ನೀಲಕಂಠ ಬಡಚಿ
ವಿಜಯಪುರ: ದೇಶದಲ್ಲಿ 1857 ರ ಸಮಯದಲ್ಲಿ ನಡೆದ ಸ್ವಾತಂತ್ರ ಸಂಗ್ರಾಮ ರಾಷ್ಟ್ರದ ಅನೇಕ ಪರಾಕ್ರಮಿಗಳು ಪ್ರಜ್ವಲಿಸಲು ಸಾಕ್ಷಿಯಾಗಿದೆ. ಅಂಥ ಪರಾಕ್ರಮಿಗಳಲ್ಲಿ ರಣರಾಗಿಣಿಯಾದ ಝಾನ್ಸಿರಾಣಿ ಲಕ್ಷ್ಮೀಬಾಯಿ ಎಲ್ಲರಿಗೂ ಆದರ್ಶಪ್ರಾಯಳಾಗಿದ್ದಾಳೆ. ಒಬ್ಬ ಮಹಿಳೆಯಾಗಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಮಹಿಳೆ. ಅವಳ ಪರಾಕ್ರಮದ ವೀರಗಾಥೆಯನ್ನು ಅವಳ ಬಲಿದಾನದಿನದಂದು ತಿಳಿದುಕೊಂಡು ನಮ್ಮಲ್ಲಿನ ರಾಷ್ಟ್ರಭಕ್ತಿ ಮತ್ತು ಧರ್ಮಪ್ರೇಮವನ್ನು ಜಾಗೃತಗೊಳಿಸುವುದು ಇಂದು ಅಗತ್ಯವಾಗಿದೆ.
ಎರಡನೇ ಬಾಜೀರಾವ್ ಪೇಶ್ವೆಯವರ ಸಂಬಂಧಿ ಚಿಮಾಜೀ ಅಪ್ಪಾ ಅವರ ವ್ಯವಸ್ಥಾಪಕರಾಗಿದ್ದ ಮೋರೋಪಂಥ ತಾಂಬೆ ಮತ್ತು ಭಗೀರಥಿ ಬಾಯಿಯವರಿಗೆ 19ನೇ ನವೆಂಬರ 1835 ರಂದು ಹೆಣ್ಣು ಮಗುವಿಗೆ ಮಣಿಕರ್ಣಿಕಾ ಎಂದು ನಾಮಕರಣ ಮಾಡಲಾಯಿತು. ಮೋರೋಪಂಥರು ಅವಳನ್ನು ಪ್ರೀತಿಯಿಂದ ಮನುತಾಯಿ ಎಂದು ಕರೆಯುತ್ತಿದ್ದರು. ಮನುತಾಯಿಯು ನೋಡಲು ತುಂಬಾ ಸುಂದರವಷ್ಟೇ ಅಲ್ಲ ಬುದ್ಧಿವಂತೆಯೂ ಆಗಿದ್ದಳು. ಮನುತಾಯಿ ಮೂರ್ನಾಲ್ಕು ವರ್ಷದವಳಿರುವಾಗಲೇ ತನ್ನ ತಾಯಿಯನ್ನು ಕಳೆದುಕೊಂಡಳು. ಮುಂದೆ ಬ್ರಹ್ಮಾವರ್ತಾದ ಎರಡನೇ ಬಾಜೀರಾವ ಪೇಶ್ವೆಯವರ ಆಶ್ರಯದಲ್ಲಿ ಬೆಳೆದಳು.
ಬ್ರಹ್ಮಾವರ್ತಾದಲ್ಲಿ ನಾನಾಸಾಹೇಬ ಪೇಶ್ವೆ ತಮ್ಮ ಬಂಧುಗಳಾದ ರಾವಸಾಹೇಬರೊಂದಿಗೆ ಕತ್ತಿವರಸೆ, ಬಂದೂಕು ಚಲಾಯಿಸುವುದು ಮತ್ತು ಕುದುರೆ ಸವಾರಿ ವಿದ್ಯೆಯನ್ನು ಕಲಿಯುತ್ತಿದ್ದರು. ಮನುತಾಯಿಯೂ ಕೂಡ ಅವರೊಂದಿಗೆ ಎಲ್ಲ ಯುದ್ಧಕಲೆಗಳನ್ನು ಕಲಿತು ಅದರಲ್ಲಿ ನೈಪುಣ್ಯತೆಯನ್ನು ಪಡೆದಳು. ಮನುತಾಯಿ ಏಳು ವರ್ಷದವಳಿದ್ದಾಗಲೇ ಝಾನ್ಸೀ ಸಂಸ್ಥಾನದ ಅಧಿಪತಿ ಗಂಗಾಧರರಾವ ನೆವಾಲಕರ ಅವರೊಂದಿಗೆ ವಿವಾಹ ನಡೆಯಿತು. ನಂತರ ಮನುತಾಯಿ ಝಾನ್ಸಿ ರಾಣಿಯಾದಳು.
ವಿವಾಹದ ನಂತರ ಮನುತಾಯಿಯನ್ನು ಲಕ್ಷ್ಮೀಬಾಯಿ ಎಂದು ಕರೆಯಲಾಯಿತು. ರಾಣಿ ಲಕ್ಮೀಬಾಯಿಯು ಒಂದು ಗಂಡು ಮಗುವಿಗೆ ಜನ್ಮನೀಡಿದಳು. ಪುತ್ರನ ಜನನದಿಂದ ಅಧಿಕಾರಕ್ಕೆ ವಾರಸುದಾರ ಸಿಕ್ಕನೆಂದು ಗಂಗಾಧರರಾವ ತುಂಬಾ ಸಂತಸಪಟ್ಟರು. ಆದರೆ ಆ ಮಗು ತಿಂಗಳಿರುವಾಗಲೇ ಅಸುನೀಗಿತು. ಪುತ್ರವಿಯೋಗವನ್ನು ಸಹಿಸದೆ ಗಂಗಾಧರರಾವ ಅಸ್ವಸ್ಥರಾದರು. ಗಂಗಾಧರರಾವ ಅವರ ಇಚ್ಛೆಯಂತೆ ವಾರಸುದಾರನಾಗಿ ನೆವಾಳಕರ ವಂಶದ ಆನಂದರಾವನನ್ನು ದತ್ತು ಪಡೆದು ಅವನಿಗೆ ದಾಮೋದಾರರಾವ ಎಂದು ಹೆಸರಿಟ್ಟರು. ದತ್ತು ಪಡೆದ ಕೆಲವು ದಿನಗಳಲ್ಲಿಯೇ ಗಂಗಾಧರರಾವ ನಿಧನರಾದರು. ಪತಿಯ ಮರಣದಿಂದ ರಾಣಿ ಲಕ್ಮೀಬಾಯಿಯು ತನ್ನ 18 ನೇ ವಯಸ್ಸಿನಲ್ಲಿಯೇ ವಿಧವೆಯಾದಳು.
ಆ ಸಂದರ್ಭದಲ್ಲಿ ಆಂಗ್ಲರು ಹೊರಡಿಸಿದ ಹೊಸ ಆಜ್ಞೆಯಂತೆ ದತ್ತುಪುತ್ರನಿಗೆ ರಾಜ್ಯವಾಳುವ ಹಕ್ಕಿಲ್ಲ ಎಂಬ ಕಾಯಿದೆಯ ಬಗ್ಗೆ ರಾಣಿ ಲಕ್ಷ್ಮೀಬಾಯಿಗೆ ತಿಳಿಸಲು ಆಂಗ್ಲ ಅಧಿಕಾರಿ ಮೇಜರ ಎಲಿಸ್ ಝಾನ್ಸಿಗೆ ಭೇಟಿಗೆ ಬಂದನು. ರಾಣಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಝಾನ್ಸಿಯನ್ನು ವಶಪಡಿಸಿಕೊಳ್ಳುವುದಾಗಿ ತಿಳಿಸಿದನು. ರಾಣಿಯು ಸಿಂಹಿಣಿಯಂತೆ ಗರ್ಜಿಸುತ್ತಾ ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ ಎಂದು ಹೇಳಿದಳು. ಇದನ್ನು ಕೇಳಿದ ಮೇಜರ್ ಎಲಿಸ್ ಭಯಭೀತನಾಗಿ ಬರಿಗೈಯಲ್ಲಿ ಹಿಂದಿರುಗಿದನು.
1857ರ ಜನೇವರಿಯಲ್ಲಿ ಆರಂಭವಾದ ಸ್ವಾತಂತ್ರ ಸಂಗ್ರಾಮವು ಮೇ 10ನೇ ತಾರೀಖಿನಂದು ಮೀರತ್ ಗೆ ಕಾಲಿಟ್ಟಿತು. ಬರೇಲಿಯು ಕೂಡಲೇ ಆಂಗ್ಲರಿಂದ ಸ್ವತಂತ್ರವಾಯಿತು. ರಾಣಿ ಲಕ್ಮೀಬಾಯಿಯು ಆಂಗ್ಲರ ಸಂಭವನೀಯ ಹಲ್ಲೆಯಿಂದ ಝಾನ್ಸಿಯ ರಕ್ಷಣೆಗಾಗಿ ಸಿದ್ಧತೆಯನ್ನು ಮಾಡತೊಡಗಿದಳು. ಆಂಗ್ಲರೊಂದಿಗಿನ ಯುದ್ಧದಲ್ಲಿ ರಾಣಿಯು ತನ್ನ ದತ್ತು ಪುತ್ರ ದಾಮೋದರನನ್ನು ಬೆನ್ನಿಗೆ ಕಟ್ಟಿಕೊಂಡು ಜಯ, ಜಯ ಶಂಕರ ಎಂಬ ಘೋಷಣೆಯೊಂದಿಗೆ ಆಂಗ್ಲ ಸೇನೆಯನ್ನು ಭೇಧಿಸಿ ಮುನ್ನಡೆದಳು. ಈ ಯುದ್ಧದಲ್ಲಿ ತಂದೆ ಮೋರೋಪಂತರು ಆಂಗ್ಲರಿಗೆ ಸೆರೆ ಸಿಕ್ಕು ಅವರನ್ನು ನೇಣಿಗೇರಿಸಲಾಯಿತು.
ಜೂ. 16 ರಂದು ಆಂಗ್ಲರ ಸೈನ್ಯವು ಗ್ವಾಲಿಯರ್ ತಲುಪಿತು. ರಾಣಿ ಲಕ್ಷ್ಮೀಬಾಯಿ ಮತ್ತು ಪೇಶ್ವೆಯವರು ಸರ್ ಹ್ಯೂ ರೋಜ್‌ನನ್ನು ಎದುರಿಸಲು ಸಿದ್ಧರಾದರು. ಗ್ವಾಲಿಯರ್‌ನ ಪೂರ್ವ ಭಾಗವನ್ನು ರಕ್ಷಿಸುವ ಸಂಪೂರ್ಣ ಹೊಣೆ ರಾಣಿಯ ಮೇಲಿತ್ತು. ಜೂ. 18 ರಂದು ರಾಣೀ ಲಕ್ಷ್ಮೀಬಾಯಿಯ ಶೌರ್ಯದಿಂದ ಹತಾಶರಾದ ಆಂಗ್ಲರು ಗ್ವಾಲಿಯರನ್ನು ಎಲ್ಲ ದಿಕ್ಕುಗಳಿಂದ ಆಕ್ರಮಿಸಿದರು. ಆಗ ರಾಣಿಯು ಆಂಗ್ಲರಿಗೆ ಶರಣಾಗದೆ ಅವರ ಕಣ್ಗಾವಲನ್ನು ಭೇದಿಸಿ ಹೊರಗೆ ಹೋಗಲು ನಿರ್ಧರಿಸಿದಳು. ಶತ್ರುಗಳ ಸೈನ್ಯವನ್ನು ಭೇದಿಸಿ ಹೊರ ಹೋಗುವಾಗ ಒಂದು ನೀರಿನ ಪ್ರವಾಹ ನಡುವೆ ಬಂದಿತು. ರಾಣಿಯ ಬಳಿ ಯಾವಾಗಲೂ ಇರುವ ಕುದುರೆ ರಾಜರತ್ನ ಇರದ ಕಾರಣ ಮತ್ತೊಂದು ಕುದುರೆಯ ಜೊತೆ ರಾಣಿಯು ಯುದ್ಧಕ್ಕೆ ಇಳಿದಿದ್ದಳು. ಆ ಕುದುರೆಗೆ ನೀರಿನ ಪ್ರವಾಹ ದಾಟಲು ಸಾಧ್ಯವಾಗದೆ ಅಲ್ಲಿಯೇ ಸುತ್ತಲು ಶುರುಮಾಡಿತು. ಮುಂದೇನಾಗಬಹುದೆಂದು ಅರಿತ ರಾಣಿ ತನ್ನನ್ನು ಬೆಂಬತ್ತಿ ಬರುತ್ತಿದ್ದ ಸೈನ್ಯವನ್ನು ಎದುರಿಸಿದಳು. ಆಕೆಗೆ ಮೇಲೆ ನಡೆದ ಧಾಳಿಯಿಂದಾಗಿ ಗಾಯಗೊಂಡಳು. ಪುರುಷರ ವೇಷ ಧರಿಸಿದ್ದ ಕಾರಣ ಸೈನಿಕರಿಗೆ ಆಕೆ ರಾಣಿ ಎಂಬುದು ತಿಳಿಯಲಿಲ್ಲ. ಹಾಗಾಗಿ ಅವಳು ಬಿದ್ದ ತಕ್ಷಣ ಆಂಗ್ಲರು ಹೊರಟು ಹೋದರು. ರಾಣಿಯ ಸೇವಕರು ಅವಳನ್ನು ಸಮೀಪವಿದ್ದ ಗಂಗಾದಾಸರ ಮಠಕ್ಕೆ ಕರೆದುಕೊಂಢು ಹೋದರು ಮತ್ತು ಗಂಗಾಜಲವನ್ನು ನೀಡಿದರು. ತನ್ನ ಶರೀರ ಆಂಗ್ಲರ ಕೈಗೆ ಸಿಗಬಾರದೆಂಬ ಇಚ್ಛೆಯನ್ನು ವ್ಯಕ್ತಪಡಿಸಿ ರಾಣಿಯು ವೀರಮರಣ ಹೊಂದಿದರು.
ಇಂದು ಜೂ. 18 ಝಾನ್ಸಿರಾಣಿ ಲಕ್ಷ್ಮಿಬಾಯಿ ಹುತಾತ್ಮಳಾದ ದಿನ. ರಾಣಿ ಲಕ್ಷ್ಮೀಬಾಯಿಯ ಶೌರ್ಯವು ನಮಗೆ ಸ್ಪೂರ್ತಿಯನ್ನು ನೀಡಿದೆ. ಇಂತಹ ವೀರಾಂಗನೆ ರಾಣಿ ಲಕ್ಷ್ಮೀಬಾಯಿಯ ಚರಣಗಳಲ್ಲಿ ಬಲಿದಾನದ ನಿಮಿತ್ತ ನಮನಗಳು.
(ಈ ಲೇಖನದಲ್ಲಿ ಪ್ರಕಟವಾದ ಮಾಹಿತಿ ಲೇಖಕರದ್ದು ಮತ್ತು ಫೋಟವನ್ನು ಲೇಖಕರು Google SCOOPWHOOP ಕೃಪೆಯಿಂದ ಅವರೇ ಒದಗಿಸಿದ್ದಾರೆ.)