ಜಿಲ್ಲಾವಾರು ಕೊರೊನಾ ಕೋವಿಡ್ ವಸ್ತುಸ್ಥಿತಿ ಆಧರಿಸಿ ಲಾಕಡೌನ್ ಸಡಿಲಿಕೆ ಬಗ್ಗೆ ಸಿಎಂ ನಿರ್ಧರಿಸುತ್ತಾರೆ- ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ: ಜಿಲ್ಲಾ ಮಟ್ಟದಲ್ಲಿ ಕೊರೊನಾ ಸೋಂಕಿನ ವಸ್ತುಸ್ಥಿತಿಯನ್ನು ಆದರಿಸಿ ಜೂ. 14ರ ನಂತರ ಯಾವ ರೀತಿ ಲಾಕಡೌನ್ ಸಡಿಲಿಕೆ ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಲಿರುವ ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಲಾಕಡೌನ್ ಸಡಿಲಿಕೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಲಹೆ-ಸೂಚನೆಗಳು ಬರುತ್ತಿವೆ ಎಂದು ತಿಳಿಸಿದರು.

ಎಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ ಇದೆ? ಯಾವ ಜಿಲ್ಲೆಯಲ್ಲಿ ಕಡಿಮೆ ಇದೆ? ಅಂತಹ ಜಿಲ್ಲೆಗಳಲ್ಲಿ ಸಡಿಲಿಕೆ ಕ್ರಮಗಳನ್ನು ಕೈಗೊಳ್ಫಬೇಕು ಎಂಬ ಸಲಹೆ ಬಂದಿದೆ. ಕೈಗಾರಿಕೆ ವಲಯದಿಂದಲೂ ಸಹಿತ ಹಲವು ಸಲಹೆಗಳು ಬಂದಿವೆ. ಹೀಗಾಗಿ ಬೆಂಗಳೂರು ನಗರ ಸೇರಿದಂತೆ ಜಿಲ್ಲಾವಾರು ಕೊರೊನಾ ವಸ್ತುಸ್ಥಿತಿಯನ್ನು ಪರಿಶೀಲನೆ ಮಾಡಿ ಅಂತಿಮವಾಗಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ನಾನು ಕೂಡ ಹೇಳಿಕೆ ಕೊಟ್ಟಿದ್ದೇನೆ. ನಮ್ಮ ರಾಜ್ಯಾಧ್ಯಕ್ಷರಾದ ನಳೀನಕುಮಾರ ಕಟೀಲ ಅವರು ಈಗಾಗಲೇ ಹೇಳಿಕೆ ನೀಡಿ ಯಡಿಯೂರಪ್ಪ ಅವರೇ ನಮ್ಮ ಸರ್ವಸಮ್ಮತ ನಾಯಕರು ಎಂದು ಹೇಳಿದ್ದಾರೆ. ಅದರಲ್ಲಿ ಯಾವುದೇ ಪ್ರಶ್ನೆಗಳಿಲ್ಲ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.‌ ಹೀಗಾಗಿ ಇದೇ ಅಂತಿಮ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌