಪತಿಯ ದೈನಂದಿನ ಕಾಯಕ.

ವಿಜಯಪುರದಲ್ಲಿ ನಾಗಠಾಣ ದಂಪತಿ ಮನೆಯಂಗಳದಲ್ಲಿ ಮಾಡಿರುವ ಕೈದೋಟದಲ್ಲಿ ಅರಳಿರುವ ಹೂವುಗಳು

40 ವರ್ಷಗಳ ವಿಜಯಪುರ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯಲ್ಲಿ ಸೂಪರವೈಸರ್ ಆಗಿ ಕೆಲಸ ಮಾಡಿದ ಶ್ರೀಶೈಲ ನಾಗಠಾಣ ಈಗ ನಿವೃತ್ತಿಯಾಗಿದ್ದಾರೆ. ಮೊದಲಿನಿಂದಲೂ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ಇವರು ನಿವೃತ್ತಿ ಬಳಿಕ ಹವ್ಯಾಸವೊಂದನ್ನು ರೂಢಿಸಿಕೊಂಡಿದ್ದಾರೆ. ಕಳೆದ ವರ್ಷ ಕೊರೊನಾ ಕಾಣಿಸಿಕೊಂಡ ಬಳಿಕ ಲಾಕಡೌನ್ ಸಂದರ್ಭದಲ್ಲಿ ತಮ್ಮ ಯೋಚನೆಯಂತೆ ಪತ್ನಿ ಮಲ್ಲಮ್ಮ ಶ್ರೀಶೈಲ ನಾಗಠಾಣ ಜೊತೆಗೂಡಿ ಮನೆಯ ಆವರಣದಲ್ಲಿ ಖಾಲಿ ಜಾಗದಲ್ಲಿ ತರಕಾರಿ ಬೆಳೆಯಲು ಕೈದೋಟ ನಿರ್ಮಿಸಿದ್ದಾರೆ.

ವಿಜಯಪುರದಲ್ಲಿ ನಾಗಠಾಣ ದಂಪತಿ ಮನೆಯಂಗಳದಲ್ಲಿ ಮಾಡಿರುವ ಕೈದೋಟದಲ್ಲಿ ಬೆಳೆದಿರುವ ತರಕಾರಿಗಳು

ಇವರ ಕೈದೋಟದಲ್ಲಿ ಕನಿಷ್ಠ 50 ನಾನಾ ಬಗೆಯ ತರಕಾರಿ, ಹೂವು, ಹಣ್ಣು ಹಾಗೂ ಆಯುರ್ವೇದ ಔಷಧ ತಯಾರಿಸಲು ಬಳಸಲು ಬೇಕಾಗುವ ಸಸ್ಯಗಳಿರುವುದು ವಿಶೇಷ. ಕೊತಂಬರಿ, ಕರಬೇವು, ರಾಜಗಿರಿ, ಕಿರಿಸಲ್ಲೆ ಪಲ್ಯ, ಫುಂಡಿ ಪಲ್ಯ ಮತ್ತಿತರ ಸೊಪ್ಪು ಬೆಳೆಸಿದ್ದಾರೆ. ಅಲ್ಲದೇ, ಟೊಮ್ಯಾಟೊ, ಬದನೆಕಾಯಿ, ಬೆಂಡೆಕಾಯಿ, ಚೌಳಿಕಾಯಿ, ಶೆಂಗಾ, ಗೆಣಸು, ನುಗ್ಗೆಕಾಯಿ ಮತ್ತಿತರ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಅಷ್ಟೇ ಅಲ್ಲ, ಕಣ್ಣಿಗೆ ಅಂದ ನೀಡುವ ಪೂಜೆಗೆ ಸಲಿಸಾಗಿ ಸಿಗುವಂತೆ ಸಂಪಿಗೆ, ಚೆಂಡು ಹೂ, ಮಲ್ಲಿಗೆ, ಗುಲಾಬಿ ಸೇರಿದಂತೆ ಐದಾರು ತರಹದ ಪುಷ್ಪಗಳನ್ನೂ ಬೆಳೆದು ಗಮನ ಸೆಳೆದಿದ್ದಾರೆ. ಔಷಧೀಯ ಗುಣಗಳನ್ನು ಹೊಂದಿರುವ ತುಳಸಿ, ಅಮೃತಬಳ್ಳಿ ಕೂಡ ಇವರ ಕೈದೋಟದಲ್ಲಿವೆ.

ವಿಜಯಪುರದಲ್ಲಿ ನಾಗಠಾಣ ದಂಪತಿ ಮನೆಯಂಗಳದಲ್ಲಿ ಮಾಡಿರುವ ಕೈದೋಟದಲ್ಲಿ ಬೆಳೆದಿರುವ ಹಣ್ಣುಗಳು

ಕಳೆದ ಒಂದು ವರ್ಷದಿಂದ ಅವರು ತರಕಾರಿ ಮಾರುಕಟ್ಟೆಗೆ ಹೋಗಿಲ್ಲ. ತಮ್ಮ ಮನೆಗೆ ಬೇಕಾದ ಕಾಯಿಪಲ್ಯ, ಹೂವುಗಳನ್ನು ತಮ್ಮ ಕೈದೊಟದಿಂದಲೇ ಬಳಸುತ್ತಿದ್ದಾರೆ ಮತ್ತು ನೆರೆಹೊರೆಯವರಿಗೆ ನೀಡುತ್ತಿದ್ದಾರೆ. ಜನರು ಸಮಯ ವ್ಯರ್ಥ ಮಾಡದೇ ತಮ್ಮ ಕೈದೋಟದಲ್ಲಿರುವ ತರಕಾರಿಗಳನ್ನು ಮಕ್ಕಳಂತೆ ಆರೈಕೆ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಇತರರೂ ಹೀಗೇ ಮಾಡಿದರೆ ಸಮಯವನ್ನು ಕಳೆಯುವುದರ ಜೊತೆಗೆ ಉತ್ತಮ ಗುಣಮಟ್ಟದ ತರಕಾರಿ ಬೆಳೆದು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂಬುದು ನಾಗಠಾಣ ದಂಪತಿಯ ಅಭಿಪ್ರಾಯವಾಗಿದೆ.

ನಾಗಠಾಣ ದಂಪತಿಯ ಕಾರ್ಯ ಇಷ್ಟಕ್ಕೆ ನಿಂತಿಲ್ಲ. ತಮ್ಮ ಮನೆಯ ಸುತ್ತಲೂ ಪೇರಲ, ಚಿಕ್ಕು, ಮಾವು, ಪಪ್ಪಾಯಿ, ರಾಮಫಲ, ಸೀತಾಫಲ ಹಾಗೂ ಹನುಮಫಲ ಹಣ್ಣುಗಳನ್ನೂ ಬೆಳೆಸಿದ್ದಾರೆ. ಈ ರೀತಿ ಹತ್ತು ಹಲವು ರೀತಿಯಲ್ಲಿ ತಮ್ಮ ಮನೆಗೆ ಬೇಗಾದ ಹಣ್ಣುಗಳನ್ನೂ ಬೆಳೆಯುತ್ತಿದ್ದಾರೆ. ಇವರ ಕೈದೋಟ ನೋಡಿದವರು ಇಷ್ಟು ಸಣ್ಣ ಜಾಗೆಯಲ್ಲಿ ಇಷ್ಟೆಲ್ಲ ಬೆಳೆಯಬಹುದಾ ಎಂದು ಅಚ್ಚರಿ ಪಡುವಂತಿದೆ ಇವರ ಕೈದೋಟ.

ವಿಜಯಪುರದಲ್ಲಿ ನಾಗಠಾಣ ದಂಪತಿ ಮನೆಯಂಗಳದಲ್ಲಿ ಮಾಡಿರುವ ಕೈದೋಟದಲ್ಲಿ ಬೆಳೆದಿರುವ ಹಣ್ಣುಗಳು

ಶ್ರೀಶೈಲ ನಾಗಠಾಣ ದಂಪತಿಯ ಈ ಕೈದೋಟ ಪ್ರೀತಿಗೆ ನೆರೆಹೊರೆಯವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಕೆಲವರು, ತಮ್ಮ ಮನೆಗಳಿಗೂ ನಾಗಠಾಣ ಇವರ ಕೈದೋಟದಿಂದಲೇ ತರಕಾರಿ ತೆಗೆದುಕೊಂಡು ಹೋಗುತ್ತಿದ್ದಾರೆ.

ಒಟ್ಟಾರೆ ಶ್ರೀಶೈಲ ನಾಗಠಾಣ ಅವರು ನಿವೃತ್ತಿ ಜೀವನವನ್ನು ಆರಾಮಾಗಿ ಕಳೆಯದೇ ಮನೆಯ ಸುತ್ತಮುತ್ತಲು ಪರಿಸರ ಸ್ನೇಹಿ ಮತ್ತು ಸಾವಯವ ತರಕಾರಿಹ, ಹೂವು ಹಾಗೂ ಹಣ್ಣುಗಳನ್ನು ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ. ಪ್ರತಿನಿತ್ಯ ಸಸಿಗೆ ನೀರುಣಿಸುವುದರಿಂದ ಹಿಡಿದು ಅವುಗಳ ಆರೈಕೆ ಮಾಡುತ್ತ ಕಣ್ಣಿಗೆ ಆನಂದ ನೀಡುವ ಮತ್ತು ಮನಸ್ಸಿಗೆ ಮುದ ನೀಡುವ ಕಾರ್ಯದಲ್ಲಿ ತೊಡಗಿರುವುದು ಗಮನಾರ್ಹವಾಗಿದೆ.

Leave a Reply

ಹೊಸ ಪೋಸ್ಟ್‌