ವಿಜಯಪುರ ಎಪಿಎಂಸಿಯಲ್ಲಿ ಮಾವಿನ ಹಣ್ಣುಗಳ ಖರೀದಿಗೆ ಜನರ ನಿರಾಸಕ್ತಿ- ವ್ಯಾಪಾರಿಗಳು ಕಂಗಾಲು

ವಿಜಯಪುರ: ಒಂದೆಡೆ ಕೊರೊನಾ ಮತ್ತೋಂದೆಡೆ ಲಾಕಡೌನ್ ನಿಂದಾಗಿ ಹಣ್ಣುಗಳ ರಾಜ ಮಾವನ್ನು ಕೇಳುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ವಿಜಯಪುರ ನಗರದ ಎಪಿಎಂಸಿಯಲ್ಲಿ ಭರಪೂರ ಮಾವು ಮಾರಾಟಕ್ಕೆ ಬಂದಿದೆ. ಆದರೆ, ಕೇಳುವವರೇ ಇಲ್ಲದಾಗಿದೆ.

ಬೇಸಿಗೆ ಬಂತೆಂದರೆ ಸಾಕು ತರಹೇವಾರಿ ತಳಿಯ ಮಾವುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ‌ಆದರೆ, ಈ ಬಾರಿಯೂ ಕೊರೊನಾ ಮತ್ತು ಲಾಕಡೌನ್ ನಿಂದಾಗಿ ಹಣ್ಣುಗಳ ರಾಜ ಮಾವಿನ ಹಣ್ಣುಗಳನ್ನು ಖರೀದಿಸುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಈಗ ಬೆಲೆ ಕುಸಿತದಿಂದಾಗಿ ಮಾವು ಬೆಳೆದ ಬೆಳೆಗಾರರು ಪರದಾಡುವಂತಾಗಿದೆ.

ವಿಜಯಪುರ ನಗರದ ಎಪಿಎಂಸಿ ಮಾರುಕಟ್ಟೆಗೆ ಆಂದ್ರ ಪ್ರದೇಶದ ಅನಂತಪುರ, ಅಹಿಂದಪುರ, ಕಲ್ಯಾಣದುರ್ಗ, ರಾಜ್ಯದ ಗೌರಿ ಬಿದನೂರ ಹೀಗೆ ಹಲವು ಜಿಲ್ಲೆಗಳಿಂದ ಮಾವಿನ ಹಣ್ಣುಗಳು ಬಂದಿವೆ. ಹೆಚ್ಚಿನ ಪ್ರಮಾಣದಲ್ಲಿ ಮಾವು ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಖರೀದಿಗೆ ಬರುತ್ತಿಲ್ಲ. ಈಗ ಮಳೆಗಾಲ ಆರಂಭವಾಗಿರುವ ಕಾರಣ ಜನರು ಕೂಡ ಮಾವು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಎ ಪಿ ಎಂ ಸಿ ವ್ಯಾಪಾರಿ ಶಾಹಿದ್ ಬಾಗವಾನ ಹೇಳುತ್ತಾರೆ.

ವಿಜಯಪುರ ಎ‌ ಪಿ ಎಂ ಸಿ ಮಾರುಕಟ್ಟೆಯಲ್ಲಿ ಬಾದಾಮ, ಆಪೂಸ್, ಬೇಮಿಷಾ, ಮಲ್ಲಿಕಾ, ತೋಟಾ, ರಾಜಗೇರಾ, ರಸಪುರಿ, ಕೇಸರ್, ದಸೇರಿ, ಮಲಹೋಬಾ, ನಾಟಿ ಹೀಗೆ ನಾನಾ ತಳಿಯ ಮಾವುಗಳು ಬಂದಿವೆ. ಆದರೆ, ಹವಾಮಾನ ವೈಪರಿತ್ಯ ಮತ್ತು ಮಳೆಯ ಕಾರಣದಿಂದಾಗಿ ಜನರು ಮಾವು ಖರೀದಿಸಲು ಆಗಮಿಸುತ್ತಿಲ್ಲ. ಹೀಗಾಗಿ ಕಡಿಮೆ ಬೆಲೆಯಲ್ಲಿಯೇ ಮಾವು ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ನಸುಕಿನ ಜಾವ 6 ರಿಂದ ಬೆಳಿಗ್ಗೆ 10 ಗಂಟೆಯ ವರೆಗೆ ಮಾತ್ರ ವ್ಯಾಪಾರ ಮಾಡಬೇಕಾದ ಹಿನ್ನಲೆಯಲ್ಲಿ ಜನರು ಕೂಡಾ ಖರೀದಿ ಮಾಡಲು ಆಗಮಿಸುತ್ತಿಲ್ಲ ‌ಎನ್ನುತ್ತಾರೆ ಮತ್ತೊಬ್ಬ ವ್ಯಾಪಾರಿ ರಫಿಕ ಬಾಗವಾನ.

ಒಟ್ಟಾರೆಯಾಗಿ ಕೊರೊಬಾ ಮತ್ತು ಲಾಕಡೌನ್ ನಿಂದಾಗಿ ಹಲವು‌ ಉದ್ಯಮಗಳು ನೆಲ ಕಚ್ಚಿರುವ ಬೆನ್ನಹಿಂದೆಯೇ ಮಾವು ಬೆಳೆಗಾರರು ಹಾಗೂ ವ್ಯಾಪಾರಿಗಳಿಗೂ ಸಾಕಷ್ಟು ಹೊಡೆತ ಬಿದ್ದಿದೆ. ಮಾವನ್ನು ನಂಬಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ವ್ಯಾಪಾರಸ್ಥರೂ ಈಗ ಈಗ ಪರದಾಡುವಂತಾಗಿದ್ದು ಕೂಡ ಸಧ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

Leave a Reply

ಹೊಸ ಪೋಸ್ಟ್‌