ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಸದಾಶಿವ ಮುತ್ಯಾನ ಮಠಕ್ಕೆ ಪೊಲೀಸ್ ಕಾವಲು ಹಾಕಲಾಗಿದೆ.
ಮಠದ ಹೊರ ಆವರಣದಲ್ಲಿ ಬಿಗೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಭಕ್ತರ ಅತಿರೇಕ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಕಾರಣವಾಗಿದೆ.
ಘಟನೆಯ ಹಿನ್ನೆಲೆ:
ವಿಜಯಪುರ ಜಿಲ್ಲೆಯ ಹೊಳೆ ಬಬಲಾದಿ ಸದಾಶಿವ ಮಠಾಧೀಶ ಮತ್ತು ಕಾರ್ಣಿಕರು ನುಡಿಯುವ ಭವಿಷ್ಯ ನಿಖರವಷ್ಟೇ ಅಲ್ಲ, ಇಲ್ಲಿನ ಭಕ್ತರಿಗೆ ವೇದವಾಕ್ಯವಿದ್ದಂತೆ. ಕೊರೊನಾ ಕುರಿತು ಕಾರ್ಣಿಕ ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ನುಡಿದ ಭವಿಷ್ಯ ಮತ್ತೆ ನಿಜವಾಗಿತ್ತು.
ಈ ಹಿನ್ನೆಲೆಯಲ್ಲಿ ಭಕ್ತರ ದಂಡು ಲಾಕಡೌನ್ ಲೆಕ್ಕಿಸದೇ ದೇವಸ್ಥಾನಕ್ಕೆ ಧಾವಿಸಿದೆ. ಕೊರೊನಾ ಹಿನ್ನೆಲೆ ಲಾಕಡೌನ್ ಇದೆ. ಯಾರೂ ಮಠಕ್ಕೆ ಬರಬೇಡಿ. ತಂತಮ್ಮ ಮನೆಯಲ್ಲಿಯೇ ಅಂಬಲಿ ಮಾಡಿ ಸದಾಶಿವ ಮುತ್ಯಾಗ ನೈವೇದ್ದೆ ಮಾಡಿ ಪೂಜೆ ಸಲ್ಲಿಸಿ ಎಂದು ಕಾರ್ಣಿಕ ಸಿದ್ಧರಾಮಯ್ಯ ಹೊಳಿಮಠ ವಿಡಿಯೋ ಮೂಲಕ ಭಕ್ತರಲ್ಲಿ ಮನವಿ ಮಾಡಿದ್ದರು. ಹೀಗೆ ಮಾಡಿದರೆ ಕೊರೊನಾ ಕಡಿಮೆಯಾಗುತ್ತೆ ಎಂದು ಭಕ್ತರಿಗೆ ತಿಳಿಸಿದ್ದರು.
ಆದರೆ, ಕೊರೊನಾ ಕಡಿಮೆಯಾಗುತ್ತಿದ್ದಂತೆ ಕಾಲಜ್ಞಾನಿ ಬಬಲಾದಿ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು ಸೋಮವಾರದಿಂದ ಹರಿದು ಬಂದಿದೆ. ತುಂಬಿ ಹರಿಯುತ್ತಿರುವ ಹಳ್ಳದ ಮೂಲಕ ಭಕ್ತರು ನಡೆದುಕೊಂಡು ಮಠಕ್ಕೆ ಬಂದಿದ್ದಾರೆ. ಹಲವಾರು ಜನ ಬೈಕ್, ಕಾರು, ಕ್ರೂಸರ್ ವಾಹನಗಳಲ್ಲಿಯೂ ಅಂಬಲಿ ನೈವೇದ್ಯ ಸಮೇತ ಬಂದಿದ್ದರು.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಮಠದ ಕಾರ್ಣಿಕರು ಕಳೆದ ವರ್ಷ ಯುಗಾದಿಯವರೆಗೂ ಕೊರೊನಾ ನಿಲ್ಲುವುದಿಲ್ಲ. ಎರಡನೇ ಅಲೇ ಬರುತ್ತೆ ಎಂದು ಹೇಳಿದ್ದರು. ಇದಕ್ಕೆ ಏನು ಪರಿಹಾರ ಎಂದು ಭಕ್ತರು ಪದೇ ಪದೇ ಕೇಳಿದಾಗ ಸೋಮವಾರ ಮನೆಯಲ್ಲಿಯೇ ಅಂಬಲಿ ನೈವೇದ್ಯ ಮಾಡಿ, ಎರಡು ಬೋಳು ಟೆಂಗಿನಕಾಯಿ ಒಡೆಯಿರಿ ಎಂದು ಹೇಳಿದ್ದರು.
ಆದರೆ, ಮನೆಯಲ್ಲಿ ನೈವೇದ್ಯೆ ಮಾಡಿ ಇರಬೇಕಿದ್ದ ಭಕ್ತರು ನೈವೇದ್ಯ ಸಮೇತ ಮಠಕ್ಕೆ ಧಾವಿಸಿ ಆತಂಕ ಸೃಷ್ಠಿಸಿದ್ದರು. ಸಿದ್ಧರಾಮಯ್ಯ ಹೊಳಿಮಠ ಅವರ ಭವಿಷ್ಯ ನಿಜವಾದ ಹಿನ್ನೆಲೆ ಸದಾಶಿವ ಅಜ್ಜನ ದರ್ಶನಕ್ಕೆ ಧಾವಿಸಿದ್ದರು.
ಮಠಕ್ಕೆ ಬರಬೇಡಿ, ಮನೆಯಲ್ಲಿ ಸದಾಶಿವ ಅಜ್ಜನ ಪೋಟೋ ಪೂಜೆ ಮಾಡಿ ಎಂದು ಹೇಳಿದರೂ ಕೂಡ ಕೇಳದ ಭಕ್ತರು ಲಾಕಡೌನ್ ಉಲ್ಲಂಘಿಸಿ ದೇವಸ್ಥಾನದ ಹೊರಗಡೆಯೇ ಹಲವರು ಪೂಜೆ ಮಾಡಿ, ಅಂಬಲಿ ನೈವೇದ್ಯ ಅರ್ಪಿಸಿ ಎರಡು ಬೋಳು ಟೆಂಗಿನಕಾಯಿ ಒಡೆದಿದ್ದರು.
ಲಾಕ್‌ಡೌನ್ ಹಿನ್ನೆಲೆ ಬಬಲಾದಿ ಮಠದ ಗೇಟ್ ಗೆ ಬೀಗ ಹಾಕಲಾಗಿದ್ದರೂ ಭಕ್ತರು ಹಳ್ಳದ ನೀರಿನಲ್ಲಿ ನಡೆದುಕೊಂಡು ಹೊರಗಿನಿಂದಲೇ ಮಠದ ದರ್ಶನ ಮಾಡಲು ಆಗಮಿಸುವ ಮೂಲಕ ಮಠದವರು ಹಾಗೂ ಜಿಲ್ಲಾಡಳಿತಕ್ಕೆ ತಲೆನೋವು ತಂದಿದ್ದರು.
ಈ ಹಿನ್ನೆಲೆಯಲ್ಲಿ, ಸರಕಾರ ವಿಧಿಸಿದ ಲಾಕ್‌ಡೌನ್ ಆದೇಶವನ್ನು ಉಲ್ಲಂಘನೆ ಮಾಡಿದ್ದರು. ಈ ಕುರಿತು ಬಬಲೇಶ್ವರ ತಾಲ್ಲೂಕಿನ ತಹಸೀಲ್ದಾರರು ಪರಿಶೀಲಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು.
ಬಬಲೇಶ್ವರ ತಾಲೂಕಿನ ಬಬಲಾದ ಗ್ರಾಮದಲ್ಲಿರುವ ಸದಾಶಿವ ಮುತ್ಯಾನ ಮಠದ ಹೊರಗಿನ ಆವರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಭಕ್ತಾಧಿಗಳು ಬಿದರಿ ಮತ್ತು ಬಬಲಾದ ಗ್ರಾಮಗಳ ನಡುವೆ ಇರುವ ಹಳ್ಳದ ಮೂಲಕ ನೀರನ್ನು ಲೆಕ್ಕಿಸದೇ ಆಗಮಿಸಿದ್ದಾರೆ. ಲಾಕ್‌ಡೌನ್ ನ್ನು ಉಲ್ಲಂಘನೆ ಮಾಡಿದ್ದಾರೆ.
ಬಬಲೇಶ್ವರ ತಾಲೂಕಿನ ಬಬಲಾದ ಗ್ರಾಮದಲ್ಲಿರುವ ಸದಾಶಿವ ಮುತ್ಯಾನ ಮಠಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಸರಕಾರವು ಲಾಕ್‌ಡೌನ್ ವಿಧಿಸಿದ ದಿನದಿಂದಲೇ ಮಠದ ದ್ವಾರದ ಬಾಗಿಲಿಗೆ ಬೀಗ ಹಾಕಲಾಗಿದೆ. ಆದರೆ ಮೇ 7 ರಂದು ಸಂ. 7ರ ಸುಮಾರಿಗೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಭಕ್ತಾಧಿಗಳು ಮಠದ ಹೊರಗಿನ ಆವರಣಕ್ಕೆ ಬಂದು ಕೈ ಮುಗಿದು ಹೋಗುತ್ತಿರುವುದು ತಿಳಿದು ಬಂದಿದೆ. ಮಠದ ಗುರುಗಳು ಭಕ್ತಾಧಿಗಳು ಯಾರು ಮಠಕ್ಕೆ ಆಗಮಿಸದೇ ತಮ್ಮ ತಮ್ಮ
ಮನೆಯಲ್ಲಿಯೇ ಇದ್ದು ಪೂಜೆ ಮಾಡಲು ಸಾಕಷ್ಟು ಸಲ ವಿನಂತಿಸಿದರೂ ಕೂಡ, ಮಠದ ಗುರುಗಳ ವಿನಂತಿಯನ್ನು ಲೆಕ್ಕಿಸದೇ ಭಕ್ತಾಧಿಗಳು ಮಠದ ಹೊರಗಿನ ಆವರಣಕ್ಕೆ ಆಗಮಿಸುತ್ತಿರುವ ಬಗ್ಗೆ ಗ್ರಾಮಸ್ಥರ ಹೇಳಿಕೆಯಿಂದ ತಿಳಿದು ಬರುತ್ತದೆ ಬಬಲೇಶ್ವರ ತಹಸೀಲ್ದಾರರು ವರದಿ ನೀಡಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ ಉಲ್ಲಂಘನೆಯಾಗದಂತೆ ಮಠಕ್ಕೆ ಬರುವ
ಭಕ್ತಾಧಿಗಳನ್ನು ತಡೆದು ಅವರಿಗೆ ಲಾಕಡೌನ್ ಆದೇಶ ಮತ್ತು ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಕುರಿತು ತಿಳಿಹೇಳಬೇಕು. ಸಂಬಂಧಿಸಿದ ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದ್ದು ಮಠಕ್ಕೆ ಭಕ್ತಾಧಿಗಳು ಬಾರದಂತೆ ನೋಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ನೇಮಿಸಲು ಬಬಲೇಶ್ವರ ಪೊಲೀಸ್ ಠಾಣೆ ಪಿ ಎಸ್ ಐ ಅವರಿಗೆ ವಿಜಯಪುರ ಜಿಲ್ಲಾಡಳಿತ ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಈಗ ಹೊಳೆಬಬಲಾದಿ ಸದಾಶಿವ ಮುತ್ಯಾನ ಮಠದ ಸುತ್ತ ಬಿಗೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನು ಮುಂದಾದರೂ ಭಕ್ತರು ತಮ್ಮ ಭಕ್ತಿಯ ಪರಾಕಾಷ್ಠೆ ತೋರುವುದನ್ನು ಬಿಡಬೇಕಿದೆ.