ವೀಕೆಂಡ್ ಕರ್ಫ್ಯೂ ಆರಂಭ- ವಿಜಯಪುರ ಜಿಲ್ಲೆಯಲ್ಲಿ ಯಾವುದಕ್ಕೆಲ್ಲ ಅವಕಾಶವಿದೆ- ಜಿಲ್ಲಾಧಿಕಾರಿ ಮಾಹಿತಿ

ವಿಜಯಪುರ: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂ ವಿಜಯಪುರ ಜಿಲ್ಲೆಯಲ್ಲಿಯೂ ಆರಂಭವಾಗಿದೆ. ಶುಕ್ರವಾರ ಸಂ. 7 ರಿಂದ ಸೋಮವಾರ ಬೆ. 5 ರವರೆಗೆ ಈ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಈ ಸಮಯದಲ್ಲಿ ಸಾರ್ವಜನಿಕರು ಪಾಲಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ.

ಮಾರ್ಗಸೂಚಿಗಳು ಇಂತಿವೆ.

ತುರ್ತು, ಅಗತ್ಯ ಸೇವೆಗಳು ಮತ್ತು ಕೋವಿಡ್- 19 ಕಂಟೈನ್‌ಮೆಂಟ್ ಮತ್ತು ಮ್ಯಾನೇಜ್‌ಮೆಂಟ್
ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರದ ಕಚೇರಿಗಳು ಮತ್ತು ಅವುಗಳ
ಸ್ವಾಯತ್ತ ಸಂಸ್ಥೆಗಳು, ನಿಗಮ ಇತ್ಯಾದಿಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅನಿಯಂತ್ರಿತ ಸಂಚಾರಕ್ಕೆ ಅವಕಾಶವಿರುತ್ತದೆ.

ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಮತ್ತು ದಿನದ 24 ಗಂಟೆಗಳ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು, ಕಂಪನಿಗಳು, ಸಂಸ್ಥೆಗಳು ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಅಂಥ ಸಂಸ್ಥೆಗಳ ನೌಕರರು ಆಯಾ ಸಂಸ್ಥೆ ನೀಡುವ ಮಾನ್ಯತೆ ಹೊಂದಿರುವ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅನುಮತಿ ನೀಡಲಾಗಿದೆ. ಆದರೂ, ಸಾಧ್ಯವಾದಷ್ಟು ಮಟ್ಟಿಗೆ ನೌಕರರನ್ನು ಮನೆಯಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು.

ಟೆಲಿಕಾಂನ ನೌಕರರು ಮತ್ತು ವಾಹನಗಳು ಮತ್ತು ಇಂಟರ್ನೆಟ್ ಸೇವೆ ಒದಗಿಸುವವರು ತಮ್ಮ ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದಾಗಿದೆ. ಅಗತ್ಯ ಐಟಿ, ಐಟಿಇಸ್ ಕಂಪನಿಗಳ, ಸಂಸ್ಥೆಗಳ ಸಿಬ್ಬಂದಿಗಳು ಮಾತ್ರ ಕಚೇರಿಯಿಂದ ಮತ್ತು ಬಾಕಿ ಉಳಿದ ಸಿಬ್ಬಂದಿಗಳು ಮನೆಯಿಂದ ಕಾರ್ಯ ನಿರ್ವಹಿಸಬೇಕು.

ತುರ್ತು ಸೇವೆಗೆ ತೆರಳುವವರು ಅಗತ್ಯವಿರುವ ರೋಗಿಗಳು ಮತ್ತು ಅವರ ಪರಿಚಾರಕರು ಅಥವಾ ಸಂಬಂಧಿಸಿದ ವ್ಯಕ್ತಿಗಳು ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಉದ್ದೇಶಿಸಿರುವ ಅರ್ಹರಿಗೆ ಕನಿಷ್ಠ ಪುರಾವೆಗಳೊಂದಿಗೆ ಸಂಚಾರ ಮಾಡಲು ಅನುಮತಿಯನ್ನು ನೀಡಲಾಗಿದೆ.

ಅದೇ ರೀತಿ, ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ, ಮೀನು, ಡೈರಿ ಮತ್ತು ಹಾಲಿನ ಬೂತ್‌ಗಳು ಮತ್ತು ಮೇವು ಮಾರಾಟ ಮಾಡುವ ಅಂಗಡಿಗಳಿಗೆ ಬೆ. 6 ರಿಂದ ಮ. 2 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.

ಬೆ. 6 ರಿಂದ ಮ. 2ರ ವರೆಗೆ ಕಾರ್ಯ ನಿರ್ವಹಿಸಲು ಬೀದಿ ಬದಿ ಮಾರಾಟಗಾರರಿಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ನ್ಯಾಯಬೆಲೆ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಇದೇ ಸಮಯದಲ್ಲಿ ಸ್ಟ್ಯಾಂಡಿಂಗ್ ಅಲೋನ್ ಮದ್ಯದಂಗಡಿಗಳು ಮತ್ತು ಮಳಿಗೆಗಳು ಪಾರ್ಸಲ್ ವ್ಯವಸ್ಥೆಗೆ ಮಾತ್ರ ಅನುಮತಿಸಲಾಗಿದೆ. ಜನರು ಹೊರಗಡೆ ತಿರುಗಾಡುವುದನ್ನು ತಪ್ಪಿಸಲು ಎಲ್ಲಾ ವಸ್ತುಗಳ ದಿನದ 24 ಗಂಟೆಗಳ ಕಾಲ ಮನೆಗೆ ವಿತರಣೆಯನ್ನು ಕೊರೊನಾ ಮಾರ್ಗಸೂಚಿ ಪಾಲಿಸುವ ಮೂಲಕ ಮಾಡಬಹುದಾಗಿದೆ. ರೆಸ್ಟೋರೆಂಟ್ ಮತ್ತು ತಿನಿಸು ಅಂಗಡಿಗಳಿಂದ ಪಾರ್ಸಲ್ ತೆಗೆದುಕೊಂಡು ಹೋಗಲು ಮತ್ತು ಮನೆಗೆ ತಲುಪಿಸಲು ಮಾತ್ರ ಅನುಮತಿ ನೀಡಲಾಗಿದೆ.

ರೈಲುಗಳ ಓಡಾಟ, ವಿಮಾನಗಳ ಸಂಚಾರಕ್ಕೆ ಅನುಮತಿ ನೀಡವಲಾಗಿದೆ. ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳನ್ನು ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‌ಗಳು ಹಾಗೂ ನಿಲ್ದಾಣಗಳಿಗೆ ಪ್ರಯಾಣದ ಟಿಕೆಟ್‌ಗಳನ್ನು ಮಕ್ಕು ದಾಖಲೆಗಳನ್ನು ತೋರಿಸುವುದರೊಂದಿಗೆ ಸಂಚಾರ ಮಾಡಲು ಅನುಮತಿ ನೀಡಲಾಗಿದೆ.

ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ಆಯಾ ಮನೆಯವರ ಮುಂದೆ ಸಂಬಂಧಿಕರನ್ನು ಒಳಗೊಂಡಂತೆ ಗರಿಷ್ಠ 40 ಸಮ್ಮುಖದಲ್ಲಿ ಮಾತ್ರ ನಡೆಸಲು ಮತ್ತು ರಾಜ್ಯ ಸರಕಾರದ ಕೊರೊನಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ನಡೆಸಲು ಅನುಮತಿ ನೀಡಲಾಗಿದೆ.

ಶವಸಂಸ್ಕಾರ ಅಥವಾ ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರೊಂದಿಗೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ನೆರವೇರಿಸಲು ಅನುಮತಿ ನೀಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌