ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ನಿಂದ 34 ಜನ ಗುಣಮುಖ, ಹಲವರ ಜೀವ, ದೃಷ್ಠಿ ರಕ್ಷಣೆ- ಉಪಕುಲಪತಿ ಡಾ. ಆರ್. ಎಸ್. ಮುಧೋಳ

ವಿಜಯಪುರ: ಕೊರೊನಾ ನಂತರ ಕಾಣಿಸಿಕೊಂಡಿರುವ ಬ್ಲಾಕ್ ಫಂಗಸ್ (ಮೈಕಾರಮಿಕೊಸಿಸ್) ಕಾಯಿಲೆಯಿಂದ ಬಳಲಿದ ಹಲವರ ಜೀವ ಮತ್ತು ದೃಷ್ಠಿಯನ್ನು ರಕ್ಷಿಣೆ ಮಾಡಲಾಗಿದೆ ಎಂದು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.

ತಾವು ಸ್ವತಃ ಇ ಎನ್ ಟಿ ಸರ್ಜನ್ ಆಗಿ 40 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿದ್ದೇನೆ. ತಮ್ಮ ಸುಧೀರ್ಘ ಸೇವಾವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದು ಇದೇ ಮೊದಲು. ಈ ಹಿಂದೆ ತೀವ್ರತರ ಸಕ್ಕರೆ ಕಾಯಿಲೆ ಇರುವ 1-2 ರೋಗಿಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಈ ಕಾಯಿಲೆ ಇದೀಗ ಕೊರೊನಾ ನಂತರ ವ್ಯಾಪಕವಾಗಿ ಕಂಡು ಬಂದಿದೆ. ಬಿ ಎಲ್ ಡಿ‌ ಇ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಸಲಹೆ ಮತ್ತು ನಿರಂತರ ಬೆಂಬಲದಿಂದಾಗಿ ಇಡೀ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ನಾವು ಪ್ರತ್ಯೇಕ ಬ್ಲಾಕ್ ಫಂಗಸ್ ವಾರ್ಡ್ ನ್ನು
ಆರಂಭಿಸಿದ್ದೇವೆ. ಇದುವರೆಗೂ 125 ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಿದ್ದು, 34 ಬ್ಲಾಕ್ ಫಂಗಸ್ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈವರೆಗೆ ದಾಖಲಾದ ಒಟ್ಟು ಬ್ಲಾಕ್ ಫಂಗಸ್ ರೋಗಿಗಳಲ್ಲಿ ಶೇ.50 ರೋಗಿಗಳಿಗೆ ನೇತ್ರದ ಭಾಗವು ಫಂಗಸ್ ನಿಂದ ಬಾಧಿತವಾಗಿತ್ತು. ಇ ಎನ್ ಟಿ ವಿಭಾಗದ ಅತ್ಯುತ್ತಮ ಸೇವೆಯಿಂದಾಗಿ ಕೇವಲ ಎರಡು ರೋಗಿಗಳಿಗೆ ಮಾತ್ರ ದೃಷ್ಠಿ ಹಾನಿಯಾಗಿದ್ದು, ಉಳಿದ ಎಲ್ಲ ರೋಗಿಗಳನ್ನು ದೃಷ್ಠಿ ಸಮೇತ ಗುಣಪಡಿಸಲಾಗಿದೆ. ಈ ಮೂಲಕ ಇ ಎನ್ ಟಿ ವಿಭಾಗದ ಡಾ. ಲತಾದೇವಿ ಎಚ್. ಟಿ. ಮತ್ತು ಡಾ. ಆರ್. ವಿ. ಕರಡಿ ಅವರ ನೇತೃತ್ವದ ವೈದ್ಯರ ತಂಡ ಉತ್ತಮ ಕೆಲಸ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

125 ರೋಗಿಗಳಲ್ಲಿ ಮೂರು ರೋಗಿಗಳಿಗೆ ಮಿದುಳಿಗೆ ಫಂಗಸ್ ಆವರಿಸಿದ ಕಾರಣ ಸಾವನಪ್ಪಿದ್ದಾರೆ.

ಉಳಿದವರೆಲ್ಲರೂ ಗುಣಮುಖರಾಗಿದ್ದು, ಸದ್ಯ 85 ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತೀ ಕಡಿಮೆ ಬಳಕೆಯಾಗುವ ಎಂಡೋಸ್ಕೋಪಿಕ್ ಸೈನಸ್ ಸರ್ಜರಿಗಳನ್ನು ಇಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ಜರ್ಮನಿಯಲ್ಲಿ ತಯಾರಿಸಿದ ರೂ. 30 ಲಕ್ಷ ವೆಚ್ಚದ ಅತ್ಯುನ್ನತ ಉಪಕರಣಗಳನ್ನು ತರಿಸಲಾಗಿದ್ದು, ಮೈಕ್ರೊಡಿಬ್ರೆಡಾರ್ ಎಂಬ ಉಪಕರಣದಿಂದ ಫಂಗಸ್ ನ್ನು ತೆಗೆಯಲು ಸಾಧ್ಯವಾಗಿದೆ ಎಂದು ಡಾ. ಆರ್. ಎಸ್. ಮುಧೋಳ ಮಾಹಿತಿ ನೀಡಿದ್ದಾರೆ.

ವಿಜಯಪುರ ಜಿಲ್ಲಾಡಳಿತ ಕೂಡ ಕಾಲ-ಕಾಲಕ್ಕೆ ಬ್ಲಾಕ್ ಫಂಗಸ್ ಗೆ ಅಗತ್ಯವಿರುವ ಎಂಪೋಟೆರಿಸಿಯನ್ ಎಂಜೆಜಕ್ಷನ್ ಒದಗಿಸುವ ಮೂಲಕ ನೆರವು ನೀಡಿದೆ. ಒಟ್ಟಿನಲ್ಲಿ ಎಲ್ಲರೂ ಭಯಭೀತರಾಗಿದ್ದ ಬ್ಲಾಕ್ ಫಂಗಸ್ ಕಾಯಿಲೆಗೆ ಉತ್ತಮ ಚಿಕಿತ್ಸೆ ಇಲ್ಲಿಯೇ ಒದಗಿಸಿದ ತೃಪ್ತಿ ತಮಗಿದೆ. ಕೊರೊನಾ ಕಾಯಿಲೆ ಕಡಿಮೆಯಾದಂತೆ ಬ್ಲಾಕ್ ಫಂಗಸ್ ರೋಗಿಗಳ ಸಂಖ್ಯೆಯಲ್ಲಿಯೂ ಕಡಿಮೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೊರೊನಾ ನಂತರದ ಚಿಕಿತ್ಸೆಯಲ್ಲಿರುವವರು ಕಣ್ಣು ಊತ, ದೃಷ್ಠಿಯಲ್ಲಿ ದೋಷ, ದವಡೆಯಲ್ಲಿ ನೋವು, ಮೂಗಿನಲ್ಲಿ ಹಕ್ಕಳೆ, ರಕ್ತ ಸ್ರಾವ, ತಲೆ ನೋವು, ಮುಖದಲ್ಲಿ ಬಾವು ಕಂಡು ಬಂದರೆ ತಕ್ಷಣ ಬಿ ಎಲ್ ಡಿ ಇ ಆಸ್ಪತ್ರೆ ರೂಂ ನಂ.9 ರಲ್ಲಿ ಭೇಟಿಯಾಗಿ ಚಿಕಿತ್ಸೆ ಸೌಲಭ್ಯ ಪಡೆದುಕೊಳ್ಳಬೇಕು. ದಿನದ 24 ಗಂಟೆಯೂ ಈ ಕಾಯಿಲೆ ಉಪಚಾರಕ್ಕಾಗಿ ಆಸ್ಪತ್ರೆಯಲ್ಲಿ ಸೇವೆ ಲಭ್ಯವಿದೆ ಎಂದು ಉಪಕುಲಪತಿ ಡಾ. ಆರ್. ಎಸ್. ಮುಧೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಶಾಸಕ ಎಂ. ಬಿ. ಪಾಟೀಲ ಅವರು ಬ್ಲಾಕ್ ಫಂಗಸ್ ಕಾಯಿಲೆಯಲ್ಲಿ ರೋಗಿಗಳ ದೃಷ್ಠಿ ಹಾಗೂ ಜೀವ ಉಳಿಸಿದ ಬಿ ಎಲ್ ಡಿ ಇ.ಎನ್.ಟಿ ವಿಭಾಗದ ವೈದ್ಯರ ಸಾಧನೆಯನ್ನು ಪ್ರಶಂಸಿಸಿ, ವೈಯಕ್ತಿಕವಾಗಿ ಅಭಿನಂದಿಸಿದ್ದಾರೆ.

Leave a Reply

ಹೊಸ ಪೋಸ್ಟ್‌