ವಿಜಯಪುರ: ಗಜಾನನ ಮಂಡಳಿಗಳು ಕೇವಲ ಗಣೇಶೋತ್ವಸ ಆಚರಣೆಗೆ ಸೀಮಿತವಾಗುತ್ತವೆ. ಆದರೆ, ಬಸವ ನಾಡಿನ ಈ ಗಜಾನನ ಮಹಾಮಂಡಳ ಮಾತ್ರ ಕೊರೊನಾ ಮತ್ತು ಲಾಕಡೌನ್ ಸಂದರ್ಭದಲ್ಲಿ ಆಹಾರ ವಿತರಣೆ ಮಾಡುವುದಲ್ಲದೇ ಈಗ ವಿಶ್ವ ಪರಿಸರ ದಿನಾಚರಣೆ ದಿನ ಮತ್ತೋಂದು ಮಹತ್ವದ ಕಾರ್ಯ ಮಾಡಿದೆ.
ವಿಜಯಪುರ ನಗರದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ಹಸಿದ ಸಾವಿರಾರು ಹೊಟ್ಟೆಗಳಿಗೆ ಅನ್ನದಾನ ಮಾಡಿ ಹಸಿವು ನೀಗಿಸುವ ಕಾರ್ಯ ಮುಂದುವರೆದಿರುವ ಮಧ್ಯೆಯೇ ಈಗ ಸಸಿಗಳು ಮತ್ತು ಗಿಡಗಳ ಸಂರಕ್ಷಣೆಗೂ ಮುಂದಾಗಿದೆ. ಪರಿಸರ ದಿನಾಚರಣೆ ಎಂದರೆ ಕೇವಲ ಒಂದು ಸಸಿ ನೆಟ್ಟು ಪೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿಕೊಳ್ಳುವವರೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಇದಕ್ಕೆ ಭಿನ್ನವಾದ ಕೆಲಸ ಮಾಡುವ ಮೂಲಕ ಗಜಾನನ ಮಹಾಮಂಡಳ ಗಮನ ಸೆಳೆದಿದೆ.
ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಅಪ್ಪು ಪಟ್ಟಣಶೆಟ್ಟಿ ಮಾರ್ಗದರ್ಶನದಲ್ಲಿ ಈ ಗಜಾನನ ಮಹಾಮಂಡಳ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ನೆಟ್ಟಿರುವ ಸಸಿಗಳು ಗಿಡವಾಗಿ ಬೆಳೆಯಲು ಅದಕ್ಕೆ ಪೂರಕವಾಗಿ ನೀರು ಬೇಕೇ ಬೇಕು. ಪೂರಕವಾಗಿರುವ ನೀರು ಪೂರೈಸುವ ಸಲುವಾಗಿ ಈಗ ಈ ಸಂಘಟನೆ ನೀರಿನ ಟ್ಯಾಂಕರ್ ಖರೀದಿಸಿದೆ.
ಈ ವಾಟರ್ ಟ್ಯಾಂಕರನ್ನು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ವಿಶ್ವ ಪರಿಸರ ದಿನಾಚರಣೆ ದಿನ ಲೋಕಾರ್ಪಣೆ ಮಾಡಿದರು. ವಿಜಯಪುರ ನಗರದ ಶ್ರೀ ಅದೃಷ್ಟ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಸಿ ಕೂಡ ನೆಡಲಾಯಿತು.
ವಿಜಯಪುರ ನಗರದ ನಾನಾ ಕಡೆ ಕೋಟಿ ವೃಕ್ಷ ಅಭಿಯಾನದಡಿ ಸಸಿಗಳನ್ನು ಬೆಳೆಸಲಾಗುತ್ತಿದೆ. ರಸ್ತೆ ಪಕ್ಕ ಸಸಿಗಳಿಗೆ ಜಾನುವಾರುಗಳಿಂದ ರಕ್ಷಣೆ ದೊರೆಯಲು ಟ್ರಿ ಗಾರ್ಡ್ ಹಾಕಲಾಗಿದೆ. ಆದರೆ, ಈ ಗಿಡಗಳಿಗೆ ನೀರಿನ ವ್ಯವಸ್ಥೆ ಸರಿಯಾಗಿರಲಿಲ್ಲ. ಇದರಿಂದಾಗಿ ಸಸಿಗಳು ನಿಗದಿತ ಪ್ರಮಾಣದಲ್ಲಿ ಬೆಳೆಯುತ್ತಿರಲಿಲ್ಲ. ಇದನ್ನು ಗಮನಿಸಿದ ಗಜಾನನ ಮಹಾಮಂಡಳದ ಕಾರ್ಯಕರ್ತರು ಪ್ರತಿ ವಾರ ಸರದಿಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಸಸಿಗಳಿಗೆ ನೀರು ಪೂರೈಸುವ ಯೋಜನೆ ಹಾಕಿಕೊಂಡು ಪರಿಸರ ದಿನಾಚರಣೆ ದಿನವೇ ಪರಿಸರ ರಕ್ಷಣೆಗಾಗಿ ಟ್ಯಾಂಕರ್ ಖರೀದಿಸಿ ಗಿಡಗಳಿಗೆ ನೀರು ಒದಗಿಸುವ ಕೆಲಸ ಆರಂಭಿಸಿದ್ದಾರೆ.
ಈ ಮೂಲಕ ತಮ್ಮ ಸಂಘಟನೆ ಕೇವಲ ಗಣೇಶ ಉತ್ಸವಕ್ಕೆ ಸೀಮಿತವಾಗಿರದೇ ಸಮಾಜ ಮುಖಿ ಕಾರ್ಯಗಳಿಗೂ ಬದ್ಧವಾಗಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ವಿಜಯಪುರದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಬಬಲೇಶ್ವರ ಕಾಂಗ್ರೆಸ್ ಶಾಸಕ ಡಾ. ಎಂ. ಬಿ. ಪಾಟೀಲ ಕೋಟಿ ವೃಕ್ಷ ಅಭಿಯಾನ ಆರಂಭಿಸಿದ್ದಾರೆ. ಅವರ ಈ ಕಾರ್ಯಕ್ಕೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕೂಡ ಬೆಂಬಲವಾಗಿ ನಿಂತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಲಕ್ಷಾಂತರ ಸಸಿಗಳನ್ನು ಬೆಳೆಸಿ ಪರಿಸರ ರಕ್ಷಣೆ ಮಾಡುತ್ತಿದ್ದಾರೆ. ಇದು ಪರಿಸರ ಪ್ರೇಮಿಗಳಿಗೆ ಸಂತಸ ಉಂಟು ಮಾಡಿದೆ ಎನ್ನುತ್ತಾರೆ ಪರಿಸರವಾದಿ ಮುರುಗೇಶ ಪಟ್ಟಣಶೆಟ್ಟಿ.