ವಿಜಯಪುರ: ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ವರ್ಷದ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಮುಂದಿನ ದಿನಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿಗಳನ್ನು ನಿರ್ವಹಿಸಲು ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಬೇಕು. ಕೃಷ್ಣ ಮತ್ತು ಭೀಮಾ ಹಾಗೂ ದೋಣಿ ನದಿಗಳ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕೃಷ್ಣ ಮತ್ತು ಭೀಮಾ ನದಿಗಳಿಗೆ ಹರಿದು ಬರುವ ನೀರಿನ ಬಗ್ಗೆ ನಿರಂತರ ನಿಗಾ ಇಡಬೇಕು. ಆಲಮಟ್ಟಿ ಸೇರಿದಂತೆ ಸೊನ್ನ ಬ್ಯಾರೇಜ್ ವ್ಯಾಪ್ತಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆಯಾಗುವಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಮಹಾರಾಷ್ಟ್ರದಿಂದ ಭೀಮಾ ನದಿಗೆ ಹರಿದು ರಾಜ್ಯದ ಸೊನ್ನ ಬ್ಯಾರೇಜಿಗೆ ಬರುತ್ತದೆ. ಈ ಸಂದರ್ಭದಲ್ಲಿ ಬ್ಯಾರೇಜಿನ ಗೇಟ್ ಗಳ ನಿರ್ವಹಣೆ ಬಗ್ಗೆ ಇಂಡಿ ಉಪವಿಭಾಗಾಧಿಕಾರಿಗಳು ಪರಿಶೀಲನಾ ವರದಿ ಸಲ್ಲಿಸಬೇಕು. ಅಲ್ಲದೇ, ಈ ಜಲಾಶಯಕ್ಕೆ ಹರಿದು ಬರುವ ಮತ್ತು ನೀರು ಬಿಡುಗಡೆಯಾಗುವ ಕ್ಷೇತ್ರವ್ಯಾಪ್ತಿಗಳಲ್ಲಿ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ಸೂಕ್ತ ನಕಾಶೆಯೊಂದಿಗೆ ನೆರೆ ನಿಭಾಯಿಸಬೇಕಾದ ಕ್ರಮಗಳ ಬಗ್ಗೆ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ನೀಡಿದರು.
ಅತಿವೃಷ್ಟಿ ಮತ್ತು ಪ್ರವಾಹ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ನಾನಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಸಿದ್ಧರಾಗಬೇಕು. ಯಂತ್ರಚಾಲಿತ, ಮಾನವಚಾಲಿತ ಬೋಟ್ ಗಳನ್ನು ಸಿದ್ಧವಾಗಿಡಬೇಕು. ಜನರ ಪ್ರಾಣ ರಕ್ಷಣೆಗೆ ಲೈಫ್ ಜಾಕೆಟ್, ನುರಿತ ಈಜುಗಾರರು, ತುರ್ತು ಸಲಕರಣೆಗಳನ್ನು ಮುಂಚಿತವಾಗಿಯೇ ಸಿದ್ದವಾಗಿಟ್ಟುಕೊಳ್ಳಬೇಕು. ರಕ್ಷಣಾ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಸಿದ್ಧತೆಗಳನ್ನು ಮುಂಚಿತವಾಗಿಯೇ ಮಾಡಿಕೊಳ್ಳಬೇಕು. ಆಯಾ ತಾಲೂಕು ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪಿ. ಸುನೀಲ ಕುಮಾರ ಸೂಚನೆ ನೀಡಿದರು.
ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ ಡೋಣಿ ನದಿಗೆ ಹೆಚ್ಚಿನ ನೀರು ಬರುವ ಮುಂಚೆ ಅಥಣಿ ತಶಿಲ್ದಾರರೊಂದಿಗೆ ಪ್ರತಿದಿನ ಮಳೆ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆಯಬೇಕು. ನದಿ ಪಾತ್ರದ ಸೇತುವೆಗಳ ಬಳಿ ಅಡ್ಡವಾಗಿ ಬೆಳೆದ ಗಡಗಂಟಿಗಳನ್ನು ತೆಗೆದು ಹಾಕಬೇಕು. ಅತಿವೃಷ್ಟಿಯಾದಾಗ ಚರಂಡಿ ನೀರು ಕುಡಿಯುವ ನೀರಿಗೆ ಮಿಶ್ರಣ ಆಗದಂತೆ ಗಮನ ಹರಿಸಬೇಕು. ಪ್ರವಾಹದಿಂದ ಬಾಧಿತವಾಗುವ ಸ್ಥಳಗಳ ಬಗ್ಗೆ ಮುಂಚಿತವಾಗಿ ಗುರುತಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕೃಷ್ಣಾ ನದಿ ನೀರು ಪ್ರವಾಹ ನಿರ್ವಹಣೆ ಯಂತೆ ಭೀಮಾ ನದಿ ಪ್ರವಾಹ ನಿರ್ವಹಣೆಯ ಬಗ್ಗೆ ವಿಶೇಷ ಗಮನ ನೀಡಬೇಕು. ಮಹಾರಾಷ್ಟ್ರದೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ನಿರಂತರ ಸಂಪರ್ಕ ಸಾಧಿಸಿ ಮುಂದಿನ ದಿನಗಳಲ್ಲಿ ಪ್ರವಾಹ ಬಂದಲ್ಲಿ ಸೂಕ್ತ ರೀತಿಯಲ್ಲಿ ನಿರ್ವಹಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ನಾನಾ ಇಲಾಖೆ ವ್ಯಾಪ್ತಿಯಲ್ಲಿ ಅತಿವೃಷ್ಟಿ ಪ್ರವಾಹ ಬಂದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿಗಳಾದ ರಾಹುಲ ಸಿಂಧೆ ಮತ್ತು ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.