ಬೆಂಗಳೂರು: ಕೊರೊನಾ ಮೊದಲ ಮತ್ತು ಎರಡನೇ ಅಲೆಗಳ ಅಂತರದಲ್ಲಿ ರಾಜ್ಯ ಸರಕಾರ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟು ಕೋವಿಡ್ ಸವಾಲನ್ನು ಯಶಸ್ವಿಯಾಗಿ ಎದುರಿಸಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಸಚಿವ ವಿ ಸೋಮಣ್ಣ ಅವರು ಏರ್ಪಡಿಸಿದ್ದ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ದೊಡ್ಡ ಸಾವು ನೋವು ಉಂಟು ಮಾಡಿದೆ. ಅದನ್ನು ಸರಕಾರ ಸವಾಲಾಗಿ ಸ್ವೀಕರಿಸಿ ಅದರಲ್ಲಿ ಬಹಳಷ್ಟು ಯಶಸ್ಸು ಕಂಡಿದೆ. ಅದರ ಪರಿಣಾಮವಾಗಿ ಈಗ ಕೊರೊನಾ ಸಂಪೂರ್ಣ ನಿಯಂತ್ರಣದಲ್ಲಿದೆ. ಕೊರೊನಾ ಮೊದಲ ಮತ್ತು ಎರಡನೇ ಅಲೆಗಳ ಸಂದರ್ಭದಲ್ಲಿ ರಾಜ್ಯ ಸರಕಾರ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನು ಇಟ್ಟಿದೆ. ಸರಕಾರಿ ಆಸ್ಪತ್ರೆಗಳಲ್ಲಿ 24000 ಆಕ್ಸಿಜನ್ ಬೆಡ್ ಗಳನ್ನು ಸಿದ್ದಪಡಿಸಿದೆ. 5000 ವೆಂಟಿಲೇಟರ್ ಬೆಡ್ ಗಳನ್ನು ಸಿದ್ದ ಮಾಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಕೊರೊನಾ ಸೋಂಕಿತರಿಗೆ ಸಮರ್ಪಕವಾಗಿ ಔಷಧಿ ನೀಡಲಾಗಿದೆ. ಬಡವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಎಲ್ಲ ರೀತಿಯ ಚಿಕಿತ್ಸೆಯನ್ನು ನೀಡಿದ್ದೇವೆ. ಈ ಮೂಲಕ ಸರಕಾರ ಸಮರ್ಥವಾಗಿ ಕೊರೊನಾ ಎರಡನೇ ಅಲೆಯನ್ನು ಎದುರಿಸಿದೆ ಎಂದು ಬೊಮ್ಮಾಯಿ ಹೇಳಿದರು.
ಸಚಿವ ವಿ. ಸೋಮಣ್ಣ ಅವರು ಬಡವರಿಗಾಗಿ ಉಚಿತವಾಗಿ ದಿನಸಿ ಕೀಟಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಜನ ಅಷ್ಟೇ ಅಲ್ಲ, ದೇವರು ಮೆಚ್ಚುವಂತ ಕೆಲಸ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ ಅವರು, ಸಚಿವ ವಿ. ಸೋಮಣ್ಣ ಅವರು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಗಲಿರುಳು ಕೆಲಸ ಮಾಡಿದ್ದಾರೆ. ಅವರಿಗೆ ಕೇವಲ ಒಂದು ಕ್ಷೇತ್ರದ ಜವಾಬ್ದಾರಿಯಿಲ್ಲ. ಬೆಂಗಳೂರಿನ ಏಳೆಂಟು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿಯಿದೆ. ಎಲ್ಲ ಕ್ಷೇತ್ರಗಳಲ್ಲೂ ಅವರು ಅತೀ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಇದು ಅವರ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಹಗಲು ರಾತ್ರಿ ಒಂದಾಗಿ ಕೆಲಸ ಮಾಡುವ ಮಹಾನಾಯಕ ಸೋಮಣ್ಣ ಎಂದು ಬೊಮ್ಮಾಯಿ ಬಣ್ಣಿಸಿದರು.