ವಿಜಯೇಂದ್ರ ಇಡಿ ತನಿಖೆ ಎದುರಿಸಲು ದೆಹಲಿಗೆ ಹೋಗಿದ್ದರು- ಮುಂಬರುವ ಅನಾಹುತಗಳಿಗಿಂತಲೂ ಮುಂಚೆ ಸಿಎಂ ಗೌರವಯುತವಾಗಿ ನಿವೃತ್ತಿಯಾಗಲಿ- ಯತ್ನಾಳ

ವಿಜಯಪುರ: ಸಿಎಂ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಇತ್ತೀಚೆಗೆ ದೆಹಲಿಗೆ ತೆರಳಿದ್ದು ಯಾಕೆ ಎಂಬುದನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಶೈಲಿಯಲ್ಲಿ ಬಿಚ್ಚಿಟ್ಟಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಬಿ. ವೈ. ವಿಜಯೇಂದ್ರ ಇಡಿ ವಿಚಾರಣೆಗೆ ಹಾಜರಾಗಲು ದೆಹಲಿಗೆ ತೆರಳಿದ್ದರೇ ಹೊರತು ಕೊವಿಡ್ ನಿರ್ವಹಣೆಯ ಶಹಾಬ್ಬಾಷಗಿರಿ ಪಡೆಯಲು ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ರಾಷ್ಟ್ರೀಯ ನಾಯಕರು ಕೊರೊನಾ ಬಗ್ಗೆ ಮಾತನಾಡುವುದಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರು, ಸಿಎಂ ಜೊತೆ ಮಾತನಾಡುತ್ತಾರೆ. ಅವರನ್ನು ಬಿಟ್ಟು ವಿಜಯೇಂದ್ರ ಜೊತೆ ಮಾತನಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಇಡಿಯವರು ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ವಿಜಯೇಂದ್ರ ಒಂದು ಗಂಟೆ ಕಾಲ ಬಿಜೆಪಿ ರಾಷ್ಟ್ರಾಧ್ಯಕ್ಷರೊಂದಿಗೆ ಚರ್ಚೆ ನಡೆಸಿದ್ದಾಗಿ ಸುಳ್ಳು ಟ್ವೀಟ್ ಮಾಡಿದ್ದಾರೆ. ಮಾರಿಷಸ್ ನಲ್ಲಿ ಸಾವಿರಾರು ಕೋಟಿ ರೂಪಾಯಿ ಎಲ್ಲಿಂದ ಬಂತು? ಪಿ ಐ ಮೋಟಾರ್ಸ್ ಕಂಪನಿಯೊಂದಕ್ಕೆ ಹಣ ಹೇಗೆ ವರ್ಗಾವಣೆಯಾಯ್ತು? ಎಂಬುದರ ಕುರಿತು ವಿಚಾರಣೆ ನಡೆಯುತ್ತಿದೆ. ಆದರೆ, ಮಾಧ್ಯಮಗಳು ವಿಜಯೇಂದ್ರ ಪರ ಸುದ್ದಿ ಮಾಡುತ್ತಿವೆ ಎಂದು ಯತ್ನಾಳ ಆರೋಪಿಸಿದರು.

ವಿಜಯೇಂದ್ರ ದೆಹಲಿಯಲ್ಲಿ ಜೆ. ಪಿ. ನಡ್ಡಾ ಅವರನ್ನು ಹತ್ತು ನಿಮಿಷಗಳ ಕಾಲ ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ ಎಂದು ತಮಗಿದೆ ಎಂದು ಯತ್ನಾಳ ಇದೇ ವೇಳೆ ತಿಳಿಸಿದರು.

ಮುಂಬರುವ ಅನಾಹುತಗಳಿಗೂ ಮುಂಚೆ ಸಿಎಂ ಗೌರವಯುತವಾಗಿ ನಿವೃತ್ತಿಯಾಗಲಿ

ಇದೇ ವೇಳೆ, ಸಿಎಂಗೆ ಹೊಗಳು ಭಟ್ಟರಿಂದ ಕಂಟಕವಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮುಂದೆ ಆಗುವ ಅನಾಹುತಗಳಿಗಿಂತಲೂ ಮುಂಚೆ ಗೌರವಯುತವಾಗಿ ನಿವೃತ್ತಿಯಾಗಬೇಕು. ಸಿಎಂ ಮೂರು ಜನ ಹೊಗಳು ಭಟ್ಟರನ್ನು ಇಟ್ಟುಕೊಂಡಿದ್ದಾರೆ. ಯಡಿಯೂರಪ್ಪ‌ ಅವರಿಗೆ ಹೊಗಳು ಭಟ್ಟರಿಂದ ಮುಂದೆ ಬಹಳ ದೊಡ್ಡ ಅಪಾಯವಿದೆ. ಹೊಗಳ ಭಟ್ಟರಿಂದ ಹೊರ ಬರದಿದ್ದರೆ ಬಹಳ ಅವಮಾನಕಾರಿಯಾಗಿ ರಾಜಕೀಯದಿಂದ ನಿವೃತ್ತಿಯಾಗಬೇಕಾಗುತ್ತದ. ಮುಂದೆ ನಡೆಯುವ ಅನಾಹುತಗಳಿಗೆ ಕಾರಣವಾಗದೆ ಗೌರವಯುತವಾಗಿ ರಾಜಕೀಯದಿಂದ ನಿವೃತ್ತಿಯಾಗಿ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಯತ್ನಾಳ ಸಲಹೆ ನೀಡಿದರು.

ಇದೇ ವೇಳೆ ಇತ್ತೀಚೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವಿಜಯನಗರ ಸಾಮ್ರಾಜ್ಯ ಪತನದ ಕುರಿತು ನೀಡಿರುವ ಹೇಳಿಕೆಯನ್ನು ಯತ್ನಾಳ ಪ್ರಸ್ತಾಪಿಸಿದರು.

ಸಿಎಂ ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆ ಯಾಕೆ ಕರೆಯುತ್ತಿಲ್ಲ? ಶಾಸಕಾಂಗ ಪಕ್ಷದ ಸಭೆ ಕರೆಯಲು ಮುಖ್ಯಮಂತ್ರಿಗಳಿಗೆ ಯಾಕೆ ಹೆದರಿಕೆ? ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

Leave a Reply

ಹೊಸ ಪೋಸ್ಟ್‌