ವಿಜಯಪುರ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ-ಅಧಿಕಾರಿಗಳು ಬಿಜೆಪಿ ಎಜೆಂಟರಂತೆ ವರ್ತಿಸುತ್ತಿದ್ದಾರೆ- ಶಾಸಕ ದೇವಾನಂದ ಚವ್ಹಾಣ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯಪುರ ನಾಗಠಾಣ(ಮೀ) ಶಾಸಕ ಡಾ. ದೇವಾನಂದ ಚವ್ಹಾಣ ಮತ್ತೋಮ್ಮೆ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ನಾಗಠಾಣ ಮತಕ್ಷೇತ್ರದಲ್ಲಿ ಕೊವಿಡ್ ಕೇರ್ ಸೆಂಟರ್ ಗಳು ಖಾಲಿ ಖಾಲಿಯಾಗಿವೆ. ನನ್ನ ಮತಕ್ಷೇತ್ರದಲ್ಲಿ ಎಂಟು ಕೊವಿಡ್ ಕೇರ್ ಸೆಂಟರ್ ಗಳಿವೆ. ಇನ್ನೂ ಹೆಚ್ಚಿನ ಕೊವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಮನವಿ ಮಾಡಿದ್ದಿನಿ. ಆದರೆ, ಕೊವಿಡ್ ಕೇರ್ ಸೆಂಟರ್ ಗಳ ಪರಿಸ್ಥಿತಿ ಯಾವ ರೀತಿ ಆಗಿದೆ ಎಂದರೆ ಅಲ್ಲಿ ಯಾರು ಸೋಂಕಿತರು ಇರುವ ಪರಿಸ್ಥಿತಿ ಇಲ್ಲ ಎಂದು ಆರೋಪಿಸಿದರು.

ಎಲ್ಲರೂ ಭಯಭೀತರಾಗಿದ್ದಾರೆ, ನಮ್ಮ ಮನೆಯಲ್ಲಿ ಚಿಕಿತ್ಸೆ ಪಡೆಯುವದಾಗಿ ಸೋಂಕಿತರು ಹೇಳುತ್ತಿದ್ದಾರೆ. ಸೋಂಕಿತರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದರೂ ಸಹ ಸೆಂಟರ್ ಗೆ ಆಗಮಿಸುತ್ತಿಲ್ಲ. ಈ ಸಂದರ್ಭದಲ್ಲಿ ಸರಕಾರವನ್ನು ಟೀಕಿಸುವದು ಸರಿಯಲ್ಲ. ಸರಕಾರದ ಆದೇಶ ಪಾಲಿಸಿ ಜನರ, ಜನತೆಯ ಅನುಕೂಲ ಸಲುವಾಗಿ ದುಡಿಯಬೇಕಿದೆ. ಆದರೆ, ಸರಕಾರ ಕೊರೊನಾ ಪರಿಸ್ಥಿತಿಯನ್ನು ಹಗುರವಾಗಿ ತೆಗೆದುಕೊಂಡಿದ್ದು ಮನಸ್ಸಿಗೆ ನೋವು ತಂದಿದೆ ಎಂದು ಅವರು ಹೇಳಿದರು.

ಕೊರೊನಾ ಪರಿಸ್ಥಿತಿಯನ್ನು ಹತೋಟಿಗೆ ತರಲು ಕ್ಷೇತ್ರವಾರು, ಜಿಲ್ಲಾವಾರು, ಅಧಿಕಾರಿಗಳ ಹಾಗೂ ಶಾಸಕರ ತಂಡ ರಚಿಸಿದ್ದರೆ ಪರಿಸ್ಥಿತಿ ಹತೋಟಿಗೆ ಬರುತ್ತಿತ್ತು. ಪಕ್ಷಾತೀತವಾಗಿ ತಂಡ ರಚಿಸಬೇಕಿತ್ತು. ತಂಡ ರಚಿಸದೇ ಯಡವಟ್ಟು ಮಾಡಿಕೊಂಡಿತು. ಎರಡನೇ ಅಲೆ ಬರ್ತದೆ ಎದರೂ ಕೂಡ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೊಡಿದರು ಎಂಬ ಮಾತಿನಂತೆ ಸರಕಾರ ನಡೆದುಕೊಂಡಿತು. ರೋಗಿಗಳಿಗೆ ಆಕ್ಸಿಜನ್, ಬೆಡ್, ವೆಂಟಿಲೇಟರ್ ಸಿಗಲಿಲ್ಲ. ಸರಿಯಾಗಿ ಔಷಧೋಪಚಾರ ಸಿಗಲಿಲ್ಲ. ಹೀಗಾಗಿಯೇ ಹಾದೀ ಬೀದಿಲಿ ಜನ ಪ್ರಾಣ ಬಿಡುವಂತಾಯಿತು ಎಂದು ಅವರು ಆರೋಪಿಸಿದರು.

ಕೊರೊನಾ ಸಂದರ್ಭದಲ್ಲಿ ಕಣ್ಣಿನಲ್ಲಿ ನೋಡಲಾರದ ದೃಶ್ಯಗಳನ್ನು ನೋಡಬೇಕಾಯಿತು ಇದರಿಂದ ಬಹಳ ನೊಂದಿದ್ದೀವಿ. ಬಹಳಷ್ಟು ಜನರನ್ನು ಈ ಮಹಾಮಾರಿಯಿಂದಾಗಿ ಕಳೆದುಕೊಂಡಿದ್ದೇವೆ. ಈ ಎಲ್ಲಾ ಸಾವುಗಳಿಗೆ ಸರಕಾರವೇ ಹೊಣೆ ಹೊರಬೇಕು. ಸರಕಾರ ಮಾಡಿರುವ ಕೆಲಸಗಳನ್ನು ನೊಡಿದರೆ ಬೇಸ್ ಮೆಂಟ್ ಇಲ್ಲದೆ ಕೆಲಸ ಮಾಡಿದೆ. ಯಾವ್ಯಾವುದೋ ಮಾರ್ಗದಲ್ಲಿ ಆಡಳಿತ ನಡೆಸುವ ಮೂಲಕ ಜನರಲ್ಲಿ ಗೊಂದಲ ಉಂಟು ಮಾಡಿದರು. ದಿನಕ್ಕೊಂದು ಕಾಯ್ದೆ ದಿನಕ್ಕೊಂದು ನಿಯಮಾವಳಿಗಳನ್ನು ಜಾರಿಗೆ ತಂದರು. ಇದರಿಂದ ಜನರ ಮೇಲೆ ವ್ಯತಿರಿಕ್ತ ಮತ್ತು ಮಾರಕ ಪರಿಣಾಮಗಳು ಉಂಟಾದವು ಎಂದು ಡಾ. ದೇವಾನಂದ ಚವ್ಹಾಣ ಆರೋಪಿಸಿದರು.

ಯಾವ ಅಧಿಕಾರಿ ನಿಯತ್ತಾಗಿ ಕೆಲಸ ಮಾಡುತ್ತಿದ್ದರೋ ಅಂಥ ಅಧಿಕಾರಿಗಳ ಮೇಲೆ ಕೆಲಸದ ಒತ್ತಡ ಹಾಕಿದರು. ಕೆಲಸ ಮಾಡದ ಅಧಿಕಾರಿಗಳಿಗೆ ಸುಮ್ಮನೆ ಬಿಟ್ಟರು. ಮಲಗಿಕೊಂಡ ಅಧಿಕಾರಿಗಳನ್ನು ಮಲಗಲು ಬಿಟ್ಟರು. ಹರಟೆ ಹೊಡೆಯುವರು ಹರಟೆ ಹೊಡೆಯುತ್ತಲೆ ಇದ್ದಾರೆ. ಜಿಲ್ಲಾಡಳಿತ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದು ಅವರು ಕಿಡಿ ಕಾರಿದರು.

ಸರಕಾರ ಲೋಪದೋಷಗಳನ್ನು ಸರಿಪಡಿಸಿ ಕೊಳ್ಳಲಿಲ್ಲ. ಸರಕಾರ ಜನರ ಹಾದಿ ತಪ್ಪಿಸಿತು, ಸುಳ್ಳು ಭರವಸೆ ನೀಡಿತು. ಜನರ ಕಷ್ಟ ನಷ್ಟಗಳಿಗೆ ಸರಕಾರ ಸ್ಪಂದಿಸಲಿಲ್ಲ. ಯಾವ ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡ್ತಿಲ್ಲ. ನನ್ನ ಕ್ಷೇತ್ರಕ್ಕೂ ಕೂಡಾ ಹಣ ಬಿಡುಗಡೆಯಾಗಿಲ್ಲ. ನನ್ನ ಕ್ಷೇತ್ರದಲ್ಲಿ ಮರಳು ಮಾಫಿಯಾ ನಡೆದಿದೆ. ಬಿಜೆಪಿ ಸಲುವಾಗಿ ದುಡಿದ ಕಾರ್ಯಕರ್ತರ ಪರಿಸ್ಥಿತಿ ಅಧೋಗತಿಯಾಗಿದೆ. ಮರಳು ಮಾಫಿಯಾ ಮಾಡುವಲ್ಲಿ ಕೆಲ ಪ್ರಭಾವಿಗಳು ಕೈ ಹಾಕುತ್ತಿದ್ದಾರೆ. ಇದರಿಂದ ಸ್ವತಃ ಬಿಜೆಪಿ ಕಾರ್ಯಕರ್ತರೆ ಸರಕಾರದ ವಿರುದ್ದ ಮುನಿಸುಕೊಂಡಿದ್ದಾರೆ. ಬಿಜೆಪಿ ಪಕ್ಷ ಕೆಲವರಿಗೆ ಮಾತ್ರ ಎನ್ನುವ ಭಾವನೆ ಬಿಜೆಪಿ ಕಾರ್ಯಕರ್ತರಲ್ಲಿ ಬರುತ್ತಿದೆ. ಸರಕಾರಿ ಅಧಿಕಾರಿಗಳು ಬಿಜೆಪಿ ಎಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಇದು ಬಹಳ ನೋವಿನ ಸಂಗತಿಯಾಗಿದೆ ಎಂದು ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಆರೋಪಿಸಿದರು.

Leave a Reply

ಹೊಸ ಪೋಸ್ಟ್‌