ಕೊರೊನಾ 3ನೇ ಅಲೆಯಿಂದ ತಮ್ಮ ಮಕ್ಕಳನ್ನು ರಕ್ಷಿಸಲು ಪಿಲೇಕಮ್ಮನ ಮೊರೆ ಹೋದ ಮಹಿಳೆಯರು

ವಿಜಯಪುರ: ಕೊರೊನಾ ಎರಡನೇ ಅಲೆಯಿಂದ ಜನ ಈಗಾಗಲೇ ಸಂಕಷ್ಟದಲ್ಲಿದ್ದು, ಮೂರನೇ ಅಲೆಯ ಬಗ್ಗೆಯೂ ಆತಂಕದಲ್ಲಿದ್ದಾರೆ. ಅದರಲ್ಲೂ ಕೊರೊನಾ 3ನೇ ಅಲೆ ಮಕ್ಕಳನ್ನು ಕಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿರುವುದು ಪೋಷಕರು ಅದರಲ್ಲೂ ತಾಯಂದಿರು ಮತ್ತು ಮಹಿಳೆಯರನ್ನು ಹೆಚ್ಚು ಚಿಂತಾಕ್ರಾಂತರನ್ನಾಗಿ ಮಾಡಿದೆ.

ಕೊರೊನಾ ಎರಡನೇ ಅಲೆಯ ಪ್ರಭಾವ ಕಡಿಮೆಯಾಗುತ್ತಿದ್ದರೂ ಸಂಭವನೀಯ ಮೂರನೇ ಅಲೆಯ ಭೀತಿ ಜನರನ್ನು ಕಾಡುತ್ತಿರುವುದರಿಂದ 3ನೇ ಅಲೆ ಪ್ರಭಾವ ಮಕ್ಕಳ ಮೇಲೆ. ಬೀರಬಾರದು ಎಂಬ ಸದುದ್ದೇಶದಿಂದ ಗ್ರಾಮಸ್ಥರು ಪಿಲೇಕಮ್ಮ ದೇವಿಯ ಮೊರೆ ಹೋಗಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಮಹಿಳೆಯರು ವೀರೇಶ್ವರ ಸರ್ಕಲ್ ಬಳಿ ಇರುವ ಪಿಲೇಕಮ್ಮ ದೇವಸ್ಥಾನಕ್ಕೆ ಕಳೆದ ಸೋಮವಾರದಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರತಿದಿನ ದೇವಿಗೆ ನೈವೇದ್ಯ ಅರ್ಪಿಸುತ್ತಿದ್ದಾರೆ. ಅಷ್ಟೇ ಅಲ್ಲ, ಹಾಡು ಹೇಳುತ್ತ ಭಜನೆ ಕೂಡ ಮಾಡುತ್ತಿದ್ದಾರೆ.

ಪ್ರತಿದಿನ ಸಂಜೆ ದೇವಸ್ಥಾನಕ್ಕೆ ಆಗಮಿಸುವ ಮಹಿಳೆಯರು ಕೊರೊನಾ ಮೂರನೇ ಅಲೆಯಿಂದ ತಮ್ಮನ್ನು ಹಾಗೂ ತಮ್ಮ ಮಕ್ಕಳನ್ನು ರಕ್ಷಿಸುವಂತೆ ಭಜನೆ ಮಾಡುತ್ತಿದ್ದಾರೆ. ಪ್ರತಿದಿನ ಸಂಜೆಯಿಂದ ರಾತ್ರಿಯವರೆಗೆ ಸುಮಾರು ನಾಲ್ಕು ಗಂಟೆಗಳ ಕಾಲ ಇಲ್ಲಿ ಪಿಲೇಕಮ್ಮ ದೇವಸ್ಥಾನದಲ್ಲಿ ಭಜನೆ ನಡೆಯುತ್ತಿದ್ದು, ಐದು ದಿನಗಳ ಕಾಲ ಈ ಕಾರ್ಯಕ್ರಮ ಆಯೋಜಿಸಿದ್ದಾರೆ.

ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ 3ನೇ ಅಲೆ ತಮ್ಮ ಮಕ್ಕಳ ಮೇಲೆ ಯಾವುದೇ ರೀತಿ ಪರಿಣಾಮ ಬೀರಬಾರದು. ತಮ್ಮ ಮಕ್ಕಳನ್ನು ಕಾಪಾಡು. ತಮ್ಮ ಕುಟುಂಬವನ್ನು ಕೊರೊನಾ ಮೂರನೇ ಅಲೆಯಿಂದ ರಕ್ಷಿಸು ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ವಿನಾಯಕ ನಗರದ ಮಹಿಳೆಯರು ತಾಯಿ ಪಿಲೇಕಮ್ಮ ದೇವಿಯ ಮೊರೆ ಹೋಗಿದ್ದಾರೆ.

ಶಿವಲಿಂಗಮ್ಮ ಬಿರಾದಾರ, ಅಕ್ಕಮ ಗಂಗನಗೌಡರ, ರೇಣುಕಾ ಹಳಮನಿ, ಗುರಬಾಯಿ ಹುನಗುಂದ, ಸುಜಾತ ಹಳಮನಿ, ಮಲಮ್ಮ ಗಂಗನಗೌಡರ, ಶಿವಲೀಲಾ ಗಂಗನಗೌಡರ, ಶಿವಲಿಲ್ಲಾ ಹಳಮನಿ, ನಿಲ್ಲಮ್ಮ ಗಂಗನಗೌಡರ, ಸವಿತಾ ಗಂಗನಗೌಡರ, ಮಹಾನಂದ ಕಸಬೆಗೌಡರ, ಶೈಲಾ ಶಮಕುರತಿ ಮತ್ತು ಇತರ ಮಹಿಳೆಯರು ಕಳೆದ ನಾಲ್ಕು ದಿನಗಳಿಂದ ಪಿಲೇಕಮ್ಮ ಮೊರೆ ಹೋಗಿ ನೈವೇದ್ಯ ಅರ್ಪಿಸಿ ಭಜನೆ ಮಾಡುತ್ತಿದ್ದು, ಈ ವೃತ ಐದನೇ ದಿನವಾದ ಶುಕ್ರವಾರ ಮುಕ್ತಾಯವಾಗಲಿದೆ.

Leave a Reply

ಹೊಸ ಪೋಸ್ಟ್‌