ಬಿಜೆಪಿ ಮುಖಂಡರು ಅಧಿಕಾರ ದಾಹ ಬಿಟ್ಟು ಕೊರೊನಾ, ಬೆಲೆ ಏರಿಕೆ ನಿಯಂತ್ರಿಸಲಿ- ಶಾಸಕ ಎಂ. ಬಿ. ಪಾಟೀಲ ವಾಗ್ದಾಳಿ

ಹಾವೇರಿ: ಕೊರೊನಾ ಸಂಕಷ್ಟ ಸಮಯದಲ್ಲಿ ಕೊರೊನಾ ನಿರ್ವಹಣೆ ಬಿಟ್ಟು ಬಿಜೆಪಿ ನಾಯಕರು ಅಧಿಕಾರ ದಾಹ ಪ್ರದರ್ಶಿಸುತ್ತಿದ್ದಾರೆ ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಆರೋಪಿಸಿದ್ದಾರೆ.

ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಮಾಡಿದ ಅವರು, ರಾಜ್ಯ ಸರಕಾರದಲ್ಲಿ ತಾಳ ಮೇಳ ಇಲ್ಲ. ಸಿಎಂ ಬದಲಾವಣೆ ಮಾಡಬೇಕು ಅಂತಾರೆ‌. ಪರಸ್ಪರ ಸಹಕಾರವಿಲ್ಲ. ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಸುವ ಕೆಲಸ ಮಾಡಬೇಕು. ಅಧಿಕಾರ ಖುರ್ಚಿ ಗಿರ್ಚಿ ನಂತರ ಎಂದು ಅವರು ಹೇಳಿದರು.

ಕೊರೊನಾದಿಂದಾಗಿ ಕೇಂದ್ರ ಸಚಿವ ಸುರೇಶ ಅಂಗಡಿಯವರನ್ನು ಕಳೆದುಕೊಂಡಿದ್ದೇವೆ. ಡಿಸಿಎಂ ಲಕ್ಷ್ಮಣ ಸವದಿಯವರ ಮನೆಯಲ್ಲಿ ಅವರ ಸಹೋದರನ ಮಗನನ್ನು ಕಳ್ಕೊಂಡಿದ್ದೇವೆ. ಖುರ್ಚಿ ಬಿಡ್ರಿ, ನಿಮ್ಮ ಮನೆ, ನಮ್ಮ ಮನೆಯಲ್ಲೂ ನೋವಾಗಿವೆ. ನರ್ಸ್, ವೈದ್ಯರು ಗಂಟೆಗಟ್ಟಲೆ ಪಿಪಿಇ ಕಿಟ್ ಹಾಕ್ಕೊಂಡು ನಮಗಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ವೈಫಲ್ಯ, ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದೀರಿ. ಕೇಂದ್ರ ಮತ್ತು ರಾಜ್ಯ ಸರಕಾರ ಅಧಿಕಾರದ ಮದದಲ್ಲಿವೆ. ಇವರು ಜನರ ಒಳಿತು ಬಯಸಿಲ್ಲ. ಈ ಸರಕಾರಗಳು ತೊಲಗಬೇಕು ಎಂದು ಅವರು ವಾಗ್ದಾಳಿ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕ‌ ಹಕ್ಕಿಲ್ಲ. ಕೊರೊನಾದಿಂದಾಗಿ ಲಕ್ಷಾಂತರ ಜನರ ಜೀವ ಕಳೆದಿದ್ದೀರಿ. ಲಕ್ಷಾಂತರ ಮಕ್ಕಳನ್ನು ಅನಾಥರನ್ನಾಗಿ ಮಾಡಿದ್ದೀರಿ. ಲಕ್ಷಾಂತರ ಕುಟುಂಬಗಳನ್ನು ಮುರಿದಿದ್ದೀರಿ. ಇದೆಲ್ಲದರ ಜೊತೆಗೆ ಜನರ ಮೇಲೆ ಭಾರ ಹಾಕಿದ್ದೀರಿ. ಇದು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ಸರಕಾರ ಎಂದು ವಾಗ್ದಾಳಿ ನಡೆಸಿದರು.

ಯುವಜನರು ಪ್ರಧಾನಿ ಮೋದಿ ಪರ ಇದ್ದರು.ಆದರೆ, ಅದೇ ಯುವಕರು ಈಗ ಬೈಕ್ ಓಡಿಸಲು ಪ್ರತಿ ಲೀಟರ್ ಪೆಟ್ರೋಲ್ ಗೆ ರೂ. 100 ತೆರಬೇಕಾಗಿದೆ. ಡಿಸೇಲ್ ಬೆಲೆ ಕೂಡ ರೂ. 100 ತಲುಪಿದೆ. ಇದರಿಂದ ರೈತರು ಮತ್ತು ಜನಸಾಮಾನ್ಯರೂ ಸಂಕಷ್ಟ ಎದುರಿಸುವಂತಾಗಿದೆ ಎಂದು ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಐ. ಜಿ. ಸನದಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌