ಅರ್ಹ ಅಸಂಘಟಿತ ಕಾರ್ಮಿಕ ಫಲಾನುಭವಿಗಳಿಗೆ ಪರಿಹಾರಧನ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

ವಿಜಯಪುರ: ವಿಜಯಪುರ ಜಿಲ್ಲೆಯ ಅಸಂಘಟಿತ ವಲಯದ 11 ವರ್ಗಗಳ ನೈಜ ಹಾಗೂ ಅರ್ಹ ಕಾರ್ಮಿಕರನ್ನು ಗುರುತಿಸುವ ಜೊತೆಗೆ ತ್ವರಿತವಾಗಿ ಪರಿಹಾರ ಧನ ವಿತರಿಸುವಂತೆ ಜಿಲ್ಲಾಧಿಕಾರಿ ಪಿ.‌ ಸುನಿಲ ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.

ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಿಂದಾಗಿ ಅಸಂಘಟಿತ ವಲಯದ 11 ವರ್ಗಗಳ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸರಕಾರ ಈ ಕಾರ್ಮಿಕರ ಒಂದು ಪ್ರತಿಯೊಂದಯ ಕುಟುಂಬಕ್ಕೆ ತಲಾ ರೂ. 2000 ನೆರವನ್ನು ಘೋಷಿಸಿದೆ. ಈ ಸೌಲಭ್ಯವನ್ನು ನೈಜ ಮತ್ತು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಅಸಂಘಟಿತ ವರ್ಗದ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್ ಗಳು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಮಾತ್ರ ಈ ಪರಿಹಾರ ಪಡೆಯಲು ಅವಕಾಶವಿದೆ. ಇವರಲ್ಲಿ 2020 ನೇ ಸಾಲಿನಲ್ಲಿ ಒಂದು ಬಾರಿಯ ನೆರವು ಪಡೆದ ಅಗಸರು ಮತ್ತು ಕ್ಷೌರಿಕ ಫಲಾನುಭವಿ ಕುಟುಂಬಗಳು ಮತ್ತೊಮ್ಮೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ಆ ವರ್ಷದಲ್ಲಿ ನೆರವು ಪಡೆಯದೆ ಇರುವ ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಕುಟುಂಬದ ಒಬ್ಬ ಕಾರ್ಮಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅದರಂತೆ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಅರ್ಜಿ ಸಲ್ಲಿಸಿ ನೊಂದಣಿಯಾದ ಬಿಪಿಎಲ್ ಕುಟುಂಬದ ಅಸಂಘಟಿತ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಇತರೆ ಸದಸ್ಯರು ನೆರವು ಕೋರಿ ಮತ್ತೊಮ್ಮೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ಈ ವರ್ಗಗಳ 60 ವರ್ಷ ಮೇಲ್ಪಟ್ಟ ಆದರೆ 65 ವರ್ಷ ಪೂರೈಸಿದ ಕಾರ್ಮಿಕರು ಸಹ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.

ಈ ನೆರವು ಪಡೆಯಲು ಅಸಂಘಟಿತ ಕಾರ್ಮಿಕರು 18 ರಿಂದ 65 ವರ್ಷದವರಾಗಿರಬೇಕು. ಕುಟುಂಬದಲ್ಲಿ ಒಬ್ಬರು ಮಾತ್ರ ಪರಿಹಾರ ಧನ ಪಡೆಯಲು ಅರ್ಹರಿದ್ದು, ಒಬ್ಬರು ಮಾತ್ರ ಅರ್ಜಿ ಸಲ್ಲಿಸಬೇಕು. ಅಲ್ಲದೇ, ಕಟ್ಟಡ ಕಾರ್ಮಿಕರು ಮತ್ತು ಘೋಷಿತ ಈ 11 ವರ್ಗಗಳು ಕೇವಲ ಒಂದು ವೃತ್ತಿಗೆ ಮಾತ್ರ ಕುಟುಂಬದಲ್ಲಿನ ಒಬ್ಬ ಸದಸ್ಯರು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಅಧಿಕಾರಿಗಳು ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಸಂಬಂಧಪಟ್ಟ ವೃತ್ತಿ ದೃಢೀಕರಣ ಪ್ರಮಾಣ ಪತ್ರ ನೀಡಬೇಕು. ಅರ್ಹ ಫಲಾನುಭವಿಗಳು ನಗರ ಪ್ರದೇಶಗಳ ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು.‌‌ ಗ್ರಾಮಾಂತರ ಪ್ರದೇಶದವರು ಗ್ರಾಮ-1 ಸೇವಾ ಕೇಂದ್ರಗಳಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸೇವಾ ಸಿಂಧು ಪೋರ್ಟಲ್ ನಲ್ಲಿ ಸಮರ್ಪಕವಾಗಿ ಅಪ್ಲೋಡ್ ಆಗುವಂತೆ ನೋಡಿಕೊಂಡು ಪರಿಹಾರ ದೊರಕಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಅರ್ಹ ಫಲಾನುಭವಿ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್ ನಲ್ಲಿ ಮಾತ್ರ ಅಗತ್ಯವಾದ ಮಾಹಿತಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದ್ದು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗಿರಬೇಕು. ವಿಳಾಸ ನಿಗದಿ ಪಡಿಸಿದ ಅರ್ಜಿ, ನಿಗದಿ ಪಡಿಸಿದ ಅಧಿಕಾರಿಗಳಿಂದ ವೃತ್ತಿ ಪ್ರಮಾಣ ಪತ್ರ ದೃಢೀಕರಿಸಿ, ಬ್ಯಾಂಕ್ ಖಾತೆ ವಿವರ, ವಿಳಾಸ, ದೃಡೀಕರಣ ಪತ್ರದ ಅಧಿಕೃತ ದಾಖಲೆ, ಬಿಪಿಎಲ್ ಸಂಖ್ಯೆ ಆಧಾರ್ ಕಾರ್ಡ್ ದೊಂದಿಗೆ ಅವಶ್ಯಕ ಮಾಹಿತಿಯೊಂದಿಗೆ ಅಪ್ಲೋಡ್ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಸೇವಾ ಸಿಂಧು ಕೇಂದ್ರದಲ್ಲಿ ಹಾಗೂ ಗ್ರಾಮ – 1 ರಲ್ಲಿ ಅರ್ಜಿಗಾಗಿ ರೂ. 25 ನಿಗದಿ ಪಡಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಫಲಾನುಭವಿ ಬಿಟ್ಟು ಹೋಗದಂತೆ ನೋಡಿಕೊಳ್ಳಲು ಅವರು ಸೂಚನೆ ನೀಡಿದರು.

ಈ ಸೌಲಭ್ಯ ಪಡೆಯಲು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಕಂದಾಯ ಅಧಿಕಾರಿಗಳು ಕಂದಾಯ ನಿರೀಕ್ಷಕರಿಂದ ಉದ್ಯೋಗ ಪ್ರಮಾಣ ಪತ್ರ ಪಡೆಯಬೇಕು. ‌ತಾಲೂಕು ಮಟ್ಟದಲ್ಲಿ ಕಂದಾಯ ಇಲಾಖೆ ತಹಸೀಲ್ದಾರರು, ಉಪತಹಸೀಲ್ದಾರರು, ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಹಮಾಲಿ ವೃತ್ತಿಯಲ್ಲಿ ತೊಡಗಿಕೊಂಡ ಕಾರ್ಮಿಕರು ಮೇಲೆ ಸೂಚಿಸಲಾದ ಅಧಿಕಾರಿಗಳು ಅಥವಾ ತಾವು ಕೆಲಸ ನಿರ್ವಹಿಸುತ್ತಿರುವ ಇಲಾಖೆ ಅಥವಾ ಮಂಡಳಿ ಇಲ್ಲವೇ ನಿಗಮದ ಅಧಿಕೃತ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಯಾವುದೇ ಇಲಾಖೆಯ ಪತ್ರಾಂಖಿತ ಅಧಿಕಾರಿಗಳಿಂದಲೂ ಉದ್ಯೋಗ ಪ್ರಮಾಣ ಪತ್ರ ಪಡೆಯಬಹುದಾಗಿದೆ.‌‌ಅರ್ಹ ಕಾರ್ಮಿಕರ ನಿಗದಿಪ ಡಿಸಿದ ವೃತ್ತಿ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿ ಖಚಿತಪಡಿಸಿಕೊಂಡು ಪ್ರಮಾಣಪತ್ರ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ಅನರ್ಹರಿಗೆ ಈ ಸೌಲಭ್ಯ ದೊರೆಯದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾಉ ಸೂಚನೆ ನೀಡಿದರು.

ಈ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಕಾರ್ಮಿಕ ನಿರೀಕ್ಷಕರಾದ ಜಗದೇವಿ ಸಜ್ಜನ, ಉಮಾ ಕೋಳಿ, ವಿಶ್ವ ಕರ್ಮ ಸಮಾಜದ ಮುಖಂಡರಾದ ಪ್ರಮೋದ ಬಡಿಗೇರ, ಶ್ರೀಕಾಂತ ಕುಂದಣಗಾರ, ಬಾಳು ಗೀರಗಾಂವಕರ, ಸಂತೋಷ ವಿಶ್ವಕರ್ಮ, ಕ್ಷೌರಿಕ ಸಮಾಜದ ಪಂಚಲಿಂಗ, ಗೃಹ ಕಾರ್ಮಿಕರ ಸಮಾಜದ ಮುಖಂಡರಾದ ಮಹಾದೇವಿ ಕಡ್ನಳ್ಳಿ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್. ಜಿ. ಖೈನೂರ ಸ್ವಾಗತಿಸಿದರು.

Leave a Reply

ಹೊಸ ಪೋಸ್ಟ್‌