ವಿಜಯಪುರ- ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವುದಿಲ್ಲ ಎಂದು ವಿಜಯಪುರ ನಗರದ ಶಾಲೆಯೊಂದರ ಮಕ್ಕಳು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಣ ಸಚಿವರಿಗೆ ಪತ್ರವನ್ನೂ ಬರೆದಿದ್ದಾರೆ.
ಮೆಟ್ರಿಕ್ ಪರೀಕ್ಷೆಯನ್ನೇ ಬಹಿಷ್ಕರಿಸಲು ಮುಂದಾಗಿರುವ ಈ ವಿದ್ಯಾರ್ಥಿಗಳು, ಮಲ್ಟಿಪಲ್ ಚಾಯ್ಸ್ ಪರೀಕ್ಷೆಯನ್ನು ವಿರೋಧಿಸಿದ್ದಾರೆ.
ಪರೀಕ್ಷೆ ನಡೆಸಿದರೆ ನಾವು ಬರೆಯುವುದಿಲ್ಲ ಎಂದು ಹಠ ಹಿಡಿದಿರುವ ಈ ವಿದ್ಯಾರ್ಥಿಗಳು ಈ ಕುರಿತು ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಪತ್ರ ಬರೆದಿದ್ದಾರೆ. ಗುಮ್ಮಟನಗರಿ ವಿಜಯಪುರ ನಗರದ ವಿಕಾಸ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಧ್ಯದ ಪರೀಕ್ಷೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ತಮಗೆ ಮಲ್ಟಿಪಲ್ ಚಾಯ್ಸ್‌ನ ಪರೀಕ್ಷೆಯೇ ಬೇಡ. ಗ್ರೇಡ್ ಕೊಡುವ ಈ ಪರೀಕ್ಷೆಯೇ ತಮಗೆ ಬೇಕಿಲ್ಲ. ಲಿಖಿತ ರೂಪದಲ್ಲಿಯೇ 500 ಅಂಕಗಳ ಪರೀಕ್ಷೆ ನಡೆಸಿ. ತಮಗೆ ಬಹು ಆಯ್ಕೆಗಳ ಪರೀಕ್ಷೆ ಬೇಡವೇ ಬೇಡ. ಹಗಲು ರಾತ್ರಿ ಒಂದು ಮಾಡಿ ಅಭ್ಯಾಸ ಮಾಡಿದ್ದೇವೆ. ಶಿಕ್ಷಣ ಸಚಿವರ ನಿರ್ಧಾರದಿಂದ ನಮಗೆ ನೋವಾಗಿದೆ. ಮಲ್ಟಿಪಲ್ ಚಾಯ್ಸ್ ಪರೀಕ್ಷೆ ನಡೆಸಿದರೆ ಪರೀಕ್ಷೆ ಬರೆಯುವುದಿಲ್ಲ. ಬಹಿಷ್ಕರಿಸುತ್ತೇವೆ ಎಂದು ವಿದ್ಯಾರ್ಥಿನಿ ತನುಜಾ ರಾಠೋಡ ತಿಳಿಸಿದ್ದಾರೆ
ವಿಕಾಸ ಪ್ರೌಢ ಶಾಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಲಾಕ್‌ಡೌನ್ ಸಮಯದಲ್ಲಿ ತಲೆ ಕೆಡಿಸಿಕೊಂಡಿ ಓದಿದ್ದೀವಿ. ಗ್ರೇಡ್ ಅಂಕದಿಂದ ನಮಗೆ ಯಾವುದೇ ಉಪಯೋಗವಿಲ್ಲ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಈ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಮ್ಮ ಮಕ್ಕಳ ಅಳಲನ್ನು ಶಿಕ್ಷಣ ಸಚಿವರು ಮತ್ತು ಸರಕಾರ ಆಲಿಸಿ ಸ್ಪಂದಿಸಬೇಕು ಎಂದು ಪೋಷಕರಾದ ಗೋಪಾಲ ರಾಠೋಡ ಆಗ್ರಹಿಸಿದ್ದಾರೆ.