ವಿಜಯಪುರ: ಮುಂಬರುವ ಚುನಾವಣೆಯನ್ನು ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಎದುರಿಸುತ್ತೇವೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಆಗುವುದಿಲ್ಲ. ಇದೆಲ್ಲ ಊಹಾಪೋಹ. ಸಿಎಂ ಬರಗಾಲ, ಪ್ರವಾಹ, ಕೋವಿಡ್ ವಿಚಾರಗಳನ್ನು ಅತ್ಯಂತ ಕ್ರೀಯಾಶೀಲತೆಯಿಂದ ನಿಭಾಯಿಸಿದ್ದಾರೆ. ಮುಂಬರುವ ಚುನಾವಣೆಯನ್ನೂ ಸಿಎಂ ನೇತ್ರತ್ವದಲ್ಲೇ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಗಾಳಿಮಾತಿಗೆ ಕಿವಿಗೊಡುವ ಅಗತ್ಯವಿಲ್ಲ, ಸಿಎಂ ಸಮರ್ಪಕವಾಗಿ ಆಡಳಿತ ನಡೆಸಿದ್ದರಿಂದ ಅವರೇ ಮುಂದುವರೆಯುತ್ತಾರೆ. ಅನೇಕ ಜನ ವದಂತಿಗಳನ್ನು ಮಾಡುತ್ತಾರೆ, ಹಾಗಂತ ಅದೆಲ್ಲ ನಿಜ ಇರುವುದಿಲ್ಲ. ಅವರು ಯಾರು ಎಂದು ನಾನು ಉಲ್ಲೇಖ ಮಾಡುವುದಿಲ್ಲ ಎಂದು ತಿಳಿಸಿದ ಅವರು, ಪಕ್ಷದ ಶಾಸಕರೇ ಸಿಎಂ ಬಗ್ಗೆ ಮಾತಾಡುವುದು ಅವರು ತಮಗೆ ಅನಿಸಿದ್ದನ್ನು ಹೇಳಿರುತ್ತಾರೆ. ಇದೆಲ್ಲವನ್ನೂ ಹೈಕಮಾಂಡ್ ಅತ್ಯಂತ ಸೂಕ್ಷ್ಮತೆಯಿಂದ ಗಮನಿಸುತ್ತಿದೆ, ಸಮರ್ಪಕವಾದ ಉತ್ತರವನ್ನು ಹೈಕಮಾಂಡ್ ಕೊಡುತ್ತದೆ. ಕೋವಿಡ್ ಸಂದರ್ಭದಲ್ಲಿ ಇಂತಹ ವಿಚಾರ ಹೇಳಿದರೆ ತಪ್ಪಾಗುತ್ತದೆ. ಇದು ಎಲ್ಲರಿಗೂ ಬೇಜಾರ್ ಉಂಟು ಮಾಡುವ ಸಂಗತಿ ಎಂದು ತಿಳಿಸಿದರು.
ಇಂಥ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಅವರಿಗೆ ಹೈಕಮಾಂಡ್ ಉತ್ತರ ಕೊಡುತ್ತದೆ. ಬಿ ಎಸ್ ವೈ ನೇತೃತ್ವದಲ್ಲಿ ಎಲ್ಲ ಸಚಿವರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ ಶಶಿಕಲಾ ಜೊಲ್ಲೆ, ಯತ್ನಾಳ ಸಿಎಂ ವಿರುದ್ದ ಹೇಳಿಕೆ ವಿಚಾರ ಕುರಿತು ತಾವು ಮಾತನಾಡುವುದಿಲ್ಲ. ನಾನಿನ್ನು ಚಿಕ್ಕವಳು. ನಮ್ಮ ನಾಯಕರು, ಪಕ್ಷದಲ್ಲಿ ಅನೇಕ ಹಿರಿಯರಿದ್ದಾರೆ. ಅವರು ಈ ವಿಚಾರ ಕುರಿತು ಮಾತನಾಡುತ್ತಾರೆ ಎಂದು ಹೇಳಿದರು.