ಕೊರೊನಾ ಹಿನ್ನೆಲೆ ಜನದಟ್ಟಣೆ ಕಡಿಮೆ ಮಾಡಲು ಬಬಲೇಶ್ವರ ಮತಕ್ಷೇತ್ರದ ಐದು ಕಡೆ ಬೀಜ, ಗೊಬ್ಬರ ವಿತರಣೆಗೆ ಹೊಸ ಕೇಂದ್ರ ಆರಂಭ- ಶಾಸಕ ಎಂ. ಬಿ. ಪಾಟೀಲ

ವಿಜಯಪುರ: ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧತೆಗಳನ್ನು ನಡೆಸಿದ್ದು, ಅವರಿಗೆ ಬೀಜ ಹಾಗೂ ಗೊಬ್ಬರ ಸರಬರಾಜು ಮಾಡಲು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಐದು ಕಡೆಗಳಲ್ಲಿ ಹೆಚ್ಚುವರಿ ವಿತರಣಾ ಕೇಂದ್ರಗಳು ಆರಂಭವಾಗಲಿವೆ ಎಂದು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಟಕ್ಕಳಕಿ, ಹೊನವಾಡ, ಕಾಖಂಡಕಿ, ನಿಡೋಣಿ ಮತ್ತು ಕೃಷ್ಣಾ ನಗರಗಳಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಶನಿವಾರದಿಂದ ಈ ಸ್ಥಳಗಳಲ್ಲಿ ವಿತರಣೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ರೈತರು ಈ ಹಿಂದೆ ಬೀಜ, ಗೊಬ್ಬರ ಲಭ್ಯವಾಗುತ್ತಿದ್ದ ವಿಜಯಪುರ, ಬಬಲೇಶ್ವರ, ತಿಕೋಟಾ ಹಾಗೂ ಮಮದಾಪುರ ರೈತ ಸಂಪರ್ಕ ಕೇಂದ್ರಗಳಿಗೆ ಸಂಚರಿಸಬೇಕಿತ್ತು. ಆದರೆ, ಈಗ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಳ ಮತ್ತು ಲಾಕಡೌನ್ ವಿಸ್ತರಣೆ ಹಿನ್ನೆಲೆ ರೈತರಿಗೆ ಅನುಕೂಲವಾಗಲು ಹಾಗೂ ಹಾಲಿ ಇರುವ ಕೇಂದ್ರಗಳಲ್ಲಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ, ಆಯಾ ಭಾಗಗಳಲ್ಲಿಯೇ ತಾತ್ಕಾಲಿಕ ಹೆಚ್ಚುವರಿ ಕೇಂದ್ರಗಳನ್ನು ಮಾಡಿ, ಬೀಜ, ಗೊಬ್ಬರ ವಿತರಿಸಿ ರೈತರಿಗೆ ಅನುಕೂಲ ಕಲ್ಪಿಸಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಪತ್ರದ ಮೂಲಕ ಕೋರಲಾಗಿತ್ತು.

ಈ ಕೋರಿಕೆ ಅನ್ವಯ ಶನಿವಾರದಿಂದಲೇ ತಾತ್ಕಾಲಿಕ ಹೆಚ್ಚುವರಿ ಕೇಂದ್ರಗಳಲ್ಲಿ ವಿತರಣೆ ಆರಂಭವಾಗಲಿದ್ದು, ರೈತರು ಸದುಪಯೋಗ ಪಡೆದುಕೊಳ್ಳಲು ಶಾಸಕ ಎಂ. ಬಿ. ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌